ಬಾನಾಡಿಗಳ ಬದುಕು ಕಸಿದ ಪಟಾಕಿ ಬಾಣ!

7
ಗಾಯಗೊಂಡಿದ್ದ 28 ಪಕ್ಷಿಗಳ ರಕ್ಷಣೆ

ಬಾನಾಡಿಗಳ ಬದುಕು ಕಸಿದ ಪಟಾಕಿ ಬಾಣ!

Published:
Updated:
Deccan Herald

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಮೋಜಿಗಾಗಿ ಸಿಡಿಸುವ ಪಟಾಕಿ ಬಾನಾಡಿಗಳ ಬದುಕನ್ನೂ ಕಿತ್ತುಕೊಳ್ಳುತ್ತಿದೆ. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಹತ್ತಾರು ಹಕ್ಕಿಗಳು ಸತ್ತಿದ್ದರೆ, ಗಾಬರಿಗೊಳಗಾಗಿದ್ದ ವಿವಿಧ ಜಾತಿಯ 28 ಹಕ್ಕಿಗಳನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯರು ನಗರದಲ್ಲಿ ರಕ್ಷಿಸಿದ್ದಾರೆ.

‘ಈ ಬಾರಿ ದೀಪಾವಳಿಯ ಹಬ್ಬದ ವೇಳೆ ಪಾಲಿಕೆಯ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯರಿಗೆ ಹಕ್ಕಿಗಳ ಸಂರಕ್ಷಣೆ ಕುರಿತು 60ಕ್ಕೂ ಹೆಚ್ಚು ಕರೆಗಳು ಬಂದಿವೆ. 28 ಹಕ್ಕಿಗಳನ್ನು ಸಂರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ವನ್ಯಜೀವಿಗಳ ಪುನರ್ವಸತಿ ಕೇಂದ್ರಗಳಿಗೆ ಒಪ್ಪಿಸಿದ್ದೇವೆ. ಅನೇಕ ಕಡೆ ನಮ್ಮ ತಂಡದ ಸದಸ್ಯರು ತಲುಪುವ ಮುನ್ನವೇ ಹಕ್ಕಿಗಳು ಸತ್ತಿವೆ. ಇನ್ನು ಕೆಲವೆಡೆ ಗಲಿಬಿಲಿಗೊಳಗಾದ ಹಕ್ಕಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಟ್ಟಿದ್ದೇವೆ’ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಬಾರಿ ಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿವೆ. ಶಿವಾಜಿನಗರ, ವಿಲ್ಸನ್‌ ಗಾರ್ಡನ್‌, ಕೆಂಗೇರಿ, ಗೋರಿಪಾಳ್ಯಗಳಲ್ಲಿ ಹದ್ದುಗಳು ಗಾಯಗೊಂಡಿದ್ದವು. ಮಡಿವಾಳ ಕೆರೆಯ ಬಳಿ ಒಂದು ಗದ್ದೆ ಕೊಕ್ಕರೆ ಹಾಗೂ ನೀರು ಕಾಗೆ ಅಪಾಯದಲ್ಲಿ ಸಿಲುಕಿತ್ತು. ಮಹಾತ್ಮ ಗಾಂಧಿ ರಸ್ತೆ ಬಳಿ ಕಣಜ ಗೂಬೆಯೊಂದನ್ನು ರಕ್ಷಣೆ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಕಾಗೆ, ಹದ್ದು, ಗೊರವಂಕದಂತಹ ಹಕ್ಕಿಗಳು ನಗರದ ವಾತಾವರಣಕ್ಕೆ ಒಗ್ಗಿಕೊಂಡಿವೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸದ್ದು ಮೊಳಗುತ್ತಿದ್ದಂತೆಯೇ ಅವುಗಳಲ್ಲಿ ತಳಮಳ ಶುರುವಾಗುತ್ತದೆ. ಈ ಅಸಹಜ ವಿದ್ಯಮಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯುವುದಿಲ್ಲ. ಭಾರಿ ಸದ್ದಿನಿಂದ ಕಕ್ಕಾಬಿಕ್ಕಿಯಾಗುವ ಹಕ್ಕಿಗಳು ದಿಕ್ಕಾಪಾಲಾಗಿ ಹಾರಾಡಿ ಸಿಕ್ಕ ಸಿಕ್ಕ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಗಾಯಗೊಳ್ಳುತ್ತವೆ. ಅನೇಕ ಹಕ್ಕಿಗಳು ಹೃದಯಾಘಾತದಿಂದ ಅಸುನೀಗುತ್ತವೆ. ಈ ಸಲವೂ ಅನೇಕ ಕಡೆ ಕಾಗೆಗಳು ಸತ್ತಿವೆ’ ಎಂದು ಅವರು ವಿವರಿಸಿದರು.

‘ನಾಗವಾರದ ಟ್ರೀಪಾರ್ಕ್‌ನಲ್ಲಿ ಸಾವಿರಾರು ಪಕ್ಷಿಗಳು ನೆಲೆಸಿವೆ. ಸ್ಥಳೀಯವಾಗಿ ವಲಸೆ ಹೋಗುವ ಬೆಳ್ಳಕ್ಕಿಗಳು ಮುಸ್ಸಂಜೆ ಹೊತ್ತಿಗೆ ಇಲ್ಲಿನ ಗೂಡಿಗೆ ಮರಳುತ್ತವೆ. ದೀಪಾವಳಿ ಸಂದರ್ಭದಲ್ಲಿ ಹಾರಿಸಿದ ರಾಕೆಟ್‌ ಒಂದು ಗೂಡಿನತ್ತ ಮರಳುತ್ತಿದ್ದ ಈ ಹಕ್ಕಿಗಳ ಗುಂಪಿನತ್ತ ಹಾರಿತ್ತು. ಈ ಅನಿರೀಕ್ಷಿತ ದಾಳಿಯಿಂದ ಹಕ್ಕಿಗಳು ಚದುರಿ ಹೋದವು. ಗುಂಪಿನಿಂದ ಬೇರ್ಪಟ್ಟ ಒಂದು ಹಕ್ಕಿಯ ಚಡಪಡಿಕೆ ಬೇಸರ ತರಿಸುವಂತಿತ್ತು’ ಎಂದು ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಮೋಹನ್‌ ತಿಳಿಸಿದರು.

‘ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಾವಳಿಯಿಂದಾಗಿ ಗೂಬೆ, ಬಾವಲಿಗಳಂತಹ ನಿಶಾಚರಿ ಹಕ್ಕಿಗಳು ಅನುಭವಿಸುವ ಸಂಕಟವನ್ನು ಮಾತಿನಲ್ಲಿ ವಿವರಿಸುವುದು ಕಷ್ಟ. ಭಾರಿ ಸದ್ದು, ಹಾಗೂ ಬೆಳಕಿನ ಮಾಲಿನ್ಯದ ಕಾರಣದಿಂದಾಗಿ ಅವುಗಳು ಆಹಾರ ಹುಡುಕಲು ಸಮಸ್ಯೆ ಎದುರಿಸುತ್ತವೆ’ ಎಂದು ಅವರು ವಿವರಿಸಿದರು.  

ಸೂಕ್ಷ್ಮಜೀವಿಗಳಾದ ಹಕ್ಕಿಗಳ ಸಂವಹನ ನಡೆಯುವುದೇ ಸದ್ದಿನ ಮೂಲಕ. ಪಟಾಕಿಯ ಅಸಹಜ ಸದ್ದು ಅವುಗಳ ಸಂವಹನ ಕ್ರಿಯೆಯ ಮೇಲೂ ಪ್ರಭಾವ ಬೀರುತ್ತದೆ ಎನ್ನುವುದು ಪಕ್ಷಿಶಾಸ್ತ್ರಜ್ಞರ ಅಭಿಪ್ರಾಯ.

ಕೆಲವು ಜಾತಿಯ ಹಕ್ಕಿಗಳಿಗೆ ಈಗ ಸಂತಾನೋತ್ಪತ್ತಿಯ ಕಾಲ. ಇಂತಹ ಸಮಯದಲ್ಲಿ  ಗಂಡು–ಹೆಣ್ಣು ಹಕ್ಕಿಗಳು ಶಿಳ್ಳೆ ಹಾಡುಗಳ ಮೂಲಕ  ಸಂಭಾಷಣೆ ನಡೆಸುತ್ತವೆ. ಪಟಾಕಿಯ ಸದ್ದು ಅವುಗಳ ಸಂವಹನ ಪ್ರಕ್ರಿಯೆಯ ಮೇಲೂ ಪರಿಣಾಮವನ್ನು ಉಂಟುಮಾಡುತ್ತದೆ. ಪಟಾಕಿ ಸಿಡಿಸಿದಾಗ ಉಂಟಾಗುವ ಕಂಪನವೂ ಅವುಗಳಿಗೆ ಹಾನಿ ಉಂಟು ಮಾಡಬಲ್ಲುದು.

ಗಾಯಗೊಂಡಿದ್ದ ಕೋತಿ ಸಾವು

ದೀಪಾವಳಿ ಸಂದರ್ಭದಲ್ಲಿ ಸಿಡಿಸಿದ ಸುಡುಮದ್ದು ಕೋತಿಯೊಂದರ ಜೀವವನ್ನೇ ಕಿತ್ತುಕೊಂಡಿದೆ.

‘ಥಣಿಸಂದ್ರದ ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಪಟಾಕಿ ಸದ್ದಿನಿಂದ ಬೆದರಿದ್ದ ಕೋತಿ ಕಟ್ಟಡದಿಂದ ಕಟ್ಟಕ್ಕೆ ಹಾರುವ ವೇಳೆ ಬಿದ್ದು ಗಾಯಗೊಂಡಿತ್ತು. ಅದನ್ನು ಸಂರಕ್ಷಿಸಿ ಚಿಕಿತ್ಸೆ ಕೊಡಿಸಿದ್ದೆವು. ಆದರೆ, ಚಿಕಿತ್ಸೆ ಫಲಿಸದೆ ಅದು ಮೃತಪಟ್ಟಿದೆ’ ಎಂದು ಮೋಹನ್‌ ತಿಳಿಸಿದರು.

‘ಬನಶಂಕರಿಯ ಬಳಿ ಪಟಾಕಿ ಸಿಡಿದು ಕೋತಿಯಿಂದರ ಕಾಲಿಗೆ ಗಾಯವಾಗಿತ್ತು. ಅದನ್ನು ರಕ್ಷಿಸಲು ಮುಂದಾಗಿದ್ದೆವು. ಆದರೆ, ಅದು ನಮ್ಮ ಕೈಗೆ ಸಿಗಲಿಲ್ಲ. ಬನ್ನೇರುಘಟ್ಟ ರಸ್ತೆಯಲ್ಲಿ ಕೋತಿಯೊಂದರ ಬೆನ್ನಿಗೆ ಗಾಯವಾಗಿದೆ. ಅದನ್ನು ಹಿಡಿದು ಚಿಕಿತ್ಸೆ ಸಲುವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೇವೆ’ ಎಂದರು.

ರಕ್ಷಿಸಲಾದ ಹಕ್ಕಿಗಳು
7 ಹದ್ದು, 13 ಕಾಗೆ, 4 ಗೊರವಂಕ (ಮೈನಾ), 1 ಕಣಜ ಗೂಬೆ, 2 ಕೊಳದ ಬಕ, 1 ನೀರುಕಾಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !