ಸಿಂಗಪುರಕ್ಕೆ ಕರೆದೊಯ್ದು ಪತಿಯ ಕಿಡ್ನಿ ಮಾರಿದ್ದ ತಾರಾ!

7
ಸೊಪ್ಪು ಮಾರುವ ಮಹಿಳೆಯ ತಲೆಕೆಡಿಸಿದ್ದ ಆರೋಪಿ

ಸಿಂಗಪುರಕ್ಕೆ ಕರೆದೊಯ್ದು ಪತಿಯ ಕಿಡ್ನಿ ಮಾರಿದ್ದ ತಾರಾ!

Published:
Updated:

ಮಂಡ್ಯ: ಕಿಡ್ನಿ ಮಾರಾಟ ಜಾಲದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿ ತಾರಾ, 2016ರಲ್ಲಿ ಪತಿ ನಾಗೇಂದ್ರ ಅವರನ್ನು ಸಿಂಗಪುರ ಪ್ರವಾಸಕ್ಕೆಂದು ಕರೆದೊಯ್ದು ಕಿಡ್ನಿ ಮಾರಾಟ ಮಾಡಿರುವ ವಿಷಯವನ್ನು ಪೊಲೀಸ್‌ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ.

ಮಳವಳ್ಳಿ ಪಟ್ಟಣದ ಎಂಇಎಸ್‌ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಕಿಡ್ನಿ ಮಾರಾಟ ದಂಧೆ ನಡೆಸುತ್ತಿದ್ದ ತಂಡದ ಜೊತೆ ತಾರಾ ಸಂಪರ್ಕದಲ್ಲಿದ್ದಳು. ರಾಮನಗರ ಹಾಗೂ ಬೆಂಗಳೂರಿನಲ್ಲಿ ಈ ತಂಡ ಕಿಡ್ನಿ ಮಾರಾಟ ಮಾಡುವಂತೆ ಬಡವರ ಮನವೊಲಿಸುತ್ತಿತ್ತು. ಇದಕ್ಕಾಗಿ ತಂಡದ ಸದಸ್ಯರು ಕಮಿಷನ್‌ ಪಡೆಯುತ್ತಿದ್ದರು. ಆಶ್ಚರ್ಯವೆಂದರೆ ತಾರಾ ಕೂಡ ಈ ತಂಡಕ್ಕೆ ಬಲಿಪಶುವಾಗಿದ್ದು, ತನ್ನ ಕಿಡ್ನಿಯನ್ನೂ ಮಾರಾಟ ಮಾಡಿದ್ದಾಳೆ.

ಪತಿ ಆತ್ಮಹತ್ಯೆ: ಪತಿ ನಾಗೇಂದ್ರ ಅವರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ದಿದ್ದ ತಾರಾ, ಆರೋಗ್ಯ ತಪಾಸಣೆ ನೆಪದಲ್ಲಿ ಕಿಡ್ನಿ ಮಾರಾಟ ಮಾಡಿದ್ದರು. ಈ ವಿಷಯ ಅವರಿಗೆ ಗೊತ್ತೇ ಇರಲಿಲ್ಲ. ಅನಾರೋಗ್ಯ ಕಾರಣಕ್ಕೆ ಈಚೆಗೆ ನಾಗೇಂದ್ರ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್‌ ಮಾಡಿಸಿದಾಗ ದೇಹದಲ್ಲಿ ಒಂದು ಕಿಡ್ನಿ ಇಲ್ಲದಿರುವುದು ಪತ್ತೆಯಾಗಿದೆ. ಕೆ.ಆರ್‌.ಆಸ್ಪತ್ರೆ ವೈದ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ ಕೆ.ಆರ್‌.ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ತನ್ನ ಕಿಡ್ನಿಯನ್ನೂ ಮಾರಾಟ ಮಾಡಿಕೊಂಡಿದ್ದ ತಾರಾ, ಮನೆಮಂದಿಯ ಕಿಡ್ನಿ ಮಾರಾಟಕ್ಕೂ ಯತ್ನಿಸುತ್ತಿದ್ದರು. ಕಿಡ್ನಿ ಮಾರಾಟ ಮಾಡಿ ತಾನೂ ಆರೋಗ್ಯವಾಗಿ ಇರುವುದಾಗಿ ತಿಳಿಸುತ್ತಿದ್ದರು. ಅದರಂತೆ ತನ್ನ ತಂಗಿ ಜ್ಯೋತಿಯನ್ನು ಶ್ರೀಲಂಕಾಗೆ ಕರೆದೊಯ್ದು ಕಿಡ್ನಿ ಮಾರಿಸಿದ್ದಳು.

ತಲೆಕೆಡಿಸಿದ್ದರು: ತಾರಾಳಿಂದ ವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಳವಳ್ಳಿ ಗಂಗಾಮತಸ್ಥರ ಬೀದಿಯ ಮಹಿಳೆ ವೆಂಕಟಮ್ಮ ಸೊಪ್ಪು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸೊಪ್ಪು ಮಾರುತ್ತಾ ಎಂಇಎಸ್‌ ಬಡಾವಣೆಗೆ ತೆರಳಿದಾಗ ತಾರಾ ಪರಿಚಯವಾಗಿತ್ತು. ಸೊಪ್ಪು ಕೊಳ್ಳುವ ನೆಪದಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಅವರ ಕಷ್ಟ ಕೇಳಿ ಕಿಡ್ನಿ ಮಾರಾಟ ಮಾಡಿದರೆ ₹ 30 ಲಕ್ಷ ಕೊಡಿಸುವುದಾಗಿ ನಂಬಿಸಿ, ₹ 3 ಲಕ್ಷ ಕಮಿಷನ್‌ ಕೊಡುವಂತೆ ಪೀಡಿಸಿದ್ದರು. ವೆಂಕಟಮ್ಮ ಸಾಲ ಮಾಡಿ ₹ 2.80 ಲಕ್ಷ ಹಣ ಕೊಟ್ಟಿದ್ದರು.

2017, ಏ.5ರಂದು ಬೆಂಗಳೂರಿನಲ್ಲಿ ಕಿಡ್ನಿ ಕೊಡುವ ಯೋಜನೆ ತಯಾರಾಗಿತ್ತು. ಆದರೆ ಅದು ಕೈಗೂಡಲಿಲ್ಲ. ನಂತರ ಸಬೂಬು ಹೇಳುತ್ತಾ ತಾರಾ ಸಮಯ ಮುಂದೂಡುತ್ತಿದ್ದಳು. ಸಾಲಗಾರರ ಕಾಟ ತಾಳಲಾಗದೆ ವೆಂಕಟಮ್ಮ ಕಿಡ್ನಿ ಮಾರಾಟ ಬೇಡ, ಹಣ ವಾಪಸ್‌ ಕೊಡುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ತಾರಾ ಆಕೆಯನ್ನು ನಿಂದಿಸಿ, ಹಣ ಕೊಟ್ಟಿರಲಿಲ್ಲ. ಇದರಿಂದ ನೊಂದ ವೆಂಕಟಮ್ಮ ದೊಡ್ಡಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್‌ ವಿಚಾರಣೆ ವೇಳೆ ತಿಳಿದು ಬಂದಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !