ದಾಭೋಲ್ಕರ್ ಹತ್ಯೆಗೂ ಬಂಗೇರನಿಂದ ತರಬೇತಿ!

7
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ l ಆಗಲೂ ಭರತ್ ಜಮೀನಿನಲ್ಲೇ ನಡೆದಿತ್ತು ತರಬೇತಿ

ದಾಭೋಲ್ಕರ್ ಹತ್ಯೆಗೂ ಬಂಗೇರನಿಂದ ತರಬೇತಿ!

Published:
Updated:
 ನರೇಂದ್ರ ದಾಭೋಲ್ಕರ್

ಬೆಂಗಳೂರು: ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಂತಕರಿಗೂ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಿದ್ದು ಮಡಿಕೇರಿಯ ರಾಜೇಶ್ ಬಂಗೇರ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರನಾಗಿರುವ ಬಂಗೇರ, ಎಸ್‌ಐಟಿ ವಿಚಾರಣೆ ವೇಳೆ ಈ ಸಂಗತಿ ಬಾಯ್ಬಿಟ್ಟಿದ್ದಾನೆ.‌

‘ಬಂಗೇರನಿಗೆ ಮಡಗಾಂವ್‌ ಸ್ಫೋಟ ಪ್ರಕರಣದ ಆರೋಪಿ ರುದ್ರಪಾಟೀಲ್, ಸಾರಂಗ ಅಕೋಲ್ಕರ್, ವಿನಯ್ ಪವಾರ್, ವೀರೇಂದ್ರ ತಾವಡೆ ಸೇರಿದಂತೆ ಕೆಲ ಶಂಕಿತರ ಭಾವಚಿತ್ರಗಳನ್ನು ತೋರಿಸಿದೆವು. ಆಗ, ‘ತಾವಡೆ ಹಾಗೂ ಅವರ ಕೆಲ ಸಹಚರರಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟಿದ್ದು ನಾನೇ. 2012ರ ಮೇ ಹಾಗೂ ಜೂನ್ ತಿಂಗಳಲ್ಲಿ ಬೆಳಗಾವಿಯ ಜಾಂಬೋಟಿಯಲ್ಲಿರುವ ಭರತ್ ಕುರ್ನೆಯ ಜಮೀನಿನಲ್ಲೇ ತರಬೇತಿ ಕೆಲಸ ನಡೆದಿತ್ತು’ ಎಂದು ಆತ ಹೇಳಿಕೆ ಕೊಟ್ಟಿದ್ದಾಗಿ ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಗೇರ ಹೇಳಿದ್ದೇನು: ‘ಅಮೋಲ್ ಕಾಳೆ ಹಾಗೂ ಅಮಿತ್ ದೆಗ್ವೇಕರ್ ಇದ್ದ ಆಶ್ರಮಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದೆ. ಅವರ ಮೂಲಕವೇ ತಾವಡೆಯ ಪರಿಚಯವಾಗಿತ್ತು. ನನಗೆ ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ಸಂಪೂರ್ಣ ಜ್ಞಾನವಿರು‌ವುದು ಅವರಿಗೆ ಗೊತ್ತಿತ್ತು.’

‘ಧರ್ಮ ರಕ್ಷಣೆಯ ಉಪದೇಶ ನೀಡುತ್ತಿದ್ದ ತಾವಡೆ, ‘ನಿನ್ನನ್ನು ನೋಡಿದರೆ ಸಾಕ್ಷ್ಯಾತ್ ವಿಷ್ಣುವನ್ನೇ ನೋಡಿದಂತಾಗುತ್ತದೆ. ನಿನ್ನ ಕೈಲಿರುವ ಬಂದೂಕು, ವಿಷ್ಣುವಿನ ಕೈಲಿರುವ ಸುದರ್ಶನ ಚಕ್ರಕ್ಕೆ ಸಮ. ಧರ್ಮರಕ್ಷಣೆಯ ಕೆಲಸ ಆಗಬೇಕಿದೆ. ಶಸ್ತ್ರಾಸ್ತ್ರ ಬಳಸುವುದನ್ನು ನಮಗೂ ಹೇಳಿಕೊಡು’ ಎಂದಿದ್ದರು. ಅದಕ್ಕೆ ಒಪ್ಪಿಕೊಂಡು ತರಬೇತಿ ಕೊಟ್ಟಿದ್ದೆ’ ಎಂದು ಬಂಗೇರ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ಹೇಳಿದರು.

‘ತಾವಡೆ ಬಿಟ್ಟು ಬೇರೆ ಯಾರ ಅಸಲಿ ಹೆಸರುಗಳೂ ನನಗೆ ಗೊತ್ತಿಲ್ಲ. ವಡಾಪಾವ್, ದಾದಾ, ಬಡಾಸಾಬ್, ಬಾಯ್‌ಸಾಬ್ ಎಂದೇ ಒಬ್ಬರನ್ನೊಬ್ಬರು ಕರೆದುಕೊಳ್ಳುತ್ತಿದ್ದರು. ಈಗ ಅವರ ಮುಖಚಹರೆಯೂ ನನಗೆ ನೆನಪಿಲ್ಲ’ ಎಂದಿದ್ದಾನೆ. ಈ ಎಲ್ಲ ಮಾಹಿತಿಗಳನ್ನೂ ಸಿಬಿಐ ಜತೆ ಹಂಚಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಶಸ್ತ್ರಾಸ್ತ್ರ ತಯಾರಕರು?: ‘ಇತ್ತೀಚೆಗೆ ಮಹಾರಾಷ್ಟ್ರದ ಎಟಿಎಸ್ ಬಲೆಗೆ ಬಿದ್ದಿರುವ ಸುಧನ್ವ ಗೊಂಧಾಳೇಕರ್, ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಸ್ನೇಹಿತನ ಶರದ್ ಕಲಾಸ್ಕರ್ ಜತೆ ಸೇರಿ ಶಸ್ತ್ರಾಸ್ತ್ರ ಮಾರಾಟ ದಂಧೆಯನ್ನೂ ನಡೆಸುತ್ತಿದ್ದ. ಈ ನಡುವೆ ಶರದ್ ಹಾಗೂ ಸುಧನ್ವ ತಾವೇ ಶಸ್ತ್ರಾಸ್ತ್ರ ತಯಾರಿಸಿ ಮಾರಾಟ ಮಾಡಲಾರಂಭಿಸಿದ್ದರು. ಕಾಳೆ ಬಳಿ ಸಿಕ್ಕ ಡೈರಿಯಲ್ಲಿ ಅವರಿಬ್ಬರ ಸಂಪೂರ್ಣ ವಿವರವಿದೆ. ಗೌರಿ ಹತ್ಯೆಯಲ್ಲೂ ಇವರ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

**

ಜಿಲೆಟಿನ್ ಕಡ್ಡಿ ನಾಲೆಗೆ ಎಸೆದ

‘ಬಂಗೇರ ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕ್ಕೆ ಬಳಸುವ ಮದ್ದಿನ ಪುಡಿಯನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ. ಕಾಳೆ ಎಸ್‌ಐಟಿ ಬಲೆಗೆ ಬೀಳುತ್ತಿದ್ದಂತೆಯೇ ಅವುಗಳನ್ನು ಮಡಿಕೇರಿಯ ನಾಲೆಯೊಂದರಲ್ಲಿ ಎಸೆದಿದ್ದ. ಇದಕ್ಕೆ ಪೂರಕ ಸಾಕ್ಷ್ಯಗಳು ದೊರೆತಿವೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

**

‘ಪದ್ಮಾವತ್’ಗೆ ವಿರೋಧ; ಸ್ಫೋಟಕ್ಕೆ ಸಂಚು

‘ದೀಪಿಕಾ ಪಡುಕೋಣೆ ನಟನೆಯ ‘ಪದ್ಮಾವತ್’ ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದ ಕಾಳೆ ನೇತೃತ್ವದ ಗ್ಯಾಂಗ್, ಬಿಡುಗಡೆ ದಿನ ರಾಜ್ಯದ ಹಲವಡೆ ಪೆಟ್ರೋಲ್ ಬಾಂಬ್ ದಾಳಿ ನಡೆಸುವುದಕ್ಕೂ ಸಂಚು ರೂಪಿಸಿತ್ತು’ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು.

‘ಧಾರವಾಡದ ಅರಣ್ಯ ಪ್ರದೇಶವೊಂದರಲ್ಲಿ ಪೆಟ್ರೋಲ್ ಬಾಂಬ್‌ಗಳನ್ನೂ ತಯಾರಿಸಿಕೊಂಡಿದ್ದ ಆರೋಪಿಗಳು, ಈಗ ದಾಳಿ ನಡೆಸಿದರೆ ವಿಚಾರವಾದಿಗಳ ಹತ್ಯೆಯ ಕಾರ್ಯಾಚರಣೆಗೆ ತೊಂದರೆ ಆಗಬಹುದೆಂದು ಕೊನೆಕ್ಷಣದಲ್ಲಿ ಯೋಜನೆ ಕೈಬಿಟ್ಟಿದ್ದರು. ಇದನ್ನು ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಒಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !