ಶುಕ್ರವಾರ, ಮೇ 29, 2020
27 °C

ಪೊಲೀಸ್‌ ಅಧಿಕಾರಿಗಳಿಗೆ ಎಸಿಬಿ ಕುಣಿಕೆ: ನಿರೀಕ್ಷಣಾ ಜಾಮೀನಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾದ ಆರೋಪಕ್ಕೆ ಸಿಲುಕಿರುವ ಶಿವಮೊಗ್ಗ ಡಿವೈಎಸ್‌ಪಿ ಸುದರ್ಶನ್, ಗ್ರಾಮಾಂತರ ಸಿಪಿಐ ಕುಮಾರಸ್ವಾಮಿ ಹಾಗೂ ಪಿಎಸ್ಐ ಭಾರತಿ ಅವರು ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ ಶುಕ್ರವಾರ ಈ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಕೆಲವು ದಿನಗಳ ಹಿಂದೆ ಅಕ್ರಮವಾಗಿ ಮರಳು ಸಾಗಣೆಗೆ ಸಹಕರಿಸಲು ಚನ್ನಗಿರಿಯ ಫಿರೋಜ್ ಪಾಷ ಎನ್ನುವವರಿಂದ ಗ್ರಾಮಾಂತರ ಠಾಣೆಯ ಮುಖ್ಯ ಕಾನ್‌ಸ್ಟೆಬಲ್ ಯಲ್ಲಪ್ಪ ₹ 17,500 ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದರು.

ವಿಚಾರಣೆ ವೇಳೆ ಯಲ್ಲಪ್ಪ ತಾವು ಸಂಗ್ರಹಿಸುತ್ತಿದ್ದ ಹಣ ಯಾರಿಗೆ ತಲುಪುತ್ತಿತ್ತು ಎನ್ನುವ ಮಾಹಿತಿ, ಅದಕ್ಕೆ ಸಂಬಂಧಿಸಿದ ಆಡಿಯೊ, ವಿಡಿಯೊ ತುಣುಕುಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಹೀಗಾಗಿ, ಮೂವರೂ ಅಧಿಕಾರಿಗಳ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿಕೊಂಡಿತ್ತು.

ಉನ್ನತಾಧಿಕಾರಿಗಳಿಗೂ ಕುತ್ತು ಸಾಧ್ಯತೆ: ಯಲ್ಲಪ್ಪ ಪ್ರಕರಣ ಮೂವರು ಅಧಿಕಾರಿಗಳ ಜತೆಗೆ ಉನ್ನತಾಧಿಕಾರಿಗಳಿಗೂ ಕುತ್ತು ತರುವ ಸಾಧ್ಯತೆ ಇದೆ. ಬಹುತೇಕ ಅಧಿಕಾರಿಗಳು ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ. ಎರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಮೂಲಗಳು ತಿಳಿಸಿವೆ.

ತೀರ್ಥಹಳ್ಳಿ ಪ್ರಕರಣ: ಅಕ್ರಮ ಮರಳು ದಂಧೆ ಆರೋಪದ ಮೇಲೆ ತೀರ್ಥಹಳ್ಳಿಯ ಡಿವೈಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ಅವರನ್ನು ಸರ್ಕಾರ ಎರಡು ವಾರಗಳ ಹಿಂದೆ ವರ್ಗಾವಣೆ ಮಾಡಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು