ರೈಲಿನಲ್ಲಿ ಬಂದವನ ಬಳಿ ಇತ್ತು 8 ಕೆ.ಜಿ ಗಾಂಜಾ!

7

ರೈಲಿನಲ್ಲಿ ಬಂದವನ ಬಳಿ ಇತ್ತು 8 ಕೆ.ಜಿ ಗಾಂಜಾ!

Published:
Updated:

ಬೆಂಗಳೂರು: ರೈಲಿನಲ್ಲಿ 8 ಕೆ.ಜಿ ಗಾಂಜಾ ತಂದಿದ್ದ ಒಡಿಶಾದ ನೀಲಕಂಠ ಪಲೈ ಎಂಬಾತನನ್ನು ಬಂಧಿಸಿದ ಕಂಟೋನ್ಮೆಂಟ್ ರೈಲ್ವೆ ಪೊಲೀಸರು, ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಆಧರಿಸಿ ನೀಲಸಂದ್ರದಲ್ಲಿ ಡ್ರಗ್ ಏಜೆಂಟ್ ಮಹಮದ್ ಸಬೀರ್ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ.

‘ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಂದ ‘ಪ್ರಶಾಂತಿ ಎಕ್ಸ್‌ಪ್ರೆಸ್‌’ ರೈಲಿನಲ್ಲಿದ್ದ ನೀಲಕಂಠ ಪಲೈ ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ಇಳಿದ. ಹೆಗಲಿಗೆ ಬ್ಯಾಗ್ ಹಾಕಿಕೊಂಡಿದ್ದ ಆತ, ಇನ್ನೊಂದು ದೊಡ್ಡ ಬ್ಯಾಗನ್ನು ಕೈಲಿ ಹಿಡಿದುಕೊಂಡು ಹೊರಗೆ ಹೊರಟಿದ್ದ. ಆತನ ವರ್ತನೆ ಕಂಡು ಸಂಶಯಗೊಂಡ ಸಿಬ್ಬಂದಿ, ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ₹ 4 ಲಕ್ಷ ಮೌಲ್ಯದ ಗಾಂಜಾ ಪತ್ತೆಯಾಯಿತು’ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ಎಸ್.ಗುಳೇದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗಂಜಂನಿಂದ ಗಾಂಜಾ: ‘ಒಡಿಶಾದ ಗಂಜಂ ಜಿಲ್ಲೆಯಲ್ಲಿ ಅರಣ್ಯವಾಸಿಗಳು ಗಾಂಜಾ ಬೆಳೆಯುತ್ತಾರೆ. ಕಡಿಮೆ ಬೆಲೆಗೆ ಅವರಿಂದ ಖರೀದಿ ಮಾಡಿ, ಬೆಂಗಳೂರಿಗೆ ಸಾಗಿಸುತ್ತಿದ್ದೆ. ಇಲ್ಲಿ ಮಹಮದ್ ಸಬೀರ್ ಎಂಬ ಏಜೆಂಟ್‌ನ ಮೂಲಕ ಮಾರಾಟ ಮಾಡಿಸುತ್ತಿದ್ದೆ’ ಎಂದು ನೀಲಕಂಠ ಹೇಳಿಕೆ ಕೊಟ್ಟಿದ್ದಾನೆ. ಆ ನಂತರ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ ಪ್ರಸಾದ್ ನೇತೃತ್ವದ ತಂಡ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸಬೀರ್‌ನನ್ನೂ ಸೆರೆ ಹಿಡಿದಿದೆ.

ಕಮಿಷನ್ ಆಸೆಗೆ ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿರುವ ಸಬೀರ್, ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಗಾಂಜಾ ಪೂರೈಸುವುದಕ್ಕಾಗಿಯೇ ಕೆಲ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಇವರಿಬ್ಬರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿದ್ದವು ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

**

ಈ ಸೊಪ್ಪನ್ನು ಗಂಜಂ ಜಿಲ್ಲೆಯಲ್ಲೇ ಹೇರಳವಾಗಿ ಬೆಳೆಯಲಾಗುತ್ತದೆ. ಅದೇ ಕಾರಣಕ್ಕೆ ‘ಗಾಂಜಾ’ ಎಂಬ ಹೆಸರು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆಯಲಾಗುವುದು.

-ಭೀಮಾಶಂಕರ್ ಗುಳೇದ್, ಎಸ್ಪಿ, ರೈಲ್ವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !