ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ತಿಂಗಳಲ್ಲಿ 446 ಅತ್ಯಾಚಾರ, 1,754 ಪೋಕ್ಸೊ!

Last Updated 20 ಡಿಸೆಂಬರ್ 2018, 20:51 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸದ್ಧು ಮಾಡಿವೆ. ಹನ್ನೊಂದು ತಿಂಗಳಲ್ಲಿ 446 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೆ, ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂಬಂಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 1,754!

ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಐಪಿಸಿ, ಸಿಆರ್‌ಪಿಸಿ ಹಾಗೂ ವಿಶೇಷ ಕಾನೂನುಗಳ ಅಡಿ 1.96 ಲಕ್ಷ ಎಫ್‌ಐಆರ್‌ಗಳು ದಾಖಲಾಗಿವೆ (ನ.31ರವರೆಗೆ). ‘2017ಕ್ಕೆ ಹೋಲಿಸಿದರೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ಸಂಖ್ಯೆ ಶೇ 15ರಷ್ಟು ಕಡಿಮೆಯೇ ಆಗಿದೆ’ ಎನ್ನುತ್ತಾರೆ ಅಪರಾಧ ವಿಭಾಗದ ಎಡಿಜಿಪಿ ಎಂ.ಎ.ಸಲೀಂ.

ತಡೆಯಲು ಕಷ್ಟ ಸಾಧ್ಯ: ‘ದರೋಡೆ, ಜೇಬುಗಳವು, ಡಕಾಯಿತಿ, ಕನ್ನಕಳವು, ಮನೆಗಳವು... ಇವೆಲ್ಲ ಕೃತ್ಯ ನಡೆಯುವ ಮುನ್ನವೇ ತಡೆಯಬಹುದಾದ ಪ್ರಕರಣಗಳು. ಪೊಲೀಸರು ಪರಿಣಾಮಕಾರಿಯಾಗಿ ಗಸ್ತು ತಿರುಗಿದರೆ ಹಾಗೂ ಹಳೇ ಆರೋಪಿಗಳ ಮೇಲೆ ನಿಗಾ ಇಟ್ಟರೆ ಅವು ನಿಯಂತ್ರಣಕ್ಕೆ ಬರುತ್ತವೆ. ಆದರೆ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಇವು ಅನಿರೀಕ್ಷಿತ ಹಾಗೂ ತಡೆಗಟ್ಟಲು ಕಷ್ಟಸಾಧ್ಯವಾದ ಪ್ರಕರಣಗಳು. ಸಂತ್ರಸ್ತರು ದೂರು ಕೊಟ್ಟರಷ್ಟೇ ನಮ್ಮ ಗಮನಕ್ಕೆ ಬರುತ್ತವೆ’ ಎಂಬುದು ಪೊಲೀಸರು ವಿಶ್ಲೇಷಣೆ.

‘ಕೇವಲ ಅಂಕಿ ಅಂಶಗಳ ಆಧಾರದ ಮೇಲೆ ಅಪರಾಧದ ಪ್ರಮಾಣವನ್ನು ಅಳೆಯುವುದು ಸರಿಯಲ್ಲ. ರಾಜ್ಯದ ಅಭಿವೃದ್ಧಿ, ಸೌಕರ್ಯಗಳ ಕೊರತೆ, ಜನಸಂಖ್ಯೆ ಹೆಚ್ಚಳ.. ಸೇರಿದಂತೆ ಹಲವು ಅಂಶಗಳು ಅಪರಾಧ ಪ್ರಕರಣಗಳನ್ನು ಪ್ರತಿನಿಧಿಸುತ್ತವೆ. ಪ್ರತಿ ಜಿಲ್ಲೆಯಲ್ಲೂ ಹೊಸ ಬಡಾವಣೆಗಳು ಹುಟ್ಟಿಕೊಂಡಿವೆ. ಜನರ ಜೀವನ ಶೈಲಿ ಬದಲಾಗಿದೆ. ವಲಸಿಗರು ಬಂದು ಸೇರಿದ್ದಾರೆ. ಇವರನ್ನೆಲ್ಲ ಕಾಯುವ ಪೊಲೀಸರ ಸಂಖ್ಯೆ ಬಹಳ ಕಡಿಮೆ ಇದೆ. ಕೊರತೆಗಳ ನಡುವೆಯೇ ಕೆಲಸ ಮಾಡುತ್ತಿದ್ದೇವೆ. ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದರೆ ಜನ ಪ್ರಜ್ಞಾವಂತರಾಗುತ್ತಿದ್ದಾರೆ ಎಂದೇ ಭಾವಿಸಬೇಕು’ ಎನ್ನುತ್ತಾರೆ ಪೊಲೀಸರು.

4 ಪ್ರಕರಣಗಳಲ್ಲಿ ಶಿಕ್ಷೆ: ಪೋಕ್ಸೊ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ತೆರೆಯಲಾಗಿದ್ದು, ಈ ವರ್ಷ ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ದಾಖಲಾದ 1,754 ಪೋಕ್ಸೊ ಪ್ರಕರಣಗಳ ಪೈಕಿ, 1,006 ಪ್ರಕರಣಗಳು ನ್ಯಾಯಾಲಯದ ವಿಚಾರಣಾ ಹಂತದಲ್ಲಿದ್ದರೆ, ಇನ್ನೂ 670 ಪ್ರಕರಣಗಳು ತನಿಖಾ ಹಂತದಲ್ಲಿವೆ ಎನ್ನುತ್ತದೆ ಅಂಕಿ ಅಂಶ.

ಗಂಭೀರ ಸ್ವರೂಪದ ಪ್ರಕರಣಗಳು ಹೆಚ್ಚು ದಾಖಲಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳು ಯಥಾ ಪ್ರಕಾರ ಮೊದಲ ಸಾಲುಗಳನ್ನು ಕಾಯ್ದುಕೊಂಡಿವೆ.

**

ವಿಭಾಗಕ್ಕೊಂದು ‘ಸಿಇಎನ್’ ಠಾಣೆ

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 20 ಸಾವಿರ ಐಪಿಸಿ ಪ್ರಕರಣಗಳು ಕಡಿಮೆ ಆಗಿವೆ. ಸೈಬರ್ ಕ್ರೈಂ, ಕಂಪನಿಗಳಿಂದ ಗ್ರಾಹಕರಿಗೆ ವಂಚನೆ ಹಾಗೂ ಡ್ರಗ್ಸ್ ದಂಧೆ.. ಈ ಮೂರು ಅಪರಾಧಗಳಲ್ಲಿ ರಾಜ್ಯದ ಜನ ಹೆಚ್ಚಾಗಿ ಸಂತ್ರಸ್ತರಾಗುತ್ತಿದ್ದಾರೆ.

ಹೀಗಾಗಿ, ಈ ಪ್ರಕರಣಗಳ ತನಿಖೆಗಾಗಿಯೇ ‘ಸಿಇಎನ್’ (ಸೈಬರ್, ಎಕನಾಮಿಕ್ ಅಫೆನ್ಸ್, ನಾರ್ಕೊ) ಠಾಣೆಗಳನ್ನು ಪ್ರಾರಂಭಿಸಲಾಗುತ್ತಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಂಟು ವಿಭಾಗಗಳಲ್ಲೂ ಇಂತಹ ಒಂದೊಂದು ಠಾಣೆ ತೆರೆಯಲಾಗುತ್ತಿದೆ’ ಎಂದು ಎಡಿಜಿಪಿ ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT