ಶುಕ್ರವಾರ, ಡಿಸೆಂಬರ್ 6, 2019
20 °C

ಚುನಾವಣಾ ಆಯೋಗ ನಿಷ್ಕ್ರಿಯ, ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ರಾಜಾರೋಷವಾಗಿ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ. ಆದರೆ, ಚುನಾವಣಾ ಆಯೋಗ ಅದನ್ನು ತಡೆಯಲು ವಿಫಲವಾಗಿದ್ದು, ಸಂಪೂರ್ಣ ನಿಷ್ಕ್ರಿಯಗೊಂಡಿದೆ’ ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಟೀಕಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಜಾತಿ ಹೆಸರಿನಲ್ಲಿ ಮತ ಕೇಳಿ ಪ್ರಚೋದನೆ ಮಾಡಿದ್ದಾರೆ. ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ನೂತನ ಬಂಗಲೆಯ ಗೃಹ ಪ್ರವೇಶ, ಮಗನ ಅದ್ದೂರಿ ಮದುವೆ ಮಾಡಿದ್ದಾರೆ. ಚಿನ್ನದ ನಾಣ್ಯಗಳನ್ನು ಮತದಾರರಿಗೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇತರೆ ಕ್ಷೇತ್ರಗಳಲ್ಲೂ ಅಕ್ರಮ ನಡೆಯುತ್ತಿದೆ. ಇಷ್ಟೆಲ್ಲ ಆಗುತ್ತಿದ್ದರೂ ಚುನಾವಣಾ ಆಯೋಗ ಮೌನ ವಹಿಸಿದ್ದು ಸರಿಯಲ್ಲ. ಅದು ಪ್ರಜಾಪ್ರಭುತ್ವ ಉಳಿಸಲಿ’ ಎಂದು ಆಗ್ರಹಿಸಿದರು.

ನಟ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಸುಪ್ರೀಂಕೋರ್ಟ್‌ 17 ಜನ ಶಾಸಕರನ್ನು ಅನರ್ಹಗೊಳಿಸಿದೆ. ಆದರೆ, ಚುನಾವಣೆಗೆ ನಿಲ್ಲಲು ಅವಕಾಶ ಕೊಟ್ಟಿದ್ದು ಸರಿಯಲ್ಲ. ಯೋಗ್ಯತೆ ಇಲ್ಲವೆಂದ ಮೇಲೆ ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದು ಸರಿಯೇ? ಒಂದು ಸಲ ಕಳ್ಳತನ ಮಾಡಿದವನಿಗೆ ಮತ್ತೊಂದು ಅವಕಾಶ ಕೊಟ್ಟಂತಾಗಿದೆ’ ಎಂದರು.

‘ನ್ಯಾಯಾಲಯದ ತೀರ್ಪು ಪ್ರಶ್ನಿಸುತ್ತಿಲ್ಲ. ಆದರೆ, ಅದು ಕೊಟ್ಟಿರುವ ತೀರ್ಪು ಅನುಮಾನ ಮೂಡಿಸುತ್ತದೆ. ಒಂದುವೇಳೆ ನ್ಯಾಯಾಲಯವು ಅನರ್ಹತೆಯನ್ನು ಎತ್ತಿ ಹಿಡಿದಿದ್ದರೆ ಭವಿಷ್ಯದಲ್ಲಿ ಯಾರು ಪಕ್ಷಾಂತರ ಮಾಡುತ್ತಿರಲಿಲ್ಲ. ಇಡೀ ದೇಶಕ್ಕೆ ಉತ್ತಮ ಸಂದೇಶ ಹೋಗುತ್ತಿತ್ತು’ ಎಂದು ಪ್ರತಿಪಾದಿಸಿದರು.

ಪ್ರತಿಕ್ರಿಯಿಸಿ (+)