ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ತಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವಿಗೆ ಆಕ್ಷೇಪ

ಪ್ರಶಸ್ತಿ, ವಿದ್ಯಾರ್ಥಿ ವೇತನ ಸ್ಥಗಿತಕ್ಕೆ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಟೀಕೆ
Last Updated 10 ಮೇ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದು, ಸರ್ಕಾರ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕೆಂಬ ಕೂಗು ಎದ್ದಿದೆ.

ಅನುದಾನದ ಕೊರತೆ ಎಂಬ ಕಾರಣಕ್ಕೆ ಪ್ರಾಧಿಕಾರವು ಸರ್ವಸದ್ಯರ ಸಭೆಯಲ್ಲಿ ‘ಕನ್ನಡ ಮಾಧ್ಯಮ ಪ್ರಶಸ್ತಿ’, ‘ನ್ಯಾಯಾಂಗದಲ್ಲಿ ಕನ್ನಡ‍ಪ್ರಶಸ್ತಿ’ ಹಾಗೂ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರು
ವವರಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತ ಮಾಡುವ ನಿರ್ಧಾರ ಕೈಗೊಂಡಿದೆ. ಪ್ರಾಧಿಕಾರದ ಈ ನಿರ್ಧಾರವು ಅದರ ಅಸ್ತಿತ್ವಕ್ಕೆ ತೊಡಕಾಗಲಿದೆ ಎಂದು ಸಾಹಿತಿ
ಗಳು, ಪ್ರಾಧ್ಯಾಪಕರು, ಈ ಹಿಂದಿನ ಅಧ್ಯಕ್ಷರು ಹಾಗೂ ಸಾಂಸ್ಕೃತಿಕ ವಲಯದ ಪ್ರಮುಖರು ಅಸಮಾಧಾನ ಹೊರಹಾಕಿದ್ದಾರೆ.

1983ರಲ್ಲಿ ರಚನೆಯಾಗಿದ್ದ ಕನ್ನಡ ಕಾವಲು ಸಮಿತಿಯೇ 1992ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ಅಸ್ತಿತ್ವಕ್ಕೆ ಬಂದಿತು. ಆಡಳಿತ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಪ್ರಾಧಿಕಾರದ ಮುಖ್ಯ ಉದ್ದೇಶ. ಕನ್ನಡ ಭಾಷೆಯನ್ನು ಪ್ರೋತ್ಸಾಹಿಸುವ ಜತೆಗೆ ಬೆಳೆಸುವ ಕಾರ್ಯಚಟುವಟಿಕೆಯನ್ನು ನಡೆಸುತ್ತಾ ಬಂದಿದೆ. ಆದರೆ, ಈಗ ಏಕಾಏಕಿ ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನವನ್ನು ಕೈಬಿಡುವುದರಿಂದ ಭಾಷೆಯ ಬೆಳವಣಿಗೆಗೆ ತೊಡಕಾಗಲಿದೆ ಎಂಬ ಆತಂಕವೂ ಸಾಂಸ್ಕೃತಿಕ ವಲಯದಲ್ಲಿ ಮೂಡಿದೆ.

ಕನ್ನಡ ವಿಭಾಗಕ್ಕೆ ಬೀಗ: ‘ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಪ್ರಾಧಿಕಾರ ನೀಡುತ್ತಿರುವ ಶಿಷ್ಯವೇತನ ಪ್ರೋತ್ಸಾಹ ನೀಡುತ್ತಿದೆ. ಈ ವಿದ್ಯಾರ್ಥಿ ವೇತನ ವನ್ನು ಸ್ಥಗಿತ ಮಾಡಿದಲ್ಲಿ ಅಲ್ಲಿನ ಕನ್ನಡ ಸ್ನಾತಕೋತ್ತರ ವಿಭಾಗಗಳು ಮುಚ್ಚುವ ಹಂತಕ್ಕೆ ತಲುಪಲಿವೆ’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಪಿ. ಸಿದ್ಧಾಶ್ರಮ ಅವರು ಎಚ್ಚರಿಸಿದ್ದಾರೆ.

‘ಪ್ರಾಧಿಕಾರವನ್ನೇ ರದ್ದುಪಡಿಸಿ’

‘ಕನ್ನಡದ ಕೆಲಸ ಮಾಡಲು ಅನುದಾನ ಇಲ್ಲವೆಂದಾದಲ್ಲಿ ಪ್ರಾಧಿಕಾರ ಇದ್ದರೆಷ್ಟು ಬಿಟ್ಟರೆಷ್ಟು? ಕೊರೊನಾ ಸೇರಿದಂತೆ ವಿವಿಧ ಕಾರಣಗಳನ್ನು ನೀಡುವ ಮೂಲಕ ಅನುದಾನಕ್ಕೆ ಕತ್ತರಿ ಹಾಕಿರುವ ಸರ್ಕಾರ, ಸದ್ಯಕ್ಕೆ ಪ್ರಾಧಿಕಾರವನ್ನು ರದ್ದುಪಡಿಸುವುದೇ ಒಳಿತು. ಇದರಿಂದ ಸಿಬ್ಬಂದಿಯ ವೇತನವೂ ಉಳಿದಂತಾಗಲಿದೆ’ ಎಂದು ಪ್ರಾಧಿಕಾರದ ಹಿಂದಿನ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.

‘ನನ್ನ ಅವಧಿಯಲ್ಲಿ ವಿದ್ಯಾರ್ಥಿ ವೇತನ, ಕನ್ನಡ ಭವನ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ
ಮಾಡಿದೆ. ಆಗಲೂ ಅನುದಾನದ ಕೊರತೆಯಿತ್ತು. ಆದರೆ, ಪಟ್ಟು ಸಡಿಲಿಸದೇ ಅಂದಿನ ಮುಖ್ಯಮಂತ್ರಿಗೆ ಮನವರಿಕೆ ಮಾಡಿ, ಅಗತ್ಯ ಅನುದಾನವನ್ನು ಪಡೆಯುವಲ್ಲಿ ಯಶಸ್ವಿಯಾದೆ. ಅನುದಾನದ ಸಂಬಂಧ ಪ್ರಾಧಿಕಾರವು ಸಾಂಸ್ಕೃತಿಕ ಕ್ಷೇತ್ರದ ಗಣ್ಯರನ್ನು ಒಳಗೊಂಡ ನಿಯೋಗವನ್ನು ಸರ್ಕಾರದ ಬಳಿ ಕೊಂಡೊಯ್ಯಲಿ’ ಎಂದು ಸಲಹೆ ನೀಡಿದ್ದಾರೆ.

‘ಕನ್ನಡದ ಬಗ್ಗೆ ಅಸಡ್ಡೆ ಬೇಡ’

‘ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದರೆ ಪ್ರಾಧಿಕಾರದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಇಂತಹ ಯೋಜನೆಗಳಿಗೆ ಅನುದಾನವೇ ಇಲ್ಲದಿದ್ದಲ್ಲಿ ಪ್ರಾಧಿಕಾರ ಇರುವುದಾದರೂ ಏತಕ್ಕೆ? ವರ್ಷಕ್ಕೆ ₹ 5 ಕೋಟಿ ಅನುದಾನ ವನ್ನೂ ಸರ್ಕಾರಕ್ಕೆ ನೀಡಲು ಸಾಧ್ಯವಾಗದಿದ್ದರೇ ಪ್ರಾಧಿಕಾರವನ್ನು ಏಕೆ ಮುಂದುವರಿಸಬೇಕು’ ಎಂದು ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಎಲ್‌. ಹನುಮಂತಯ್ಯ ಪ್ರಶ್ನಿಸಿದ್ದಾರೆ.

‘ಮಹತ್ವದ ಯೋಜನೆಗಳಿಗೇ ಅನುದಾನ ಇಲ್ಲದಿದ್ದಲ್ಲಿ ಪ್ರಾಧಿಕಾರದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಅಧ್ಯಕ್ಷರು ತಮ್ಮ ನಿರ್ಧಾರ ಹಿಂಪಡೆದು, ಮುಖ್ಯಮಂತ್ರಿ ಬಳಿ ಈ ಬಗ್ಗೆ ಮಾತನಾಡಬೇಕು. ಅನುದಾನದ ಕಡಿತದಿಂದ ಕನ್ನಡದ ಮರ್ಯಾದೆಯನ್ನೇ ಹರಾಜು ಹಾಕುವ ಪರಿಸ್ಥಿತಿ ಬಂದೊದಗಿದೆ. ಸಿಬ್ಬಂದಿಗೆ ವೇತನ ನೀಡಲು ಪ್ರಾಧಿಕಾರದ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT