ಭಾನುವಾರ, ಡಿಸೆಂಬರ್ 15, 2019
21 °C
ಆಗಸ್ಟ್‌ನಲ್ಲಿ ಪ್ರವಾಹದ ಬಳಿಕ ಹೆಚ್ಚಿದ ಹೆಜ್ಜೆ ಗುರುತು: ಎಚ್ಚರಿಕೆ ವಹಿಸಲು ಗ್ರಾಮಸ್ಥರಿಗೆ ಸಲಹೆ

ಗಂಗಾವಳಿ ದಡದಲ್ಲಿ ಮೊಸಳೆಗಳ ಸಂಚಾರ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಪ್ರವಾಹದಿಂದ ಕಂಗೆಟ್ಟಿದ್ದ ಗಂಗಾವಳಿ ನದಿಯಂಚಿನಲ್ಲಿ ಈಗ ದೊಡ್ಡ ಮೊಸಳೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಅಂಕೋಲಾ ತಾಲ್ಲೂಕಿನ ಗುಳ್ಳಾಪುರದ ಆರೇಳು ಕಿಲೋಮೀಟರ್ ವ್ಯಾಪ್ತಿಯ ನದಿ ಪಾತ್ರದಲ್ಲಿ ಅವು ಕೆಲವು ದಿನಗಳಿಂದ ಪದೇಪದೇ ಸಂಚರಿಸುತ್ತಿವೆ.

‘ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದ ಸಂದರ್ಭ ಮೂರು- ನಾಲ್ಕು ಮೊಸಳೆಗಳು ದಡಲ್ಲಿದ್ದವು. ನಂತರ ಅವುಗಳ ಸುಳಿವು ಇರಲಿಲ್ಲ. ಈಗ ಪುನಃ ನದಿಯ ದಡಕ್ಕೆ ಬಂದು ಮರಳಿನಲ್ಲಿ ಬಾಯ್ತೆರೆದು ಮಲಗುತ್ತಿವೆ. ಅವುಗಳಿಂದ ಈವರೆಗೆ ಯಾವುದೇ ಅಪಾಯವಾಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸಂತೋಷ ವೈದ್ಯ.

‘ನಾವಿಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದರೂ ಸುತ್ತಮುತ್ತ ಎಂದೂ ಮೊಸಳೆಗಳನ್ನು ಕಂಡಿರಲಿಲ್ಲ. ಈ ವರ್ಷ ಪ್ರವಾಹದಲ್ಲೇ ಅವು ಬಂದಿರುವ ಸಾಧ್ಯತೆ ಇದೆ. ಗುಳ್ಳಾಪುರದ ಸೇತುವೆಯ ಬಳಿ ಶುಕ್ರವಾರ ಎರಡು ಮೊಸಳೆ ಕಂಡುಬಂದಿವೆ’ ಎಂದು ತಿಳಿಸಿದರು.

‘ಗಂಗಾವಳಿಯಲ್ಲಿ ಮೊದಲಿನಿಂದಲೂ ಮೊಸಳೆಗಳಿದ್ದರೂ ಹೆಚ್ಚು ಕಂಡುಬರುತ್ತಿಲಿಲ್ಲ. ಈ ಭಾಗದಲ್ಲಿ ಹೆಗ್ಗಾರ, ಕೈಗಡಿ, ಕಲ್ಲೇಶ್ವರ, ವೈದ್ಯ ಹೆಗ್ಗಾರ ಮುಂತಾದ ಊರುಗಳಿವೆ. ಈ ಹಿಂದೆ ಅಲ್ಲಲ್ಲಿ ನದಿ ದಂಡೆಯಲ್ಲಿ ಕಾಣಿಸಿವೆ. ಆದರೆ, ಊರಿನ ಒಳಗೆ ಬಂದ ಉದಾಹರಣೆಗಳಿಲ್ಲ’ ಎನ್ನುತ್ತಾರೆ ಕಾಳಿ ಪುನರ್ವಸತಿ ಹೋರಾಟ ಸಮಿತಿ ಅಧ್ಯಕ್ಷ ಮ.ರಾ.ಭಟ್.

ಎಚ್ಚರಿಕೆ ಅಗತ್ಯ: ‘ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಅಣೆಕಟ್ಟೆ ನಿರ್ಮಾಣದ ಸಂದರ್ಭ ನಿರಾಶ್ರಿತರಾದವರಿಗೆ ಈ ಭಾಗದಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ. ಹಾಗಾಗಿ ಇಲ್ಲಿ ಜನ, ಜಾನುವಾರು ಓಡಾಟವಿದೆ. ನದಿಯಲ್ಲಿ ಈಜಲು, ಮೀನು ಹಿಡಿಯಲು ಯುವಕರು, ಮಕ್ಕಳು ಬರುತ್ತಾರೆ. ಮೊಸಳೆಗಳು ಪದೇ ಪದೇ ತಮ್ಮ ಇರುವಿಕೆಯನ್ನು ತೋರಿಸುತ್ತಿರುವ ಕಾರಣ, ಇಲ್ಲಿಗೆ ಬರುವವರು ಎಚ್ಚರಿಕೆ ವಹಿಸಬೇಕು’ ಎನ್ನುವುದು ಕಣ್ಣಿಪಾಲದ ದತ್ತಾತ್ರೇಯ ಅವರ ಸಲಹೆಯಾಗಿದೆ.

‘ಗಂಗಾವಳಿಯಲ್ಲಿ ಶತಮಾನದಲ್ಲೇ ಅತಿ ದೊಡ್ಡ ಪ್ರವಾಹ ಉಂಟಾದ ಪರಿಣಾಮ, ನದಿ ದಂಡೆಯ ಮಣ್ಣು ಭಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗಿದೆ. ಅದರ ಅಂಚಿನಲ್ಲಿದ್ದ ಬೃಹತ್ ಮರಗಳೂ ನೀರು ಪಾಲಾಗಿವೆ. ಮೊದಲು ಮರಗಳ ದೊಡ್ಡ ಬೇರುಗಳಲ್ಲಿ, ನದಿಯ ಮಧ್ಯಭಾಗದಲ್ಲಿ ಬಂಡೆಗಳ ಮೇಲೆ ಆಶ್ರಯ ಪಡೆಯುತ್ತಿದ್ದ ಮೊಸಳೆಗಳಿಗೆ ಈಗ ಆಶ್ರಯದ ಸಮಸ್ಯೆಯೂ ಆಗಿರಬಹುದು’ ಎಂದು ಅವರು ಊಹಿಸಿದ್ದಾರೆ.

‘ಮೊಟ್ಟೆಯಿಡಲು ಬಂದಿರಬಹುದು’: ‘ಗಂಗಾವಳಿ ನದಿಯಲ್ಲಿ ಮೊಸಳೆಗಳು ಮೊದಲಿನಿಂದಲೂ ಇವೆ. ಈಗ ಅವು ಮೊಟ್ಟೆಯಿಡಲು ಸುರಕ್ಷಿತವಾದ ಸ್ಥಳವನ್ನು ಹುಡುಕಿ ನದಿ ದಂಡೆಯ ಮರಳಿಗೆ ಬರುತ್ತಿರುವ ಸಾಧ್ಯತೆಯಿದೆ. ಅವುಗಳಿಂದ ಈವರೆಗೆ ಯಾರಿಗೂ ಅಪಾಯವಾಗಿಲ್ಲ. ಅವುಗಳಿಗೂ ನಾವು ಯಾವುದೇ ರೀತಿಯ ತೊಂದರೆ ಮಾಡಬಾರದು. ಈ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ರಾಮನಗುಳಿ ವಲಯ ಅರಣ್ಯಾಧಿಕಾರಿ ಲೋಕೇಶ ಪಾಟಣಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು