ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹದ ಹಕ್ಕಿ ಇಳಿಕೆಗೆ ರನ್‌ವೇ ಸಿದ್ಧ

ಕಲಬುರ್ಗಿಯಿಂದ 13 ಕಿ.ಮೀ ದೂರದಲ್ಲಿ ನಿಮಾನ ನಿಲ್ದಾಣ ನಿರ್ಮಾಣ
Last Updated 24 ಮಾರ್ಚ್ 2018, 6:25 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿಯ ಗುಲಬರ್ಗಾ ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ವಿಮಾನ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ.

2007ರಲ್ಲಿ 694 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಬೋಯಿಂಗ್, ಏರ್‌ಬಸ್‌–320 ಮತ್ತು 747 ವಿಮಾನಗಳ ಇಳಿಕೆ ಮತ್ತು ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ಗಮನಿಸಿ ಇದನ್ನು 742 ಎಕರೆಗೆ ವಿಸ್ತರಿಸಲಾಯಿತು. ಅಲ್ಲದೆ ಈ ಮೊದಲಿನ 1.97 ಕಿ.ಮೀ ರನ್‌ವೇಯನ್ನು ಈಗ 3.275ಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಆರಂಭಿಕ ವೆಚ್ಚ ₹134 ಕೋಟಿ ಇದ್ದು, ಪರಿಷ್ಕೃತ ವೆಚ್ಚ ₹175 ಕೋಟಿ ಆಗಿದೆ.

ಈ ಮೊದಲು ಸರ್ಕಾರ ಈ ಕಾಮಗಾರಿಯನ್ನು ರೀಜನಲ್ ಏರ್‌ಪೋರ್ಟ್ ಹೋಲ್ಡಿಂಗ್ ಇಂಟರ್‌ನ್ಯಾಷನಲ್ (ಆರ್‌ಎಎಚ್‌ಐ) ಸಂಸ್ಥೆಗೆ ವಹಿಸಿತ್ತು. ವಿಮಾನ ನಿಲ್ದಾಣದ ನಿರ್ಮಾಣ, ನಿರ್ವಹಣೆ, ಒಡೆತನ ಮತ್ತು ಹಸ್ತಾಂತರ (ಬಿಒಒಟಿ) ಆಧಾರದ ಮೇಲೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಯಿತು. ಅಲ್ಲದೆ ಈ ವಿಷಯ ಕೋರ್ಟ್‌ ಮೆಟ್ಟಿಲೇರಿತು. ಹೀಗಾಗಿ ಆ ಸಂಸ್ಥೆಗೆ ಕೊಟ್ಟಿದ್ದ ಗುತ್ತಿಗೆಯನ್ನು ರದ್ದುಗೊಳಿಸಿ, ಬೆಂಗಳೂರಿನ ಮೆ. ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪೆನಿ (ಎನ್‌ಸಿಸಿ)ಗೆ ವಹಿಸಲಾಗಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಗೆ ಅನುಷ್ಠಾನದ ಜವಾಬ್ದಾರಿ ಕೊಡಲಾಗಿದೆ.

‘3.275 ಕಿ.ಮೀ ರನ್‌ವೇ ಕಾಮಗಾರಿ ಪೂರ್ಣಗೊಂಡಿದೆ. ಏರ್ ಟ್ರಾಫಿಕ್ ಕಂಟ್ರೋಲ್ ರೂಂ (ಎಟಿಸಿ) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸದ್ಯ, ಇದಕ್ಕೆ ಪರ್ಯಾಯವಾಗಿ ಅಡವಾನ್ಸ್‌ಡ್‌ ಏರ್‌ ಟ್ರಾಫಿಕ್ ಅಡವೈಸರಿ ಸಿಸ್ಟಂ (ಎಎಟಿಎಸ್‌) ಉಪಕರಣವನ್ನು ಅಳವಡಿಸಲಾಗಿದೆ. ₹7 ಲಕ್ಷ ವೆಚ್ಚದ ಇದನ್ನು ಅಮೆರಿಕದಿಂದ ತರಿಸಲಾಗಿದೆ. ಇದು 50ಸಾವಿರ ಮೀಟರ್‌ವರೆಗೆ ಸಂದೇಶ ಮತ್ತು ಸಿಗ್ನಲ್‌ಗಳನ್ನು ರವಾನಿಸುತ್ತದೆ. ಈ ಉಪರಣವು ಸೌರ ವಿದ್ಯುತ್‌ ಮೂಲಕ ಕಾರ್ಯನಿರ್ವಹಿಸುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ಹೇಳುತ್ತವೆ.

‘ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಪ್ರಾಯೋಗಿಕ ಹಾರಾಟಕ್ಕೆ ಅನುಮತಿ ನೀಡಿದ್ದು, ಹೈದರಾಬಾದ್‌ನ ಜಿಎಂಆರ್‌ ಸಂಸ್ಥೆಯು ಏಪ್ರಿಲ್‌ ಮೊದಲ ವಾರದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಿದೆ. ಜಿಎಂಆರ್‌ ಸಂಸ್ಥೆಗೆ ಸೇರಿದ ಏಷಿಯಾ ಫೆಸಿಪಿಕ್ ಫ್ಲೈಟ್ ಅಕಾಡೆಮಿ ಲಿಮಿಟೆಡ್‌ ಸಂಸ್ಥೆಯು ಲೈಟ್ ಟ್ರೇನರ್‌ ಏರ್‌ಕ್ರಾಫ್ಟ್‌ ಡೈಮಂಡ್‌ ಡಿಎ–40 ವಿಮಾನವನ್ನು ಪ್ರಾಯೋಗಿಕ ಹಾರಾಟಕ್ಕೆ ಬಳಸುತ್ತಿದೆ’ ಎಂಬುದು ಮೂಲಗಳ ವಿವರಣೆ.

‘ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ವಾಣಿಜ್ಯ ವಿಮಾನ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ಪತ್ರ ಬರೆಯಲಾಗುವುದು. ಅವರು ಇಲ್ಲಿಗೆ ಬಂದು ಪರಿಶೀಲನೆ ನಡೆಸಿ, ಅನುಮತಿ ನೀಡಿದ ಬಳಿಕ ವಾಣಿಜ್ಯ ವಿಮಾನ ಕಾರ್ಯಾಚರಣೆ ಆರಂಭಿಸಲಾಗುವುದು. ಗುಲಬರ್ಗಾ ವಿಮಾನ ನಿಲ್ದಾಣವು ಅತಿ ಉದ್ದದ ರನ್‌ವೇ ಹೊಂದಿದ ದೇಶದ 10ನೇ ಹಾಗೂ ರಾಜ್ಯದ ಎರಡನೇ ವಿಮಾನ ನಿಲ್ದಾಣವಾಗಿದೆ’ ಎಂಬುದು ಮೂಲಗಳ ಹೇಳಿಕೆ.

‘ರಾತ್ರಿ ವೇಳೆ ವಿಮಾನ ಹಾರಾಟಕ್ಕಾಗಿ ರನ್‌ವೇಯ ಎರಡೂ ಬದಿಯಲ್ಲಿ ಪ್ರತಿ 60 ಮೀ.ಗೆ ಒಂದರಂತೆ ವಿದ್ಯುತ್ ದೀಪವನ್ನು ಅಳವಡಿಸಲಾಗುತ್ತಿದೆ. ರನ್‌ವೇಯ ಎರಡೂ ಬದಿಯಿಂದ ವಿಮಾನದ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ಗೆ ಅವಕಾಶವಿದೆ. ರನ್‌ವೇಯ ಎರಡೂ ಬದಿಯಲ್ಲಿ ರನ್‌ವೇ ಸೇಫ್ಟಿ ಏರಿಯಾ (ಆರ್‌ಎಸ್‌ಎ) ನಿರ್ಮಿಸಲಾಗುತ್ತಿದೆ. ಟರ್ಮಿನಲ್‌ ನಿರ್ಮಾಣ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ’ ಎಂದು ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT