ಬೆಳೆ ವಿಮೆಗೆ ರೈತರ ಅಲೆದಾಟ

7
ಒಣಭೂಮಿ ಪ್ರದೇಶವನ್ನು ‘ನೀರಾವರಿ’ ಎಂದು ನಮೂದಿಸಿದ ಅಧಿಕಾರಿಗಳು

ಬೆಳೆ ವಿಮೆಗೆ ರೈತರ ಅಲೆದಾಟ

Published:
Updated:

ಹುಬ್ಬಳ್ಳಿ: ಒಣ ಭೂಮಿಯನ್ನು ‘ನೀರಾವರಿ’ ಪ್ರದೇಶ ಎಂದು ಬ್ಯಾಂಕ್‌ ಅಧಿಕಾರಿಗಳು ತಮ್ಮ ದಾಖಲೆಗಳಲ್ಲಿ ತಪ್ಪಾಗಿ ನಮೂದಿಸಿಕೊಂಡ ಕಾರಣ ಅಣ್ಣಿಗೇರಿ ತಾಲ್ಲೂಕಿನ ತುಪ್ಪದ ಕುರಹಟ್ಟಿ ಗ್ರಾಮದ ರೈತರು ಎರಡು ವರ್ಷಗಳಿಂದ ₹6 ಕೋಟಿ ಬೆಳೆ ವಿಮೆ ಪರಿಹಾರಕ್ಕಾಗಿ ಬ್ಯಾಂಕು, ವಿವಿಧ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಗ್ರಾಮದ 950 ರೈತರು, ಒಣಭೂಮಿಯಲ್ಲಿ ಬೆಳೆದ ತೊಗರಿ ಹಾಗೂ ಜೋಳದ ಬೆಳೆಗಳಿಗೆ 2016ರಲ್ಲಿ ವಿಮೆ ಕಂತು ತುಂಬಿದ್ದರು. ಆದರೆ, ಬ್ಯಾಂಕ್‌ ಅಧಿಕಾರಿಗಳು ವಿಮಾ ಕಂಪನಿಗೆ ದಾಖಲೆಗಳನ್ನು ಕಳುಹಿಸುವಾಗ ‘ನೀರಾವರಿ ಪ್ರದೇಶ’ದ ವಿಮೆ ಕಂತು ಎಂದು ಉಲ್ಲೇಖಿಸಿದ್ದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ.

ಪರಿಹಾರಕ್ಕಾಗಿ ಬ್ಯಾಂಕ್‌, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹಲವಾರು ಬಾರಿ ರೈತರು ಅಲೆದಾಡಿದ್ದಾರೆ. ಆದರೆ, ಇಂದಿಗೂ ಪರಿಹಾರ ಸಿಕ್ಕಿಲ್ಲ. ಇದೇ ಅವಧಿಗೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ವಿಮೆ ಕಂತು ‍ಪಾವತಿಸಿದ್ದ ರೈತರಿಗೆ ಬೆಳೆ ವಿಮೆ ಹಣ ಸಿಕ್ಕಿದೆ.

ನೀರಾವರಿ ಪ್ರದೇಶ ಎಂದು ದಾಖಲೆಗಳಲ್ಲಿ ನಮೂದಿಸಿರುವುದರಿಂದ ಯಾವುದೇ ಬೆಳೆ ನಷ್ಟವಾಗಿಲ್ಲ ಎಂದು ಪರಿಗಣಿಸಿರುವ ಅಗ್ರಿಕಲ್ಚರ್‌ ಇನ್‌‌ಶೂರೆನ್ಸ್ ಕಂಪನಿ, ಬೆಳೆ ಪರಿಹಾರ ಪಾವತಿಸಲು ನಿರಾಕರಿಸುತ್ತಿದೆ.

‘ಬೆಳೆ ನಷ್ಟವಾಗಿದ್ದರೂ, ಪರಿಹಾರ ಬಂದಿಲ್ಲ. ಈ ಸಂಬಂಧ ಬ್ಯಾಂಕಿಗೆ ಹೋಗಿ ಕೇಳುತ್ತಲೇ ಇದ್ದೇವೆ. ಇಂದು, ನಾಳೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮದ ರೈತರಾದ ಎಸ್‌.ಟಿ. ಜಕ್ಕನಗೌಡ, ಬಸವರಾಜ ವಗ್ಗಾರ, ಚಂದಪ್ಪ ಹಲಗಿ.

‘ರೈತರು ಹೇಳಿದ್ದನ್ನೇ ಬ್ಯಾಂಕ್‌ ಅಧಿಕಾರಿಗಳು ನಮೂದಿಸಿದ್ದಾರೆ. ನಂತರ ಆ ಪ್ರದೇಶ ನೀರಾವರಿ ಅಲ್ಲ ಎಂಬುದು ಗೊತ್ತಾಗಿದೆ. ಈ ವಿಷಯವನ್ನು ವಿಮಾ ಕಂಪನಿ ಗಮನಕ್ಕೆ ತರಲಾಗಿದೆ. ಪರಿಹಾರ ಪಾವತಿಸುವಂತೆ ಪತ್ರ ಬರೆಯಲಾಗಿದೆ. ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ’ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಈಶ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರಿಂದ ಮಳೆಯಾಶ್ರಿತ ಪ್ರದೇಶದ ವಿಮಾ ಕಂತನ್ನು ಬ್ಯಾಂಕಿನವರು ಕಟ್ಟಿಸಿಕೊಂಡಿದ್ದಾರೆ. ಆದರೆ, ನೀರಾವರಿ ಎಂದು ನಮೂದು ಮಾಡಿದ್ದಾರೆ. ಹೀಗಾಗಿ, ರೈತರಿಗೆ ಪರಿಹಾರ ಸಿಕ್ಕಿಲ್ಲ. ಕಂಪನಿಯೊಂದಿಗೆ ಮಾತುಕತೆ ಮಾಡಿದ್ದು, ಹಣ ಬಿಡುಗಡೆಯಾಗುವ ವಿಶ್ವಾಸ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ.

ಮನಗುಂಡಿ, ವನಗುಂಡಿ ಗೊಂದಲ

ಬ್ಯಾಂಕ್‌ ಶಾಖೆ ಹೆಸರು ನಮೂದಿಸುವ ವಿಷಯದಲ್ಲಿ ಆದ ಗೊಂದಲದಿಂದಾಗಿ ಮನಗುಂಡಿ ರೈತರಿಗೆ ₹20 ಲಕ್ಷ ಬೆಳೆ ವಿಮೆ ಇನ್ನೂ ಬಿಡುಗಡೆಯಾಗಿಲ್ಲ. 2015–16ನೇ ಸಾಲಿನ ಹಣ ಇದು.

ಧಾರವಾಡ ತಾಲ್ಲೂಕಿನ ಮನಗುಂಡಿಯಲ್ಲಿ ಬ್ಯಾಂಕ್‌ ಶಾಖೆಯಿದ್ದರೂ ಆ ಗ್ರಾಮದ ಹೆಸರು ಕೃಷಿ ಇಲಾಖೆ ಪ್ರಕಟಿಸಿದ ಪಟ್ಟಿಯಲಿಲ್ಲ ಇರಲಿಲ್ಲ. ಹೀಗಾಗಿ ವಿಮೆ ಕಂತನ್ನು ಧಾರವಾಡ ಶಾಖೆ ಹೆಸರಿಗೆ ಕಟ್ಟಿಸಿಕೊಳ್ಳಲಾಯಿತು. ಈ ನಡುವೆ ಕೃಷಿ ಇಲಾಖೆಯ ಪಟ್ಟಿಯಲ್ಲಿ ‘ಮನಗುಂಡಿ’ ಎಂಬುದು ‘ವನಗುಂಡಿ’ ಎಂದು ತಪ್ಪಾಗಿ ಪ್ರಕಟಿಸಲಾಗಿತ್ತು. ತಪ್ಪಾಗಿರುವುದನ್ನು ಪರಿಶೀಲಿಸಲಿದೆ ಆ ಗ್ರಾಮದ ರೈತರ ಬೆಳೆ ವಿಮಾ ಕಂತನ್ನು ಧಾರವಾಡ ಶಾಖೆಯಲ್ಲಿ ಕಟ್ಟಿಸಿಕೊಂಡಿದ್ದೇ ಸಮಸ್ಯೆಗೆ ಕಾರಣವಾಗಿದೆ.

ಮನಗುಂಡಿ ಪ್ರದೇಶ ಪರಿಹಾರಕ್ಕೆ ಅರ್ಹವಾಗಿದ್ದರೂ ನಮೂದಾದ ಬ್ಯಾಂಕ್‌ ಪ್ರದೇಶ ಬೇರೆಯಾಗಿದೆ ಎಂಬ ಕಾರಣಕ್ಕೆ ರೈತರಿಗೆ ಪರಿಹಾರ ನಿರಾಕರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !