3 ಲಕ್ಷ ರೈತರ ಖಾತೆಗೆ ಹಣ: ಅನುಮೋದನೆ

7
‘ಸಾಲಮನ್ನಾ’ ಒಳನೋಟ ವರದಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ

3 ಲಕ್ಷ ರೈತರ ಖಾತೆಗೆ ಹಣ: ಅನುಮೋದನೆ

Published:
Updated:
Prajavani

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ಮೂರು ಲಕ್ಷ ರೈತರ ಖಾತೆಗೆ ಹಣ ಪಾವತಿಸಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

‘ಪ್ರಜಾವಾಣಿ’ ದಿನಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ರೈತರ ಬೆಳೆ ಸಾಲ ಮನ್ನಾ ಯೋಜನೆ ಕುರಿತ ‘ಅನ್ನದಾತನ ಮೊಣಕೈಗೆ ಬೆಣ್ಣೆ’ ಎಂಬ ಮುಖಪುಟ ವರದಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 21.5 ಲಕ್ಷ ರೈತರ ಸುಮಾರು ₹36 ಸಾವಿರ ಕೋಟಿ ಸಾಲ ಮನ್ನಾ ಆಗಲಿದೆ. ಈವರೆಗೆ 13.6 ಲಕ್ಷ ರೈತರು ತಮ್ಮ ಆಧಾರ್, ಪಡಿತರ ಚೀಟಿ ಮತ್ತು ಜಮೀನು ಸರ್ವೆ ನಂಬರ್ ಒದಗಿಸಿ, ಸ್ವಯಂಘೋಷಣೆ ಸಲ್ಲಿಸಿದ್ದಾರೆ. 1.8 ಲಕ್ಷ ರೈತರ ₹600 ಕೋಟಿಗಳಷ್ಟು ಸುಸ್ತಿ ಸಾಲ ಮತ್ತು ರಿ-ಸ್ಟ್ರಕ್ಚರ್ಡ್ ಸಾಲ ಮನ್ನಾದ ಮೊತ್ತ ಸೋಮವಾರ ಬಿಡುಗಡೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಹಕಾರ ಸಂಘಗಳಲ್ಲಿ 18.3 ಲಕ್ಷ ಬೆಳೆ ಸಾಲ ಖಾತೆಗಳಿವೆ. ಇದರಲ್ಲಿ ಶೇ 99ರಷ್ಟು ಸಾಲ ಖಾತೆಗಳು ಕ್ರಮಬದ್ಧವಾಗಿದ್ದು ಅವು ಮರುಪಾವತಿಯಾಗಬೇಕಾದ ತಿಂಗಳು ಸಾಲ ಮನ್ನಾಕ್ಕೆ ಅರ್ಹತೆ ಪಡೆಯುತ್ತವೆ. ಡಿಸೆಂಬರ್ ಅಂತ್ಯದವರೆಗೆ ₹1,300 ಕೋಟಿ ಮೊತ್ತದ ಕೇವಲ 3 ಲಕ್ಷ ಖಾತೆಗಳು ಮರುಪಾವತಿಗೆ ಅರ್ಹತೆ ಹೊಂದಿದ್ದವು. ಇನ್ನೂ 30 ಸಾವಿರ ಸಾಲ ಖಾತೆಗಳಿಗೆ ₹170 ಕೋಟಿ ಮನ್ನಾ ಮೊತ್ತ ಪಾವತಿಗೆ ಸಿದ್ಧವಾಗಿದ್ದು, ಸೋಮವಾರ ಅಥವಾ ಮಂಗಳವಾರ ಪಾವತಿ ಮಾಡಲಾಗುವುದು. ಪ್ರತಿ ವಾರ ಮನ್ನಾ ಮೊತ್ತ ಪಾವತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಾಲ ಮನ್ನಾ ಯೋಜನೆ ತೆರೆದ ಪುಸ್ತಕದಂತಿದೆ. ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಸಾಲ ಮನ್ನಾ ಯೋಜನೆಯ ಮಾಹಿತಿಯನ್ನು ಎಲ್ಲರಿಗೂ ಆನ್‌ಲೈನ್‌ನಲ್ಲಿ ಮುಕ್ತವಾಗಿ ಒದಗಿಸಲಾಗಿದೆ. ಎಲ್ಲ ಮಧ್ಯವರ್ತಿಗಳು, ವಿಶೇಷವಾಗಿ ಸಹಕಾರಿ ವಲಯದ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಈ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇತರ ರಾಜ್ಯಗಳೂ ಮುಂದೆ ಬಂದಿವೆ. ಆಧಾರ್ ಮತ್ತು ಭೂ ದಾಖಲಾತಿಗಳ ಡಿಜಿಟಲ್ ದೃಢೀಕರಣ ಮತ್ತು ಪಡಿತರ ಚೀಟಿ ಇವುಗಳಿಂದ ಕೂಡಿರುವ ಮನ್ನಾ ಪ್ರಕ್ರಿಯೆ ವ್ಯವಸ್ಥೆ ಸುರಕ್ಷಿತವಾಗಿದ್ದು, ದುರುಪಯೋಗಕ್ಕೆ ಅಸ್ಪದ ನೀಡುವುದಿಲ್ಲ. ಅರ್ಹ ರೈತರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !