ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃಶೋಕದ ನಡುವೆಯೇ ಪರೀಕ್ಷೆ ಬರೆದ ಸಚಿವ ಶಿವಳ್ಳಿ ಪುತ್ರಿ

Last Updated 23 ಮಾರ್ಚ್ 2019, 13:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೃದಯಾಘಾತದಿಂದ ಶುಕ್ರವಾರ ನಿಧನರಾದ ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರ ದ್ವಿತೀಯ ಪುತ್ರಿ ರೂಪ ಕಣ್ಣೀರು ಸುರಿಸುತ್ತಲೇ ಶನಿವಾರ ಎಸ್‌ಎಸ್‌ಎಲ್‌ಸಿ ಇಂಗ್ಲಿಷ್‌ ಭಾಷಾ ಪರೀಕ್ಷೆಯನ್ನು ಬರೆದಳು.

ಇಲ್ಲಿನ ಗೋಕುಲ ರಸ್ತೆಯ ಮಂಜುನಾಥನಗರದ ಕೆ.ಎಲ್‌.ಇ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ವಿದ್ಯಾರ್ಥಿನಿಯಾಗಿರುವ ರೂಪ ವಿದ್ಯಾನಗರದ ಸಿದ್ದೇಶ್ವರ ಪಾರ್ಕ್‌ನಲ್ಲಿರುವ ಸೇಂಟ್‌ ಅಂಥೋನಿಸ್‌ ಪಬ್ಲಿಕ್‌ ಸ್ಕೂಲ್‌ನ ಪರೀಕ್ಷಾ ಕೇಂದ್ರದಲ್ಲಿ, ಉಮ್ಮಳಿಸಿ ಬರುತ್ತಿದ್ದ ಪಿತೃ ವಿಯೋಗದ ದುಃಖದ ನಡುವೆ ಪರೀಕ್ಷೆ ಬರೆದಳು.

ಪರೀಕ್ಷಾ ಕೊಠಡಿಗೆ ಹೋಗುವ ಮುನ್ನಾ ಮತ್ತು ಪರೀಕ್ಷೆ ಬರೆದು ಬರುವ ಮುನ್ನಾ ಅವಳನ್ನು ಆಕೆಯ ಸ್ನೇಹಿತೆಯರು ಸಂತೈಸುತ್ತಿದ್ದ ದೃಶ್ಯ ಕಂಡುಬಂದಿತು.

ಪರೀಕ್ಷೆ ಮುಗಿದ ಬಳಿಕ ಬಾಲಕಿಯನ್ನು ಯರಗುಪ್ಪಿಯಲ್ಲಿ ನಡೆಯುತ್ತಿದ್ದ ಶಿವಳ್ಳಿ ಅವರ ಅಂತ್ಯಸಂಸ್ಕಾರದ ಕ್ರಿಯಾವಿಧಿಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಕರೆದುಕೊಂಡು ಹೋಗಲಾಯಿತು.

ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಪರೀಕ್ಷಾ ಕೇಂದ್ರ ಹೊರಭಾಗದಲ್ಲಿ ಕಾದು ನಿಂತಿದ್ದ ನೂರಾರು ಪಾಲಕರು, ತಂದೆ ಕಳೆದುಕೊಂಡ ಅತೀವ ದುಃಖದ ನಡುವೆಯೂ ಬಾಲಕಿ ಪರೀಕ್ಷೆ ಬರೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಹೀಗಾಗಬಾರದಿತ್ತು ಎಂದು ಮರುಕಪಟ್ಟರು.

ಪರೀಕ್ಷಾ ಕೇಂದ್ರಕ್ಕೆ ಬಾಲಕಿಯನ್ನು ಕರೆದುಕೊಂಡು ಬಂದಿದ್ದ ಶಿವಳ್ಳಿ ಅವರ ಕಾರಿನ ಚಾಲಕ ದ್ಯಾಮಣ್ಣ ಮಡಿವಾಳರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಾಹೇಬರ ಪಾರ್ಥೀವ ಶರೀರದೊಂದಿಗೆ ಇಡೀ ಕುಟುಂಬ ನಿನ್ನೆಯೇ ಯರಗುಪ್ಪಿಗೆ ತೆರಳಿದ್ದಾರೆ. ಹುಬ್ಬಳ್ಳಿಯ ಅವರ ಮನೆಯಲ್ಲಿ ಸಚಿವರ ಮೂವರು ಮಕ್ಕಳು ಮಾತ್ರ ಇದ್ದರು. ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ತೀವ್ರ ನೊಂದುಕೊಂಡಿರುವ ಆಕೆ ರಾತ್ರಿಯಿಡೀ ಮಲಗಲಿಲ್ಲ, ಹೊಟ್ಟೆಗೂ ಏನನ್ನೂ ತಿಂದಿಲ್ಲ. ಪರೀಕ್ಷೆ ಬರೆಯುತ್ತೇನೆ ಎಂದು ಆಕೆಯೇ ಇಚ್ಛಿಸಿದ ಹೇಳಿದ ಕಾರಣ ಕರೆದುಕೊಂಡು ಬರಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT