ಸೋಮವಾರ, ನವೆಂಬರ್ 18, 2019
25 °C
ಟ್ವೀಟ್‌ಗೆ ಪ್ರತಿಕ್ರಿಯೆ

ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್: ಸಚಿವ ಸಿ.ಟಿ.ರವಿ

Published:
Updated:

ಕಾರವಾರ: ‘ಕೊಲೆಗೂ ಅಪಘಾತಕ್ಕೂ ವ್ಯತ್ಯಾಸ ತಿಳಿದಿಲ್ಲವಾದರೆ ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಟ್ವೀಟ್ ವಿರುದ್ಧ ಕೆಂಡಾಮಂಡಲವಾದರು. 

‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ  ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ!’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಅಮಾಯಕರ ಕೊಂದವರಿಗೆ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಬೇಕು! ಸಿದ್ದರಾಮಯ್ಯ

‘ಸಿದ್ದರಾಮಯ್ಯ ಅವರ ಮನಸ್ಥಿತಿ ಇಷ್ಟು ಕೆಳಮಟ್ಟಕ್ಕೆ ಹೋಗಬಹುದೆಂದು ಭಾವಿಸಿರಲಿಲ್ಲ. ನನಗೆ ಮದ್ಯಪಾನದ ಅಭ್ಯಾಸವಿಲ್ಲ. ಇದು ಕ್ಷೇತ್ರದ ಜನರಿಗೂ ಗೊತ್ತು. ಕುಡಿದು ತೂರಾಡುತ್ತಿದ್ದವರು ಯಾರು ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಟೋಲ್‌ಗೇಟ್ ನಲ್ಲಿರುವ ಸಿಸಿಟಿವಿ ಕ್ಯಾಮರಾ ಕೂಡ, ಅಪಘಾತಕ್ಕೆ ಕಾರಣ ಕಾರು ಚಾಲಕ ಎಂದು ಸಾಕ್ಷ್ಯ ನೀಡಿದೆ. ಅದೂ ಅರಿವಿಲ್ಲವೆಂದರೆ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದು ದುರ್ದೈವ’ ಎಂದು ಟೀಕಿಸಿದರು.

ಎಫ್ಐಆರ್ ವಿಚಾರಕ್ಕೆ ಸಂಬಂಧಿಸಿ ಮಾತು ಮುಂದುವರಿಸಿದ ಅವರು, ‘ನಾನು ವಾಹನ ಚಾಲನೆ ಮಾಡದೇ 20 ವರ್ಷಗಳ ಮೇಲಾಗಿದೆ. ಅಪಘಾತ ಸಂದರ್ಭದಲ್ಲಿ ನಾನು ಚಾಲಕನ ಪಕ್ಕದಲ್ಲಿ ಕುಳಿತವನು. ಆದರೂ ಮಾನವೀಯತೆಯಿಂದ ಪರಿಹಾರ ನೀಡಿದ್ದೇನೆ. ಅದು ಅಪಘಾತವೇ ಹೊರತು ಹತ್ಯೆ ಅಲ್ಲ. ಚಾಲಕ ಮಾಡಿದ ಅಪಘಾತಕ್ಕೆ ಪ್ರಯಾಣಿಕ ಹೊಣೆಗಾರನಲ್ಲ. ಅಪಘಾತಕ್ಕೂ ಕೊಲೆಗೂ ವ್ಯತ್ಯಾಸ ಗೊತ್ತಿಲ್ಲವೆಂದರೆ ಅವರು ಕಾನೂನು ಪದವಿ ಓದಿದ್ದಕ್ಕೂ ವಕೀಲರಾಗಿರುವುದಕ್ಕೂ ನಾಲಾಯಕ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)