ಭಾನುವಾರ, ಡಿಸೆಂಬರ್ 8, 2019
25 °C
ವಿದ್ಯಾರ್ಥಿಗಳು, ಸಂಶೋಧಕರು, ಬೋಧಕರಿಂದ ಹೆಚ್ಚಿದ ಒಲವು

ಸಿಯುಕೆಯಲ್ಲಿ ‘ವರ್ಚುಯಲ್ ಲೈಬ್ರರಿ’

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ಜಿಲ್ಲೆ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಗ್ರಂಥಾಲಯದಲ್ಲಿ ‘ವರ್ಚುಯಲ್ ಲೈಬ್ರರಿ’ ದಿನೇ ದಿನೇ ಮನ್ನಣೆಗಳಿಸುತ್ತಿದೆ.

ಇಡೀ ಕ್ಯಾಂಪಸ್‌ಗೇ ವೈ–ಫೈ ಸೌಲಭ್ಯ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಗ್ರಂಥಾಲಯದಲ್ಲಿರುವ ಇ–ಪುಸ್ತಕಗಳು, ಇ–ಆಕರ ಗ್ರಂಥಗಳನ್ನು ಓದುವ ಒಲವು ಹೆಚ್ಚಾಗಿ ವ್ಯಕ್ತಪಡಿಸುತ್ತಿದ್ದಾರೆ.

ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಇದು ಹೊಂದಿದೆ. ಸದಸ್ಯರಿಗೆ ಸ್ಮಾರ್ಟ್ ಕಾರ್ಡ್, ಇ–ಸಂಪನ್ಮೂಲ ಬಳಕೆಯ ಯೂಸರ್ ಐ.ಡಿ. ಮತ್ತು ಪಾಸ್‌ವರ್ಡ್‌ ಕೊಡಲಾಗಿದೆ.

₹12 ಕೋಟಿ ವೆಚ್ಚದಲ್ಲಿ ಕ್ಯಾಂಪಸ್‌ನಲ್ಲಿ ವೈ–ಫೈ ಸೌಲಭ್ಯವನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಾವಿರುವ ಜಾಗದಿಂದಲೇ ಇ–ಸಂಪನ್ಮೂಲಗಳನ್ನು ಓದಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಹೇಗೆ ಭಿನ್ನ?: ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ₹15 ಲಕ್ಷ ವೆಚ್ಚದಲ್ಲಿ ಆರ್‌ಎಫ್‌ಐಡಿ (Radio Frequency Identification) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಗ್ರಂಥಾಲಯದಲ್ಲಿ ಸಿಬ್ಬಂದಿ ಇಲ್ಲದಿದ್ದರೂ ವಿದ್ಯಾರ್ಥಿಗಳು ಬೇಕಾದ ಪುಸ್ತಕವನ್ನು ಸುಲಭವಾಗಿ ಹುಡುಕಿಕೊಳ್ಳಬಹುದು. ಅಷ್ಟೇ ಅಲ್ಲ, ಕಂಪ್ಯೂಟರ್‌ನಲ್ಲಿ ಹೆಸರು ದಾಖಲು ಮಾಡಿ ಹೊರಗೂ ತೆಗೆದುಕೊಂಡು ಹೋಗಬಹುದು.  ಕಂಪ್ಯೂಟರ್‌ನಲ್ಲಿ ದಾಖಲು ಮಾಡದೆ ಪುಸ್ತಕ ತೆಗೆದು ಕೊಂಡರೆ ‘ಅಲಾರಂ’ ಮೊಳಗುತ್ತದೆ. 

ಸದಸ್ಯರಿಗೆ ವಿತರಿಸಿರುವ ಸ್ಮಾರ್ಟ್ ಕಾರ್ಡ್ ಹಾಗೂ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಆರ್‌ಎಫ್‌ಐಡಿ ತಂತ್ರಜ್ಞಾನದ ಜತೆಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಯಾರೇ, ಯಾವುದೇ ಪುಸ್ತಕ ಎರವಲು ಪಡೆದರೆ, ಹಿಂದಿರುಗಿಸಿದರೆ ತಕ್ಷಣ ಎಸ್‌ಎಂಎಸ್ ಬರುತ್ತದೆ.

http://cuklibrary.ac.inಗೆ ಭೇಟಿ ನೀಡಿ ‘ರಿಮೋಟ್ ಆ್ಯಕ್ಸೆಸ್‌’ ಮೂಲಕ ಸದಸ್ಯರು ಖಾತೆಯನ್ನು ತೆರೆಯಬಹುದು. ತಮಗೆ ಬೇಕಾದ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅಲ್ಲಿರುವ ಸೇವ್ ಕಂಟೆಂಟ್‌ನಲ್ಲಿ ಉಳಿಸಿಕೊಳ್ಳಬಹುದು. ಕೋರ್ಸ್ ಮುಗಿಯುವವರೆಗೆ ಈ ಖಾತೆಯಲ್ಲಿ ಎಷ್ಟು ಬೇಕಾದರೂ ಮಾಹಿತಿಯನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದಾಗಿದೆ.

ಡೇಟಾ ಬೇಸ್: ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ), ಇಂಡಿಯಾ ಸ್ಟ್ಯಾಟ್ ಡೇಟಾ ಬೇಸ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದು, ಇದಕ್ಕಾಗಿ ವಿಶ್ವವಿದ್ಯಾಲಯವು ವಾರ್ಷಿಕ ₹12 ಲಕ್ಷ ಸೇವಾ ಶುಲ್ಕವನ್ನು ಭರಿಸುತ್ತಿದೆ’ ಎಂದು ಉಪ ಗ್ರಂಥಪಾಲಕ ಡಾ. ಪಿ.ಎಸ್.ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

 **

ವರ್ಚುಯಲ್ ಲೈಬ್ರರಿ ಅಂದ್ರೆ..

ಗ್ರಂಥಾಲಯಗಳಲ್ಲಿನ ಪುಸ್ತಕಗಳು, ಡೇಟಾ ಬೇಸ್, ಚಿತ್ರಗಳು, ಆಡಿಯೊ, ವಿಡಿಯೊ ಕ್ಲಿಪಿಂಗ್ಸ್‌ಅನ್ನು ಡಿಜಿಟಲ್ ಮಾದರಿಯಲ್ಲಿ ಒದಗಿಸುವ ವ್ಯವಸ್ಥಯೇ ‘ವರ್ಚುಯಲ್ ಲೈಬ್ರರಿ’.ವಿಶ್ವವಿದ್ಯಾಲಯದ ಪ್ರಕಟಣೆಗಳು, ಸಂಶೋಧನೆಗಳನ್ನು ಕೂಡ ಡಿಜಿಟಲ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.
**
ಲಭ್ಯವಿರುವ ಗ್ರಂಥಗಳು

41,238 - ಪುಸ್ತಕಗಳು
903 - ಇ–ಪುಸ್ತಕಗಳು
9,281 - ಬುಕ್ ಬ್ಯಾಂಕ್
8,897 - ಜರ್ನಲ್ಸ್

**
ಸಂಶೋಧನೆಗೆ ಬೇಕಾದ ಎಲ್ಲಾ ಆಕರ ಗ್ರಂಥಗಳನ್ನು ಬಳಸಿಕೊಂಡಿದ್ದೇನೆ. ಐಐಎಂ, ಐಐಟಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳೂ ಇಲ್ಲಿ ಸಿಗುತ್ತವೆ.
- ಶಶಿಕಾಂತ ಡಿ.ಎಚ್. ಸಂಶೋಧನಾ ವಿದ್ಯಾರ್ಥಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು