ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಗ್ನ ಪತ್ರಿಕೆ ಒಳಗೆ ಡ್ರಗ್‌!

Last Updated 23 ಫೆಬ್ರುವರಿ 2020, 6:06 IST
ಅಕ್ಷರ ಗಾತ್ರ

ಬೆಂಗಳೂರು: ಲಗ್ನ ಪತ್ರಿಕೆಯ ಒಳಗೆ ಬಚ್ಚಿಟ್ಟು ಮಧುರೆಯಿಂದ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ₹ 5.05 ಕೋಟಿ ಮೌಲ್ಯದ ಒಟ್ಟು 5.049 ಕೆ.ಜಿ ತೂಕದ ಮಾದಕ ವಸ್ತು ‘ಎಫಿಡ್ರಿನ್‌’ಅನ್ನು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೊರಿಯರ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿರುವ ಕುರಿತು ಕಸ್ಟಮ್ಸ್‌ ವಿಭಾಗದ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಶುಕ್ರವಾರ (ಫೆ. 21) ವಿಮಾನ ನಿಲ್ದಾಣದ ಕಾರ್ಗೋ ಕಾಂಪ್ಲೆಕ್ಸ್‌ನ ಕೊರಿಯರ್ ಟರ್ಮಿನಲ್‌ನಲ್ಲಿ ಪರಿಶೀಲನೆ ನಡೆಸಿದಾಗ, 43 ಲಗ್ನ ಪತ್ರಿಕೆಗಳಲ್ಲಿ ಒಳಗೆ 86 ಪಾಲಿಥಿನ್‌ ಸಂಚಿಗಳಲ್ಲಿ ಬಿಳಿ ಪೌಡರ್‌ ಪತ್ತೆಯಾಗಿವೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಎಫಿಡ್ರಿನ್‌ ಎನ್ನುವುದು ದೃಢಪಟ್ಟಿದೆ.

ಕಾರ್ಡ್‌ಬೋರ್ಡ್‌ನಲ್ಲಿ ಲಗ್ನಪತ್ರಿಕೆ ತಯಾರಿಸಲಾಗಿದ್ದು, ಅದರ ಮಧ್ಯದಲ್ಲಿ ಮಾದಕ ವಸ್ತು ತುಂಬಿದ ಸಂಚಿಗಳನ್ನು ಇಡಲಾಗಿತ್ತು. ಚೆನ್ನೈಯ ವ್ಯಕ್ತಿ ಸಾಗಿಸಲು ಯತ್ನಿಸಿರುವುದು ಗೊತ್ತಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಸಾಗಣೆ ಪತ್ತೆಯಾಗಿದೆ. ಪ್ಲಾಸ್ಟಿಕ್‌ ಬಾಬಿನ್ಸ್ ಒಳಗೆ ತುಂಬಿಸಿ ಸಾಗಿಸುತ್ತಿದ್ದ 5 ಕೆ.ಜಿ. ಎಫಿಡ್ರಿನ್‌ಅನ್ನು ಕಸ್ಟಮ್ಸ್‌ ಅಧಿಕಾರಿಗಳು ಇದೇ 18ರಂದು ಜಪ್ತಿ ಮಾಡಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 5 ಕೋಟಿ ಮೌಲ್ಯದ ಈ ಮಾದಕ ವಸ್ತುವನ್ನು ಕೂಡಾ ಮಧುರೆಯಿಂದ ಆಸ್ಟ್ರೇಲಿಯಾಕ್ಕೆ ಸಾಗಿಸಲಾಗುತ್ತಿತ್ತು. ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್‌ ಮೂಲಗಳು ತಿಳಿಸಿವೆ.

ನೋವು ನಿವಾರಕ ತಯಾರಿಕೆಗೆ ಬಳಕೆ: ನೋವು ನಿವಾರಕ ಸೇರಿದಂತೆ ನಾನಾ ರೀತಿಯ ಔಷಧಗಳ ತಯಾರಿಕೆಗೆ ಬಳ ಸುವ ಎಫಿಡ್ರಿನ್‌, ಸಾಗಣೆ ಹಾಗೂ ಮಾರಾಟ ನಿಷೇಧಿಸಲಾಗಿದೆ. ವೈದ್ಯಕೀಯ ಉದ್ದೇಶ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಇವುಗಳನ್ನು ಬಳಸಿದರೆ ಅದು 1985ರ ಮಾದಕ ವಸ್ತು ನಿಷೇಧ ಕಾಯ್ದೆ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ, ಇದೇ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT