ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲ ರೈಲ್ವೇ ಯೋಜನೆ ಕೈಬಿಡಲು ಒತ್ತಾಯಿಸಿ ಸೈಬರ್ ಹೋರಾಟ 

Last Updated 25 ಮೇ 2020, 13:41 IST
ಅಕ್ಷರ ಗಾತ್ರ

ಬೆಂಗಳೂರು: ಹುಬ್ಬಳ್ಳಿ– ಅಂಕೋಲ ರೈಲ್ವೇ ಯೋಜನೆ ಕೈಬಿಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದ್ದು, ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ‘ಸೈಬರ್’‌ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಪರಿಸರ ತಜ್ಞರು, ಪರಿಸರಾಸಕ್ತ ಗುಂಪುಗಳು ಮತ್ತು ಸಾರ್ವಜನಿಕರು ಸೇರಿ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವೊಂದನ್ನು ಸಿದ್ಧಪಡಿಸಿದ್ದು, ಇದಕ್ಕೆ ಸುಮಾರು 13,000 ಜನ ಒಪ್ಪಿಗೆ ಸೂಚಿಸಿ ಸಹಿ ಮಾಡಿದ್ದಾರೆ ಎಂದು ‘ಫ್ರೈಡೆ ಫಾರ್‌ ಫ್ಯೂಚರ್‌ ಕರ್ನಾಟಕ’ ಎಂಬ ಸಂಘಟನೆ ತಿಳಿಸಿದೆ.

ಈ ಸೈಬರ್‌ ಸಮರದಲ್ಲಿ ಸುಮಾರು 7,000 ಟ್ವೀಟ್‌ಗಳ ಮೂಲಕ ಯೋಜನೆಯ ವಿರುದ್ಧ ಪ್ರತಿಭಟನೆ ದಾಖಲಿಸಿದ್ದು, ಇವುಗಳಿಗೆ ಸರ್ಕಾರದಿಂದ ಸ್ವೀಕೃತಿ ಬರಬೇಕಾಗಿದೆ ಎಂದು ಸಂಘಟನೆ ತಿಳಿಸಿದೆ.

ಮಾರ್ಚ್‌ನಲ್ಲಿ ಹುಬ್ಬಳ್ಳಿ ಮತ್ತು ಅಂಕೋಲಾ ರೈಲ್ವೇ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿತು. ಕೈಗಾರಿಕಾ ಸಚಿವರ ಜಗದೀಶ ಶೆಟ್ಟರ್‌ ಒತ್ತಾಸೆಯಿಂದಾಗಿ ಯೋಜನೆಗೆ ಸುಲಭವಾಗಿ ಒಪ್ಪಿಗೆ ದೊರಕಿದೆ. ಯೋಜನೆಯ ವಿರೋಧಿಸಿದ ಸದಸ್ಯರ ಮಾತಿಗೆ ಬೆಲೆ ಸಿಗಲಿಲ್ಲ. ಇದರಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುಮಾರು 2.2 ಲಕ್ಷ ಮರಗಳು ಮತ್ತು 700 ಹೆಕ್ಟೇರ್‌ ಅರಣ್ಯ ನಾಶವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಅಲ್ಲದೆ, 300 ಅಪರೂಪದ ಜೀವ ಪ್ರಬೇಧಗಳು ನಾಶವಾಗುತ್ತವೆ. ಅರಣ್ಯ ನಾಶದಿಂದ ಕಾಳಿ ಮತ್ತು ಗಂಗಾವಳಿ ನದಿಗಳ ಅಚ್ಚುಕಟ್ಟು ಪ್ರದೇಶಕ್ಕೆ ತುಂಬಲಾಗದ ನಷ್ಟವಾಗುತ್ತದೆ. ಕುಡಿಯುವ ನೀರು, ಕೃಷಿ, ಮೀನುಗಾರಿಕೆ ಸಂಕಷ್ಟಕ್ಕೆ ತುತ್ತಾಗುತ್ತವೆ ಎಂದೂ ಸಂಘಟನೆ ತಿಳಿಸಿದೆ.

ಅಪಾರ ಪ್ರಮಾಣದಲ್ಲಿ ಮರಗಳ ನಾಶದಿಂದ ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಮಾದರಿಯಲ್ಲಿ ಪ್ರವಾಹ ಮತ್ತು ಭೂಕುಸಿತ ಭವಿಷ್ಯದಲ್ಲಿ ಉತ್ತರಕನ್ನಡ ಭಾಗದಲ್ಲೂ ಸಂಭವಿಸಬಹುದು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಮಂಡಳಿಯ ಪಶ್ಚಿಮಘಟ್ಟ ಪರಿಸರ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈ ಪ್ರದೇಶದಲ್ಲಿ ನೂರಾರು ಕುಟುಂಬಗಳು ಅರಣ್ಯ ಕಿರು ಉತ್ಪನ್ನಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ವಾರ್ಷಿಕವಾಗಿ ಇದರ ವಹಿವಾಟು ₹297 ಕೋಟಿ ಇದೆ. ಅಷ್ಟೇ ಅಲ್ಲ, ಅಪರೂಪದ ವನ್ಯಜೀವಿಗಳು ಆಹಾರ, ವಾಸ ಸ್ಥಾನ, ಸಂತಾನೋತ್ಪತ್ತಿ ನೆಲೆಯನ್ನು ಕಳೆದುಕೊಳ್ಳಲಿವೆ. ಮಾನವ–ವನ್ಯಜೀವಿ ಸಂಘರ್ಷ ಪ್ರದೇಶವಾಗಿ ಮಾರ್ಪಡಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT