ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಬರ್ ವಿಧಿವಿಜ್ಞಾನ ಕೇಂದ್ರ’ ನಿರ್ಮಾಣ ಟೆಂಡರ್‌ ಅಕ್ರಮ ?

ಕಡಿಮೆ ದರ ನಮೂದಿಸಿದ ಕೇಂದ್ರ ಸರ್ಕಾರದ ಕಂಪನಿಗೆ ಅರ್ಧಚಂದ್ರ
Last Updated 30 ಸೆಪ್ಟೆಂಬರ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಕಮಿಷನರೇಟ್‌ ಹಾಗೂ ಜಿಲ್ಲೆಗಳಲ್ಲಿ ಪ್ರತ್ಯೇಕ ‘ಸೈಬರ್ ವಿಧಿವಿಜ್ಞಾನ ಕೇಂದ್ರ’ ನಿರ್ಮಾಣಕ್ಕಾಗಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಅಕ್ರಮ ನಡೆದಿರುವ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಮುಂಬೈನ ‘ಸ್ಮಾರ್ಟ್‌ ಚಿಪ್’ ಕಂಪನಿಗೆ ಕಾರ್ಯಾದೇಶ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಟೆಂಡರ್‌ನಲ್ಲಿ ಅತಿ ಕಡಿಮೆ ದರ ನಮೂದಿಸಿದ (ಎಲ್‌–1) ಕೇಂದ್ರ ಸರ್ಕಾರ ಸ್ವಾಮ್ಯದ ಎಚ್‌ಎಎಲ್‌ (ಹಿಂದೂಸ್ಥಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌) ಸಹಭಾಗಿತ್ವದ ಕಂಪನಿ ‘ಬಿಎಇಎಚ್‌ಎಎಲ್‌ ಸಾಫ್ಟ್‌ವೇರ್‌’ಗೆ ನೀಡದೇ, ಹೆಚ್ಚಿನ ದರ ನಮೂದಿಸಿದ ಕಂಪನಿಗೆ ಟೆಂಡರ್‌ ನೀಡಲಾಗಿದೆ ಎಂಬುದು ಆರೋಪ. ಈ ಸಂಬಂಧ ‘ಬಿಎಇಎಚ್‌ಎಎಲ್‌ ಸಾಫ್ಟ್‌ವೇರ್‌’ ಕಂಪನಿಯು ಮುಖ್ಯಮಂತ್ರಿ ಅವರಿಗೆ ದೂರನ್ನೂ ನೀಡಿದೆ.

ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಹಾಗೂ ಅಂಥ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಲು ಸಿಐಡಿ ಕೇಂದ್ರ ಕಚೇರಿಯಲ್ಲಿ ಈಗಾಗಲೇ ಸೈಬರ್ ವಿಧಿವಿಜ್ಞಾನ ಕೇಂದ್ರ ತೆರೆಯಲಾಗಿದೆ. ಇದೇ ಮಾದರಿಯ ಕೇಂದ್ರಗಳನ್ನು ರಾಜ್ಯದಾದ್ಯಂತ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ‘ಪೊಲೀಸ್ ಪಡೆ ಆಧುನೀಕರಣ ಯೋಜನೆ’ಯಡಿ ₹ 19.74 ಕೋಟಿ ಅನುದಾನ ನೀಡಿದೆ.

ಕೇಂದ್ರಗಳ ನಿರ್ಮಾಣದ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಯ ಅಪರಾಧ ಹಾಗೂ ತಾಂತ್ರಿಕ ವಿಭಾಗದ ಸಮಿತಿಗೆ ಆರಂಭದಲ್ಲಿ ವಹಿಸಲಾಗಿತ್ತು. ಈಗ ಆ ಜವಾಬ್ದಾರಿಯನ್ನು ಪೊಲೀಸ್ ಕಂಪ್ಯೂಟರ್ ವಿಭಾಗ ವಹಿಸಿಕೊಂಡಿದೆ. ಈ ವಿಭಾಗದ ಎಡಿಜಿಪಿ ನೇತೃತ್ವದ ಸಮಿತಿ ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಅವಧಿಯಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಕಾರ್ಯಾದೇಶವನ್ನು ‘ಸ್ಮಾರ್ಟ್‌ ಚಿಪ್’ ಕಂಪನಿಗೆ ನೀಡಿದೆ.

ಮೂರು ಬಾರಿ ಟೆಂಡರ್‌: ‘ಸೈಬರ್ ವಿಧಿವಿಜ್ಞಾನ ಕೇಂದ್ರ’ ನಿರ್ಮಾಣ ಹಾಗೂ ಕೇಂದ್ರಕ್ಕೆ ಬೇಕಾಗುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದೆ’ ಎಂದು ಮುಖ್ಯಮಂತ್ರಿ ಅವರಿಗೆ ನೀಡಿದ ದೂರಿನಲ್ಲಿ ಕಂಪನಿ ತಿಳಿಸಿದೆ.

‘2017ರ ಡಿಸೆಂಬರ್‌ನಲ್ಲಿ ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ನಮ್ಮ ಕಂಪನಿ ಪಾಲ್ಗೊಂಡಿತ್ತು. ಟೆಂಡರ್‌ ನೀಡಲು ತಾಂತ್ರಿಕ ಸಮಿತಿಯು ಒಪ್ಪಿಗೆ ನೀಡಿತ್ತು. ಬಳಿಕವೇ ಕಂಪನಿಯನ್ನು ‘ಲಿಸ್ಟ್‌–1’ ಎಂಬುದಾಗಿ ಘೋಷಿಸಲಾಗಿತ್ತು. ಬಳಿಕ ಸಂಬಂಧಪಟ್ಟ ಎಡಿಜಿಪಿ ಅವರಿಗೆ ಇಂಗಿತ ಪತ್ರ (ಲೆಟರ್ ಆಫ್‌ ಇಂಟೆಂಟ್) ಸಹ ನೀಡಲಾಗಿತ್ತು.’

‘ಪುನಃ ಸಭೆ ನಡೆಸಿದ್ದ ಸಮಿತಿ, ‘ಕೆಲಸಕ್ಕೆ ಹಣ ಬಿಡುಗಡೆ ಮಾಡಲು ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಹೆಚ್ಚಳ ಆಗಿ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಹೀಗಾಗಿ, ಟೆಂಡರ್‌ ಪ್ರಕ್ರಿಯೆಯನ್ನು ಸದ್ಯಕ್ಕೆ
ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿತ್ತು. ನಿಜವಿರಬಹುದೆಂದು ನಾವು ಸುಮ್ಮನಾಗಿದ್ದೆವು’ ಎಂದು ದೂರಿನಲ್ಲಿ ಹೇಳಲಾಗಿದೆ.

‘2018ರ ಡಿಸೆಂಬರ್‌ನಲ್ಲಿ ಎರಡನೇ ಬಾರಿ ಟೆಂಡರ್‌ ಕರೆಯಲಾಗಿತ್ತು. ಅಲ್ಲಿ ನಮಗೇ ಟೆಂಡರ್‌ ಸಿಕ್ಕಿತ್ತು. ಕೇಂದ್ರ ನಿರ್ಮಾಣಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೆವು. ಆವಾಗಲೂ ದಿಢೀರ್ ಟೆಂಡರ್ ರದ್ದುಪಡಿಸಲಾಗಿತ್ತು. ಈಗ ಮೂರನೇ ಬಾರಿ ಟೆಂಡರ್‌ ನಡೆಸಲಾಗಿದೆ. ಎರಡು ಬಾರಿ ಟೆಂಡರ್‌ನಲ್ಲಿ ಪಾಲ್ಗೊಂಡವರಿಗೆ ಮೂರನೇ ಬಾರಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂಬ ಷರತ್ತು ಹಾಕಿ, ಬೇರೆ ಕಂಪನಿಗೆ ಕಾರ್ಯಾದೇಶ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ದೂರಿನಲ್ಲಿ
ಒತ್ತಾಯಿಸಲಾಗಿದೆ.

2017ರಲ್ಲಿ ಎಸಿಬಿಗೆ ದೂರು

‘ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿಲ್ಲ’ ಎಂದು ಆರೋಪಿಸಿ ಹೈದರಾಬಾದ್‌ನ ಸೀತಾ ಕಾರ್ಪ್‌ (ಇಂಡಿಯಾ) ಕಂಪನಿ ನಿರ್ದೇಶಕರೊಬ್ಬರು 2017ರಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ಅದರನ್ವಯ ಡಿವೈಎಸ್ಪಿ ಎಂ.ಕೆ.ತಮ್ಮಯ್ಯ ಅವರು ತನಿಖೆ ಆರಂಭಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮದ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಸ್ಮಾರ್ಟ್‌ ಚಿಪ್’ ಕಂಪನಿ ಪ್ರತಿನಿಧಿಗಳು ಲಭ್ಯರಾಗಲಿಲ್ಲ.

* ಅಪರಾಧ ಹಾಗೂ ತಾಂತ್ರಿಕ ವಿಭಾಗದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಟೆಂಡರ್‌ ಪ್ರಕ್ರಿಯೆ ಆರಂಭವಾಗಿತ್ತು. ಈಗ ನಾನು ಅಲ್ಲಿಲ್ಲ. ಟೆಂಡರ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲ

-ಎಂ.ಎ. ಸಲೀಂ, ಎಡಿಜಿಪಿ (ಆಡಳಿತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT