ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆ

ಐಷಾರಾಮಿ ಸೇರಿದಂತೆ ಮೂರು ಸಾವಿರ ಹೊಸ ಬಸ್ ಖರೀದಿ: ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ
Last Updated 23 ಫೆಬ್ರುವರಿ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಪೆಟ್ರೋಲ್, ಡೀಸೆಲ್ ಬೆಲೆ ದರ ಪರಿಷ್ಕರಣೆಗೆ ಅನುಗುಣವಾಗಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಪರಿಷ್ಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

‘2013-14ರಲ್ಲಿ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಮತ್ತೆ ಹೆಚ್ಚಳ ಮಾಡಿಲ್ಲ. ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ, ಡೀಸೆಲ್, ಪೆಟ್ರೋಲ್ ದರ ಹೆಚ್ಚಳಕ್ಕೆ ಅನುಗುಣವಾಗಿ ಮೂರು ತಿಂಗಳಿಗೊಮ್ಮೆ ಪ್ರಯಾಣ ದರ ಕೂಡ ಪರಿಷ್ಕರಿಸುವಂತೆ ಪ್ರಸ್ತಾವಿಸಲಾಗಿದೆ’ ಎಂದರು.

3 ಸಾವಿರ ಬಸ್ ಖರೀದಿ: ಐಷಾರಾಮಿ ಸೇರಿದಂತೆ ಮೂರು ಸಾವಿರ ಹೊಸ ಬಸ್ ಖರೀದಿ ಮಾಡಲಾಗುವುದು. ಸ್ಲೀಪರ್‌ ಕೋಚ್ 24 ಬಸ್‍ಗಳನ್ನು ಖರೀದಿ ಮಾಡಲಾಗುತ್ತದೆ ಎಂದರು.

‘8 ಲಕ್ಷ ಕಿ.ಮೀ. ಕ್ರಮಿಸಿದ ಬಸ್‍ಗಳನ್ನು ಗುಜರಿಗೆ ಹಾಕಲಾಗುತ್ತಿದ್ದು, ನಮ್ಮ ಬಸ್‍ಗಳ ಚಾರ್ಸಿ 20 ಲಕ್ಷ ಕಿ. ಮೀ. ಬಾಳಿಕೆ ಬರುತ್ತವೆ. ಹೀಗಾಗಿ 7 ಲಕ್ಷ ಕಿ.ಮೀ. ಕ್ರಮಿಸಿದ ಬಸ್‍ಗಳನ್ನು ಹರಾಜು ಮಾಡದೆ ಮರು ಕವಚ ನಿರ್ಮಾಣ ಮಾಡಿ ಮತ್ತೆ 6-7 ಲಕ್ಷ ಕಿ.ಮೀ. ಬಳಸಲು ಉದ್ದೇಶಿಸಲಾಗಿದೆ’ ಎಂದರು.

ಕಾವೇರಿ ನದಿ ನೀರು ಹೋರಾಟಗಾರರ ಮೇಲೆ ಹೂಡಲಾಗಿದ್ದ ಶೇ 90ರಷ್ಟು ಮೊಕದ್ದಮೆ ಹಿಂಪಡೆಯಲಾಗುತ್ತಿದೆ. ಆದರೆ, ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡಿದ ಪ್ರಕರಣ ಹಿಂದಕ್ಕೆ ಪಡೆದಿಲ್ಲ’ ಎಂದರು.

ವರಿಷ್ಠರ ತೀರ್ಮಾನ ಅಂತಿಮ: ‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ಕೈಗೊಳ್ಳುವ ತೀರ್ಮಾನವೇ ಅಂತಿಮ’ ಎಂದರು.

ರೆಕ್ಸಿನ್, ಕಂಪ್ಯೂಟರ್ ಮತ್ತು ಸರ್ವರ್ ಖರೀದಿಯಲ್ಲಿ ಅಕ್ರಮ

ಬೆಂಗಳೂರು: ‘ಸಾರಿಗೆ ನಿಗಮದಲ್ಲಿ ರೆಕ್ಸಿನ್, ಕಂಪ್ಯೂಟರ್ ಮತ್ತು ಸರ್ವರ್ ಖರೀದಿಯಲ್ಲಿ ಅಕ್ರಮ ನಡೆದಿರುವುದನ್ನು ವಿಚಕ್ಷಣ ದಳ ಪತ್ತೆ ಹಚ್ಚಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದು ಡಿ.ಸಿ. ತಮ್ಮಣ್ಣ ಹೇಳಿದರು.

‘₹ 17 ಕೋಟಿ ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಸರ್ವರ್ ಖರೀದಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದ್ದು ಈ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದರು.

‘ಈಶಾನ್ಯ ಸಾರಿಗೆ ನಿಗಮದಲ್ಲೂ ಅಕ್ರಮ ನಡೆದಿದೆ. 141 ನೌಕರರು ವರ್ಗಾವಣೆಗಾಗಿ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 15 ನೌಕರರನ್ನು ಅಮಾನತು ಮಾಡಲಾಗಿದೆ’ ಎಂದರು.

‘ಐದು ವರ್ಷಗಳ ಅವಧಿಯಲ್ಲಿ ನಡೆದ ಎಲ್ಲ ವ್ಯವಹಾರಗಳ ತನಿಖೆ ನಡೆಸಲಾಗಿದೆ. ಬಸ್ ಬಾಡಿ ಬಿಲ್ಡಿಂಗ್, ಬಿಡಿಭಾಗಗಳ ಖರೀದಿಯಲ್ಲೂ ಅಕ್ರಮ ನಡೆದಿದೆ. ಬಸ್ ಬಾಡಿ ಬಿಲ್ಡಿಂಗ್‌ಗೆ 2017-18ರಲ್ಲಿ ₹ 112 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಯಾವ ಬಸ್, ಏನೇನು ಕೆಲಸ ಮಾಡಲಾಗಿದೆ ಎಂದು ಎಲ್ಲ ವರದಿ ಕೇಳಿದ್ದೇನೆ’ ಎಂದರು.

‘ಯಾವುದೋ ಕಂಪನಿ ಹೆಸರು ಹೇಳಿ ಬಿಡಿಭಾಗ ಖರೀದಿ ಮಾಡಲಾಗುತ್ತಿದೆ. ಅದೇ ಅಕ್ರಮಕ್ಕೆ ಮೂಲ. ಈಗ ಬೇಕಾಬಿಟ್ಟಿ ಬಿಡಿಭಾಗಗಳ ಖರೀದಿ ನಡೆಯುತ್ತಿದೆ. ಇದನ್ನು ತಪ್ಪಿಸಲು ಇನ್ನು ಮುಂದೆ ಬಿಡಿಭಾಗಗಳ ಉತ್ಪಾದಿಸುವ ಕಂಪನಿಗಳಿಗೆ ನಿಗಮದಲ್ಲಿ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ’ ಎಂದರು.

‘ನಾಲ್ಕೂ ಸಾರಿಗೆ ನಿಗಮಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ನಿತ್ಯದ ಆದಾಯ ಉತ್ತಮವಾಗಿದ್ದರೂ ಅಕ್ರಮಗಳಿಂದ ನಷ್ಟ ಉಂಟಾಗುತ್ತಿದೆ. ಬಿಎಂಟಿಸಿಯಲ್ಲಿ ವರ್ಷಕ್ಕೆ ₹ 250 ಕೋಟಿ ನಷ್ಟ ಆಗುತ್ತಿದೆ. ಮೂರು ವರ್ಷ ಅವಕಾಶ ಸಿಕ್ಕರೆ ನಿಗಮಗಳನ್ನು ಲಾಭಕ್ಕೆ ಬರುವಂತೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT