ಗುರುವಾರ , ನವೆಂಬರ್ 14, 2019
18 °C

ಡಿ.ಕೆ ಶಿವಕುಮಾರ್‌ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಜಾರಿ ನಿರ್ದೇಶನಾಲಯ

Published:
Updated:

ನವದೆಹಲಿ: ‘ವಿಚಾರಣೆ ವೇಳೆ ಸಹಕಾರ ನೀಡದೆ ನುಣಿಚಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್‌ ಅವರಿಂದ ಅಗತ್ಯ ಮಾಹಿತಿ ಸಂಗ್ರಹಿಸಬೇಕಿದೆ. ಜಾಮೀನು ನೀಡದೆ ಅವರನ್ನು ನಮ್ಮ ವಶಕ್ಕೇ ನೀಡಬೇಕು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಶಿವಕುಮಾರ್‌ ಅವರ ಕಸ್ಟಡಿ ಅವಧಿ ಮಂಗಳವಾರ ಪೂರ್ಣಗೊಳ್ಳಲಿದೆ. ಅವರ ಪರ ವಕೀಲರು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಇ.ಡಿ. ಅಧಿಕಾರಿಗಳು ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಅತ್ಯಂತ ಪ್ರಭಾವಿಯಾಗಿರುವ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ದೂರಲಾಗಿದೆ.

ನ್ಯಾಯಾಲಯವು ಕಳೆದ ಶುಕ್ರವಾರ ಶಿವಕುಮಾರ್‌ ಅವರನ್ನು ವಿಚಾರಣೆಗಾಗಿ ಮತ್ತೆ ಐದು ದಿನಗಳ ಅವಧಿಗೆ ಇ.ಡಿ. ವಶಕ್ಕೆ ನೀಡಿತ್ತು. ಆದರೆ, ‘ಅನಾರೋಗ್ಯದ ಕಾರಣ ಶನಿವಾರದಿಂದ ಇಲ್ಲಿನ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯು ಸೋಮವಾರವೂ ವಿಚಾರಣೆಗೆ ಲಭ್ಯವಾಗಿಲ್ಲ’ ಎಂದು ತಿಳಿಸಿರುವ ಇ.ಡಿ. ಮತ್ತೆ ತನ್ನ ವಶಕ್ಕೆ ಸಲ್ಲಿಸುವಂತೆ ಕೋರಿದೆ.

‘ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವುದು ತನಿಖೆಯ ವೇಳೆ ಗೊತ್ತಾಗಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಬೇಕಿದ್ದು, ಜಾಮೀನು ನಿರಾಕರಿಸಿ ನಮ್ಮ ವಶಕ್ಕೆ ಸಲ್ಲಿಸಿ’ ಎಂಬುದು ಇ.ಡಿ. ಬೇಡಿಕೆಯಾಗಿದೆ.

ಮಂಗಳವಾರದ ವಿಚಾರಣೆಯ ವೇಳೆ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡದೆ, ಇ.ಡಿ.ಯ ಕಸ್ಟಡಿ ಅವಧಿಯನ್ನೂ ವಿಸ್ತರಿಸದೆ ನ್ಯಾಯಾಂಗ ಬಂಧನಕ್ಕೆಒಪ್ಪಿಸಿದಲ್ಲಿ ಶಿವಕುಮಾರ್‌ ಅವರನ್ನು ತಿಹಾರ್‌ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಆರೋಗ್ಯ ಸ್ಥಿತಿ ಸುಧಾರಿಸದಿದ್ದರೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತದೆ.

ಆರೋಗ್ಯ ತಪಾಸಣೆ:  ಜ್ವರ ಹಾಗೂ ರಕ್ತದ ಒತ್ತಡದಲ್ಲಿ ಏರುಪೇರಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್‌ ಅವರನ್ನು ಭಾನುವಾರ ಸೋಮವಾರ ಹೃದ್ರೋಗ ವಿಭಾಗದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.

ತಪಾಸಣೆಯ ಅಂಗವಾಗಿ ಅವರನ್ನು ಇಸಿಜಿ ಮತ್ತು ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಮೇಲ್ಮನವಿ: ಇಂದು ಆದೇಶ ಸಾಧ್ಯತೆ
ಬೆಂಗಳೂರು: ‘ದೆಹಲಿ ನಿವಾಸದಲ್ಲಿ ಆದಾಯ ತೆರಿಗೆ ದಾಳಿ ವೇಳೆ ದೊರೆತ ₹ 8.69 ಕೋಟಿ ಲೆಕ್ಕವಿಲ್ಲದ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್ ರದ್ದುಗೊಳಿಸಬೇಕು’ ಎಂದು ಕೋರಿ ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿ ಮೇಲಿನ ಆದೇಶವನ್ನು ಹೈಕೋರ್ಟ್‌ ಮಂಗಳವಾರ (ಸೆ.17) ಪ್ರಕಟಿಸುವ ಸಾಧ್ಯತೆ ಇದೆ.

ಈ ಕುರಿತಂತೆ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರು ಹಾಗೂ ಇ.ಡಿ ಪರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆದೇಶ ಕಾಯ್ದಿರಿಸಿ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿದೆ.

ಪ್ರತಿಕ್ರಿಯಿಸಿ (+)