ಮಂಗಳವಾರ, ಜೂಲೈ 7, 2020
27 °C
ಫೋನ್ ಕದ್ದಾಲಿಕೆ: ತನಿಖೆಗೆ ಕಾಂಗ್ರೆಸ್ ಆಗ್ರಹ

ಡಿಕೆಶಿ–ಎಂ.ಬಿ.ಪಾಟೀಲ ‘ಜಗಳ್‌ಬಂದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರ ನಡುವೆ ಜಗಳ ತಂದಿಟ್ಟಿದ್ದು, ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್– ಎಂ.ಬಿ.ಪಾಟೀಲ ಪರಸ್ಪರ ನಿಂದಿಸಿಕೊಂಡಿದ್ದಾರೆ.

ಇಬ್ಬರು ನಾಯಕರ ನಡುವೆ ಜೋರು ವಾಗ್ವಾದ ನಡೆದಿದ್ದು, ಜಾತಿ ಹೆಸರಿನಲ್ಲಿ ಆರೋ‍ಪ, ಟೀಕೆಗಳು ವ್ಯಕ್ತವಾಗಿದೆ. ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಸಮರ್ಥನೆ: ಫೋನ್ ಕದ್ದಾಲಿಕೆ ನಡೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದು, ಮೈತ್ರಿ ಸರ್ಕಾರದ ಅವಧಿಯಲ್ಲಿ ಇಂಥ ಕೆಲಸಕ್ಕೆ ಕೈ ಹಾಕಿಲ್ಲ. ಹಿಂದೆ ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರಿಗೆ ಈ ವಿಚಾರ ಗೊತ್ತಿದ್ದರೆ ಅಂದೇ ದೂರು ದಾಖಲಿಸಿ ತನಿಖೆಗೆ ಆದೇಶಿಸಬೇಕಿತ್ತು. ಆಗ ಸುಮ್ಮನಿದ್ದು, ಈಗ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಇಂಥ ಹೇಳಿಕೆ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

‘ನನ್ನ ಮಾಹಿತಿ ಪ್ರಕಾರ ಯಾವುದೇ ಫೋನ್ ಕದ್ದಾಲಿಕೆ ನಡೆದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾವ ರೀತಿಯ ತನಿಖೆಯನ್ನಾದರೂ ಮಾಡಿಸಲಿ’ ಎಂದಿದ್ದಾರೆ.

ಜಾತಿ ರಾಜಕಾರಣ: ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ, ‘ಜಾತಿ ವ್ಯಾಮೋಹದಿಂದ ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಪರವಾಗಿ ಶಿವಕುಮಾರ್ ಮಾತನಾಡಿರಬಹುದು. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು, ಒಕ್ಕಲಿಗರನ್ನು ಓಲೈಸಿಕೊಳ್ಳಲು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ನನಗೆ ಅಂಥ ರಾಜಕಾರಣ ಅಗತ್ಯವಿಲ್ಲ’ ಎಂದು ಟೀಕಿಸಿದ್ದಾರೆ.

‘ಫೋನ್ ಕದ್ದಾಲಿಕೆ ಆಗಿದೆ ಎಂದು ಹೇಳಿಲ್ಲ. ತನಿಖೆ ನಡೆಸಿ ಎಂದಷ್ಟೇ ಹೇಳಿದ್ದೇನೆ. ಗೃಹ ಸಚಿವನಾಗಿದ್ದ ಅವಧಿಯಲ್ಲೇನಾದರೂ ಕದ್ದಾಲಿಕೆ ಆಗಿದೆಯೇ ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಿಸಿದೆ. ಕೆಲವರು ಇಲ್ಲ, ಕೆಲವರು ಆಗಿರಬಹುದು ಎನ್ನುವ ಸಂಶಯ ವ್ಯಕ್ತಪಡಿಸಿದರು. ಇದನ್ನೇ ನಾನು ಮಾಧ್ಯಮದ ಎದುರು ಹೇಳಿದ್ದೆ. ಆದರೆ, ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ಶಿವಕುಮಾರ್‌ ಹೇಳಿರುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡುವಂತಹ ವ್ಯಕ್ತಿಯಲ್ಲ. ಇಂಥವರೇ ಮಾಡಿರಬಹುದು ಎಂದು ದೂರುವುದಿಲ್ಲ. ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು’ ಎಂದರು.

ತನಿಖೆ ನಡೆಸಲಿ: ‘ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲಿ ಫೋನ್ ಕದ್ದಾಲಿಕೆ ನಡೆದಿಲ್ಲ. ಇದು ಗೃಹ ಸಚಿವರ ವ್ಯಾಪ್ತಿಗೂ ಬರುವುದಿಲ್ಲ. ಫೋನ್ ಕದ್ದಾಲಿಕೆ ನಡೆದಿದ್ದರೆ ತನಿಖೆ ನಡೆಸಲಿ’ ಎಂದು ಜಿ.ಪರಮೇಶ್ವರ ಆಗ್ರಹಿಸಿದರು.

ಕೇಂದ್ರ ಕದ್ದಾಲಿಕೆ: ದಿನೇಶ್

ಕೇಂದ್ರ ಸರ್ಕಾರ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದು, ಇಂದಿಗೂ ಅದು ಮುಂದುವರಿದಿದೆ ಎಂದು ಕೆಪಿಸಿಸಿ ಅಧ್ಯಕ್ಷರ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

‘ಫೋನ್ ಕದ್ದಾಲಿಕೆ ನಡೆದಿದೆ ಎಂದು ಬಿಜೆಪಿ ಮುಖಂಡರೇ ಆರೋಪ ಮಾಡುತ್ತಿದ್ದು, ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು ತನಿಖೆ ಮಾಡಿಸಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು