ಸೋಮವಾರ, ಸೆಪ್ಟೆಂಬರ್ 20, 2021
23 °C
ಸಾಂಪ್ರದಾಯಿಕ ಕೃಷಿಯಿಂದ ಬೇಸತ್ತು ಹೈನುಗಾರಿಕೆ ಆರಂಭ; ನಿತ್ಯ 25 ಲೀಟರ್ ಹಾಲು ಸಂಗ್ರಹ

ಸುಭದ್ರ ಬದುಕಿಗೆ ಆಧಾರವಾದ ‘ಹೈನುಗಾರಿಕೆ’

ಬಸವರಾಜ ಅ. ನಾಡಗೌಡ Updated:

ಅಕ್ಷರ ಗಾತ್ರ : | |

Prajavani

ಇಳಕಲ್: ಅನಿಶ್ಚಿತ ಮಳೆಯಿಂದಾಗಿ ಬಸವಳಿದಿದ್ದ ಹುನಗುಂದದ ಸಿದ್ದಪ್ಪ ಸಂಗಪ್ಪ ಹೊಸೂರ ನಿಯಮಿತ ಆದಾಯಕ್ಕಾಗಿ ಹಾಗೂ ಜಮೀನಿನ ಫಲವತ್ತತೆ ಹೆಚ್ಚಿಸಲು ಹೈನುಗಾರಿಕೆ ಆರಂಭಿಸಿ ಯಶಸ್ವಿಯಾಗಿದ್ದಾರೆ.

ಅನಿಶ್ಚಿತ ಮಳೆ, ಹೆಚ್ಚುತ್ತಿರುವ ಕೃಷಿ ಹೂಡಿಕೆ, ಬೆಳೆದ ಫಸಲಿಗೆ ಖಾತರಿ ಇಲ್ಲದ ದರ ಹಾಗೂ ರೋಗರುಜಿನಗಳಿಂದಾಗಿ ಮಳೆಯಾಧರಿತ ಕೃಷಿಯನ್ನು ಅವಲಂಬಿಸಿದರೇ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ ಎನ್ನುವ ಸಿದ್ಧಪ್ಪ ಹೈನಗಾರಿಕೆ ಮೂಲಕ ಸ್ವ ಉದ್ಯೋಗಕ್ಕೆ ದಾರಿ ಮಾಡಿಕೊಂಡಿದ್ದಾರೆ.

9ನೇ ತರಗತಿವರೆಗೆ ಓದಿರುವ ಸಿದ್ಧಪ್ಪ ಶಾಲೆ ಬಿಟ್ಟ ನಂತರ ತಮ್ಮ 10 ಎಕರೆ ಜಮೀನಿನಲ್ಲಿ ಅಪ್ಪನಂತೆ ಒಕ್ಕಲುತನ ಆರಂಭಿಸಿದರು. ಕುಟುಂಬದ ಸದಸ್ಯರೆಲ್ಲ ದುಡಿದರೂ ನಿಗದಿತ ಆದಾಯದ ಖಾತರಿ ಇರಲಿಲ್ಲ. ಒಕ್ಕಲುತನದ ಜೊತೆಗೆ ಹೈನುಗಾರಿಕೆ ಮಾಡಿದರೇ ಕೈ ಹಿಡಿಯುತ್ತದೆ ಹಾಗೂ ಜಮೀನಿನ ಫಲವತ್ತತೆ ಹೆಚ್ಚಿಸಲು ಅಗತ್ಯವಾಗಿರುವ ಕೊಟ್ಟಿಗೆ ಗೊಬ್ಬರವೂ ಸಿಗುತ್ತದೆ ಎಂದು ಸಿದ್ದಪ್ಪ ಲೆಕ್ಕಾಚಾರ ಹಾಕಿದರು.

ಹುನಗುಂದಕ್ಕೆ ಹೊಂದಿಕೊಂಡಂತೆ ಗುಡ್ಡದ ಹತ್ತಿರವಿರುವ ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆ ಕಟ್ಟಿಸಿದರು. ಬೋರ್‌ವೆಲ್‌ ಹಾಕಿ ಒಂದು ಎಕರೆಯಲ್ಲಿ ಮೇವು ಬೆಳೆದರು. ಬ್ಯಾಂಕ್‌ಗಳ ನೆರವು ಪಡೆದು ತಲಾ ಮೂರು ಜೆರ್ಸಿ ಹಾಗೂ ಎಚ್ಎಫ್ ತಳಿಯ ಆಕಳು ತಂದು ಹೈನುಗಾರಿಕೆ ಆರಂಭಿಸಿದರು.

ಸಿದ್ದಪ್ಪನ ತಂದೆ ಸಂಗಪ್ಪ, ಪತ್ನಿ ವಿಶಾಲ ಅವರು ಆಕಳು ಪಾಲನೆ, ಪೋಷಣೆ ಮಾಡಿ, ಹಾಲು ಕರೆದು, ಕೆಎಂಎಫ್‌ಗೆ ನಿತ್ಯ 25 ಲೀಟರ್ ಹಾಲು ಹಾಕುತ್ತಾರೆ. ಈಗ ತಿಮ್ಮಾಪುರ ಗ್ರಾಮಕ್ಕೆ ಹೋಗಿ ಹಾಲು ಹಾಕಬೇಕಿದ್ದು, ಕೆಎಂಎಫ್‌ನವರು ಇಲ್ಲಿಗೆ ಬಂದು ಸಂಗ್ರಹಿಸಿದರೇ ಓಡಾಟ ತಪ್ಪುತ್ತದೆ ಎಂಬುದು ಸಿದ್ದಪ್ಪನ ಬೇಡಿಕೆ. ಹಸುಗಳ ಆರೋಗ್ಯ ಮೇಲ್ವಿಚಾರಣೆಗೆ ಪಶು ಸಂಗೋಪನೆ ಇಲಾಖೆಯ ವೈದ್ಯರು ಸಹಕಾರ ನೀಡುತ್ತಿದ್ದಾರೆ ಎಂದು ಸಿದ್ದಪ್ಪ ಸ್ಮರಿಸಿದರು.

‘ಹೈನುಗಾರಿಕೆ ಬದುಕಿಗೆ ಆರ್ಥಿಕ ಭದ್ರತೆ ನೀಡಿದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಜಮೀನಿಗೆ ಸಾವಯವ ಗೊಬ್ಬರ (ಹೆಂಡಿ, ಗಂಜಲ) ದೊರಕುತ್ತಿದ್ದು, ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇನ್ನೂ ಮುಂದೆ ರಾಸಾಯನಿಕ ಗೊಬ್ಬರಕ್ಕೆ ಖರ್ಚು ಮಾಡಬೇಕಿಲ್ಲ. ರೈತರು ನೀರಿನ ಲಭ್ಯತೆ ಕಡಿಮೆ ಇದ್ದರೂ ಕನಿಷ್ಟ 2ರಿಂದ 3 ಆಕಳು ಅಥವಾ ಎಮ್ಮೆಗಳನ್ನು ಸಾಕಿದರೇ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ’ ಎಂದು ಹೇಳುತ್ತಾರೆ.

ಸಿದ್ದಪ್ಪ ಸಂಪರ್ಕ ಸಂಖ್ಯೆ: 88616 49295.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು