ದಂಡುಪಾಳ್ಯ ಗ್ಯಾಂಗ್‌ ಮತ್ತೊಂದು ಕೊಲೆ ಪ್ರಕರಣದಲ್ಲಿ ಖುಲಾಸೆ

7

ದಂಡುಪಾಳ್ಯ ಗ್ಯಾಂಗ್‌ ಮತ್ತೊಂದು ಕೊಲೆ ಪ್ರಕರಣದಲ್ಲಿ ಖುಲಾಸೆ

Published:
Updated:
Deccan Herald

ಬೆಂಗಳೂರು: ಮತ್ತೊಂದು ಕೊಲೆ ಪ್ರಕರಣದಿಂದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಅನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗೀತಾ (35) ಕೊಲೆ ಪ್ರಕರಣದ ಅಪರಾಧಿಗಳಾದ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ, ನಲ್ಲತಿಮ್ಮ ಮತ್ತು ಲಕ್ಷ್ಮಮ್ಮ ‌ಖುಲಾಸೆಗೊಂಡವರು.

ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಕುರಿತು ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ ಮೃತ ಮಹಿಳೆಯ ಒಡವೆ ದೋಚಿದ ಅಪರಾಧಕ್ಕೆ ತಂಡದ ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಲಾಗಿದೆ. ಈ ಆರೋಪದಲ್ಲಿ ಲಕ್ಷ್ಮಮ್ಮ ಖುಲಾಸೆಗೊಂಡಿದ್ದಾರೆ.

ಅಪರಾಧಿಗಳು 2000 ನವೆಂಬರ್ 7 ರಂದು ಅಗ್ರಹಾರ ದಾಸರಹಳ್ಳಿಯಲ್ಲಿ ವಾಸವಿದ್ದ ಜಯರಾಮಯ್ಯ ಅವರ ಪತ್ನಿ ಗೀತಾ ಅವರ ಚಿನ್ನಾಭರಣ ದೋಚಿ ಕೊಲೆ ನಡೆಸಿದ ಆರೋಪಕ್ಕೆ ತುತ್ತಾಗಿದ್ದರು.

ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ‘ಗಲ್ಲು ಶಿಕ್ಷೆ ಆದೇಶ ತೃಪ್ತಿಕರವಾಗಿಲ್ಲ’ ಎಂದಿದ್ದ ಹೈಕೋರ್ಟ್‌ ಪುನಃ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು. ಮರು ವಿಚಾರಣೆಯಲ್ಲಿ ಗಲ್ಲು ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ಅಪರಾಧಿಗಳು ಈ ಆದೇಶವನ್ನೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

‘ಚಿನ್ನಾಭರಣ ದೋಚಿದ್ದಕ್ಕೆ ಮಾತ್ರವೇ ಸಾಕ್ಷ್ಯವಿದೆ. ಆದರೆ, ಕೊಲೆ ಮಾಡಿದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಕೊಲೆ ಆರೋಪದಿಂದ ದೋಷಮಕ್ತಗೊಳಿಸಿದೆ.

‘ಬೇರೆ ಪ್ರಕರಣಗಳಲ್ಲಿ ಅಪರಾಧಿಗಳ ಬಂಧನ ಅಗತ್ಯವಿಲ್ಲ ಎಂದಾದರೆ ಕೂಡಲೇ ಬಿಡುಗಡೆ ಮಾಡಿ’ ಎಂದೂ ನ್ಯಾಯಪೀಠ ಸೂಚಿಸಿದೆ.

ಅಪರಾಧಿಗಳ ಪರ ಹಷ್ಮತ್‌ ಪಾಷಾ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !