ಸೋಮವಾರ, ಆಗಸ್ಟ್ 26, 2019
27 °C
46 ವರ್ಷಗಳಲ್ಲಿ 6 ಬಾರಿ ತುಂಬಿದ ಮಲಪ್ರಭಾ

ಅಪಾಯಮಟ್ಟದಲ್ಲಿ ಕಾವೇರಿ, ಲಕ್ಷ್ಮಣತೀರ್ಥ

Published:
Updated:

ಮಡಿಕೇರಿ: ಕೊಡಗಿನಲ್ಲಿ ಮಳೆ ತೀವ್ರತೆ ಪಡೆದುಕೊಂಡಿದ್ದು, ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಳ್ಳ ಕೊಳ್ಳಗಳು ಭೋರ್ಗರೆಯುತ್ತಿವೆ. ಜಲಾವೃತವಾಗಿರುವ ಭಾಗಮಂಡಲದಲ್ಲಿ ಮತ್ತಷ್ಟು ನೀರು ಏರಿಕೆಯಾಗಿದೆ.

ಕಾವೇರಿ ನದಿ ಹರಿಯುವ ಭಾಗದ ಹಲವು ಕಡೆ ರಸ್ತೆ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಗೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಭೇತ್ರಿ ಬಳಿ ಸೇತುವೆ ಮಟ್ಟದಲ್ಲಿ ಕಾವೇರಿ ನೀರು ಹರಿಯುತ್ತಿದ್ದು, ಸೇತುವೆ ಮುಳುಗಡೆಯಾದರೆ ಮಡಿಕೇರಿ– ವಿರಾಜಪೇಟೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ವಿರಾಜಪೇಟೆ ತಾಲ್ಲೂಕು ಆರ್ಜಿ ಗ್ರಾಮದ ಸೇತುವೆ ಮುಳುಗಿದೆ. 

ಕಾವೇರಿ ಪ್ರವಾಹಕ್ಕೆ ಹೊದ್ದೂರು– ನಾಪೋಕ್ಲು, ಮೂರ್ನಾಡು– ಬಲಮುರಿ ರಸ್ತೆ ಸಂಪರ್ಕ ಕಡಿತವಾಗಿದೆ. ಕರಡಿಗೋಡು, ಗುಹ್ಯ ರಸ್ತೆ ಜಲಾವೃತವಾಗಿದ್ದು, ಕರಡಿಗೋಡು ನದಿಪಾತ್ರದ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕೊಡಗಿನ ಹಲವು ಸೇತುವೆಗಳು ಮುಳುಗಿವೆ. ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಸಾಧ್ಯವಾಗುತ್ತಿಲ್ಲ.

ತೇಲಿ ಬರುತ್ತಿವೆ ಮರದ ದಿಮ್ಮಿಗಳು: 

ಕಳೆದ ವರ್ಷ, ಭೂಕುಸಿತದಿಂದ ಮುಕ್ಕೋಡ್ಲು, ಮಾದಾಪುರ, ಇಗ್ಗೋಡ್ಲು ಭಾಗದಲ್ಲಿ ಸಾವಿರಾರು ಮರಗಳು ಉರುಳಿ ಭೂಸಮಾಧಿಯಾಗಿದ್ದವು. ಜಿಲ್ಲಾಡಳಿತ ಆ ಮರಗಳನ್ನು ತೆರವು ಮಾಡಿರಲಿಲ್ಲ. ಈಗ ಮಳೆಗೆ ಮರದ ದಿಮ್ಮಿಗಳು, ಕಸಕಡ್ಡಿ ಹೊಳೆಯಲ್ಲಿ ತೇಲಿ ಬರುತ್ತಿವೆ.

ಹೆದ್ದಾರಿ ಕುಸಿಯುವ ಭೀತಿ

ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ತಾಳತ್ತಮನೆ ತಿರುವಿನಲ್ಲಿ ಹೆದ್ದಾರಿ ಪಕ್ಕದ ಮಣ್ಣು ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಕಳೆದ ವರ್ಷ ಇದೇ ಸ್ಥಳದಲ್ಲೇ ಹೆದ್ದಾರಿ ಕುಸಿದಿತ್ತು. ‘ಎಂ–ಸ್ಯಾಂಡ್’ ಅಳವಡಿಸಿ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಪಡಿಸಲಾಗಿತ್ತು.

ಮಳೆಯ ರಭಸಕ್ಕೆ ತಳಭಾಗದ ಮರಳಿನ ಚೀಲಗಳು ಕೊಚ್ಚಿ ಹೋಗಿವೆ. ವಾಹನಗಳು ಸದ್ಯಕ್ಕೆ ರಸ್ತೆಯ ಒಂದು ಬದಿಯಲ್ಲಿ ಸಂಪಾಜೆ, ಸುಳ್ಯದ ಮೂಲಕ ದಕ್ಷಿಣ ಕನ್ನಡಕ್ಕೆ ಸಂಚರಿಸುತ್ತಿವೆ. ಕಾಟಕೇರಿ ಸಮೀಪವೂ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಹೇಮಾವತಿಗೆ ಪ್ರವಾಹ: ಮುಳುಗಿದ ಗದ್ದೆಗಳು

ಹಾಸನ: ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಗದ್ದೆಗಳು ಮುಳುಗಡೆಯಾಗಿವೆ. ಹತ್ತಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಕಾಡಂಚಿನ ಜನರು ಪರದಾಡುವಂತಾಗಿದೆ.

ಸಕಲೇಶಪುರ ಪಟ್ಟಣದಲ್ಲಿ ಹೊಳೆ ಮಲ್ಲೇಶ್ವರ ದೇವಾಲಯದೊಳಗ್ಗೆ ನೀರು ನುಗ್ಗಿರುವುದರಿಂದ ಬಾಗಿಲು ಮುಚ್ಚಲಾಗಿದೆ.
ಬೇಲೂರು ತಾಲ್ಲೂಕಿನಲ್ಲಿ ಅಗಸರಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿದೆ. ಪಟ್ಟಣದ ಕುವೆಂಪು ನಗರ ಸೇರಿದಂತೆ ನಾಲ್ಕು ಮನೆಗಳು ಕುಸಿದಿವೆ. ಬೇಲೂರಿನ, ಐತಿಹಾಸಿಕ ವಿಷ್ಣು ಸಮುದ್ರ ಕೆರೆ 10 ವರ್ಷಗಳ ನಂತರ ಕೋಡಿ ಬಿದ್ದಿದೆ.

ಹಾಸನ, ಬೇಲೂರು, ಆಲೂರು, ಸಕಲೇಶಪುರ ಮತ್ತು ಅರಕಲಗೂಡು ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು.

ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಬುಧವಾರ ಬೆಳಿಗ್ಗೆ 6 ಗಂಟೆ ವರೆಗೆ ಹೊಂಗಡಹಳ್ಳ, ಬಿಸಿಲೆ, ಮಾರನಹಳ್ಳಿ, ದೇವಾಲದಕೆರೆಯಲ್ಲಿ ತಲಾ 350 ಮಿ.ಮೀ, ಹೆತ್ತೂರಿನಲ್ಲಿ 200 ಮಿ.ಮೀ, ಹಾನುಬಾಳು 171, ಯಸಳೂರು 137 ಹಾಗೂ ಬೇಲೂರಿನ ಅರೇಹಳ್ಳಿಯಲ್ಲಿ 220 ಮಿ.ಮೀ ಮಳೆಯಾಗಿದೆ.

ಕೆಆರ್‌ಎಸ್‌: 26 ಸಾವಿರ ಕ್ಯುಸೆಕ್‌ ದಾಟಿದ ಒಳಹರಿವು

ಮಂಡ್ಯ: ಕೆಆರ್‌ಎಸ್‌ ಜಲಾಶಯದ ಒಳಹರಿವು 26 ಸಾವಿರ ಕ್ಯುಸೆಕ್‌ ದಾಟಿದೆ.

ಬುಧವಾರ ಸಂಜೆ ಜಲಾಶಯದ ನೀರಿನ ಮಟ್ಟ 88.60 ಅಡಿ ಇತ್ತು. ಒಳಹರಿವು 26,522 ಕ್ಯುಸೆಕ್‌ ಇದ್ದರೆ, 6,149 ಕ್ಯುಸೆಕ್‌  ಹೊರಹರಿವು ದಾಖಲಾಗಿತ್ತು. ಮಂಗಳವಾರದಿಂದ ಈಚೆಗೆ ಜಲಾಶಯದ ನೀರಿನ ಮಟ್ಟ 4.70 ಅಡಿ ಹೆಚ್ಚಾಗಿದೆ.

ಮೈಸೂರು: ಹಲವೆಡೆ ಮನೆ ಕುಸಿತ

ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಗೆ 23 ಮನೆಗಳು ಕುಸಿದಿದ್ದು, ಹಲವೆಡೆ ಮರಗಳು ಉರುಳಿವೆ.

ದಿನವಿಡೀ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು.

ಕಬಿನಿ: 25 ಸಾವಿರ ಕ್ಯುಸೆಕ್‌ ಒಳಹರಿವು

ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ 25 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇನ್ನೆರಡು ದಿನಗಳಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪಲಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಬಿಡುಗಡೆ ಮಾಡಬಹುದು. ಹಾಗಾಗಿ, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

Post Comments (+)