ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ದಸರಾಕ್ಕೆ ಸಂಭ್ರಮದ ತೆರೆ

Last Updated 8 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ನಾಡಹಬ್ಬ ದಸರಾ ಅಂಗವಾಗಿ ಬೆಂಗಳೂರಿನ ನಾನಾ ಭಾಗಗಳಲ್ಲಿಒಂಬತ್ತು ದಿನಗಳ ಕಾಲ ನಡೆದ ನವದುರ್ಗೆಯರ ಆರಾಧನೆ, ಪೂಜೆ ಮತ್ತು ಉತ್ಸವಕ್ಕೆ ವೈಭವದ ತೆರೆ ಬಿದ್ದಿದೆ. ನವರಾತ್ರಿ ಅಂಗವಾಗಿ ನಡೆದ ಬಗೆ, ಬಗೆಯ ಸಾಂಪ್ರದಾಯಿಕ ಗೊಂಬೆಗಳ ಪ್ರದರ್ಶನವೂಕೊನೆಗೊಂಡಿದೆ.

ನಗರದ ನೂರಕ್ಕೂ ಹೆಚ್ಚು ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗಾದೇವಿ ಮೂರ್ತಿಗಳನ್ನು ದಸರಾ ಹಬ್ಬದ ಕೊನೆಯ ದಿನವಾದ ಮಂಗಳವಾರ ವಿಜೃಂಭಣೆ ಮೆರವಣಿಗೆಯ ಮೂಲಕ ಹಲಸೂರು ಕೆರೆಯಲ್ಲಿ ವಿಸರ್ಜಿಸಲಾಯಿತು.

ವಿಜಯ ದಶಮಿಯ ಅಂಗವಾಗಿ ನಗರದ ನಾನಾ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಕೈಗೊಳ್ಳಲಾಗಿತ್ತು.ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಇದಕ್ಕೂ ಮುನ್ನಾದಿನ ರಾತ್ರಿ ಅರಮನೆ ಮೈದಾನದಲ್ಲಿ ದಾಂಡಿಯಾ ನೃತ್ಯ ಆಯೋಜಿಸಲಾಗಿತ್ತು. ಯುವಕರು, ಯುವತಿಯರು ಮತ್ತು ಮಕ್ಕಳು ನೃತ್ಯ ಮಾಡಿ ಸಂಭ್ರಮಿಸಿದರು.

ಬನ್ನೇರುಘಟ್ಟ, ಹೆಬ್ಬಾಳ, ಅಗ್ರಹಾರ ದಾಸರಹಳ್ಳಿ, ಜೆ.ಸಿ. ನಗರ, ಆರ್‌.ಟಿ. ನಗರ, ಪ್ಯಾಲೆಸ್‌ ಗುಟ್ಟಹಳ್ಳಿ, ಹಲಸೂರು, ಮತ್ತಿಕೆರೆ, ನಂದಿನಿ ಲೇಔಟ್‌, ಮಲ್ಲೇಶ್ವರ ಹಾಗೂ ನಗರದ ಇತರ ಭಾಗಗಳಿಂದ ಹೊರಟ ಅದ್ದೂರಿ ಮೆರವಣಿಗೆ ಎಲ್ಲರ ಕಣ್ಮನ ತಣಿಸಿದವು. ಕೀಲುಕುದುರೆ ಮತ್ತು ಮರಗಾಲು ಕುಣಿತ, ವೀರಗಾಸೆ, ತಂಜಾವೂರು ಕುಣಿತ, ಹುಲಿವೇಷ, ನಂದಿಧ್ವಜ, ಗಾರುಡಿ ಗೊಂಬೆಗಳು ಮೆರವಣಿಗೆಗೆ ಮೆರುಗು ತಂದವು.

ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತು ಹೊರವಲಯದಲ್ಲಿರುವ ಹಳ್ಳಿಗಳಲ್ಲಿ ಪಟಾಲಮ್ಮ, ಮಾರಮ್ಮ, ದುರ್ಗಮ್ಮ, ಚಾಮುಂಡೇಶ್ವರಿ ಸೇರಿದಂತೆ ಗ್ರಾಮ ದೇವತೆಗಳ ಉತ್ಸವ ಮತ್ತು ಸಾಮೂಹಿಕ ಮೆರವಣಿಗೆಗಳು ಸಾಂಗವಾಗಿ ನಡೆದವು. ಹೂವಿನ ರಥ, ಮುತ್ತಿನ ಪಲ್ಲಕಿ, ವಾದ್ಯವೃಂದ ಮತ್ತು ನೃತ್ಯಗಳು ಉತ್ಸವಕ್ಕೆ ರಂಗು ತಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT