ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ ಪುಸ್ತಕ ಮೇಳಕ್ಕೆ ಜನರೇ ಇಲ್ಲ

7 ದಿನಗಳು ಕಳೆದರೂ ಶೇ 10ರಷ್ಟು ಮಾತ್ರ ಪುಸ್ತಕ ಮಾರಾಟ
Last Updated 16 ಅಕ್ಟೋಬರ್ 2018, 9:31 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರೆಯಲ್ಲಿ ಐದು ವರ್ಷಗಳಿಂದ ಪುಸ್ತಕ ಮೇಳದ ಆಕರ್ಷಣೆಯೂ ಒಂದು. ಆದರೆ, ವರ್ಷದಿಂದ ವರ್ಷಕ್ಕೆ ಈ ಮೇಳದತ್ತ ತೆರಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಲೇ ಇದೆ.

ಇದು ಈ ವರ್ಷಕ್ಕೂ ಹೊರತಲ್ಲ. ಪುಸ್ತಕ ಮೇಳ ಈ ವರ್ಷ ಗಾತ್ರದಲ್ಲಿ ಚಿಕ್ಕದೂ ಆಗಿದ್ದು, ಜನರೇ ಇಲ್ಲದೇ ಬಿಕೋ ಎನ್ನುತ್ತಿದೆ. ಇಲ್ಲಿನ ಒಟ್ಟು 47 ‍ಪುಸ್ತಕ ಮಳಿಗೆಗಳ ಪೈಕಿ ಶೇ 10ರಷ್ಟು ಮಾತ್ರ ಮಾರಾಟವಾಗಿರುವುದು ಪ್ರಕಾಶಕರಿಗೂ ಬೇಸರ ತಂದಿದೆ.

‘ಕಾಡಾ’ ಆವರಣದಲ್ಲಿ ನಡೆಯುತ್ತಿರುವ ದಸರಾ ಪುಸ್ತಕ ಮಾರಾಟ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ದಸರಾ ಉತ್ಸವ ಸಮಿತಿ ಜಂಟಿಯಾಗಿ ಆಯೋಜಿಸಿ ಆಕರ್ಷಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಆದರೆ, ಈ ವರ್ಷ ಕಿಷ್ಕಿಂದೆಯಾಗಿರುವ ಈ ಆವರಣದ ಕಾರಣದಿಂದಾಗಿಯೇ ಜನಮನ ಸೆಳೆಯಲು ಮೇಳ ವಿಫಲವಾಗಿದೆ.

ಮೇಳ ಆರಂಭವಾಗಿ 7 ದಿನಗಳು ಕಳೆದಿವೆ. ಇನ್ನು 2 ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ, ಎಲ್ಲ ಪ್ರಕಾಶನಗಳನ್ನೂ ಒಟ್ಟು ಸೇರಿಸಿ ಕೇವಲ ₹ 2 ಲಕ್ಷದಷ್ಟು ಮಾತ್ರ ಪುಸ್ತಕ ಮಾರಾಟವಾಗಿರುವುದು ಆಯೋಜಕರಲ್ಲಿ ಆತಂಕ ಮೂಡಿಸಿದೆ. ಕಳೆದ ದಸರೆಯಲ್ಲಿ 9 ದಿನಗಳಿಂದ ಇದು ₹ 10 ಲಕ್ಷ ಮೀರಿತ್ತು. ಅಂದರೆ, ಶೇ 90ಕ್ಕೂ ಹೆಚ್ಚು ಕಡಿಮೆ ಲಾಭವಾಗಿದೆ.

ಇದು ಪ್ರತಿವರ್ಷದ ಗೋಳು!

‘ಕಾಡಾ’ ಆವರಣದಲ್ಲಿ ಮಳಿಗೆ ನಿರ್ಮಿಸುವುದು ಬೇಡವೆಂದು ಆಯೋಜಕರು ಪ್ರತಿವರ್ಷ ಹೇಳುತ್ತಿದ್ದರೂ ಜಾಗ ಲಾಭ ಆಗುತ್ತಲೇ ಇಲ್ಲ. ಕಾಡಾ ಆವರಣ ಈಗ ಚಿಕ್ಕದಾಗಿದೆ. ಕಾರಣ, ಇಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಿರುವುದು. ಕಳೆದ ವರ್ಷ ಹೆಚ್ಚಿದ್ದ ಜಾಗದಲ್ಲಿ ವಿಶಾಲವಾಗಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು. 2017ರಲ್ಲಿ ಒಟ್ಟು 60 ಮಳಿಗೆಗಳಿದ್ದರೆ, ಈಗ ಜಾಗ ಕಿರಿದಾಗಿರುವ ಕಾರಣ ಕೇವಲ 47 ಮಳಿಗೆಗಳು ಬಂದಿವೆ. ಶಿವಮೊಗ್ಗ, ಮೈಸೂರು, ಬೆಂಗಳೂರು, ಹಾವೇರಿ, ಮುಧೋಳ ಸೇರಿದಂತೆ ಅನೇಕ ಭಾಗಗಳ ಪ್ರಕಾಶಕರು ಮಾರಾಟ ಮಳಿಗೆ ತೆರೆದಿದ್ದಾರೆ. ಜತೆಗೆ, ವಿವಿಧ ಅಕಾಡೆಮಿ, ಪ್ರಾಧಿಕಾರದ ಮಳಿಗೆಗಳೂ ಇವೆ.

ಹಾಗಾಗಿ, ‍ಪುಸ್ತಕ ಮೇಳ ಸಣ್ಣ ಶೆಡ್ ನಂತೆ ಕಾಣುತ್ತಿದ್ದು, ಜನರನ್ನು ಆಕರ್ಷಿಸಲು ವಿಫಲವಾಗಿದೆ. ಅಲ್ಲದೇ, ಸಂಜೆಯ ವೇಳೆಗೆ ಇಲ್ಲಿಗೆ ಬರುವುದು ಅಕ್ಷಶಃ ಅಸಾಧ್ಯವಾಗಿದೆ. ಕಾರಣ ಇದು ಅರಮನೆ ಪಕ್ಕವೇ ಇರುವ ಕಾರಣ, ವಾಹನ ದಟ್ಟಣೆ ಹೆಚ್ಚಾಗುವುದರಿಂದ ಏಕಮುಖ ವಾಹನ ಸಂಚಾರ ಮಾಡಲಾಗುತ್ತದೆ. ಇದರಿಂದ ಜನರು ಈ ಕಡೆಗೆ ಬರುವುದೇ ಕಡಿಮೆಯಾಗಿದೆ. ಅಲ್ಲದೇ, ಬಂದರೂ ಪುಸ್ತಕ ಮೇಳದ ಆಸು ಪಾಸು ಇರುವ ಖಾಲಿ ಜಾಗದಲ್ಲಿ ವಾಹನ ನಿಲುಗಡೆಗೆ ಬರುತ್ತಾರೆಯೇ ಹೊರತು ಪುಸ್ತಕ ನೋಡಲೂ ಅಲ್ಲ, ಕೊಳ್ಳಲೂ ಅಲ್ಲ ಎನ್ನುವುದು ಇಲ್ಲಿ ಬಂದಿರುವ ಪ್ರಕಾಶಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಕ್ಕದಲ್ಲೇ ಫುಡ್‌ ಕೋ‌ರ್ಟ್ ಇರಿಸಿರುವುದೂ ಮುಳ್ಳಾಗಿ ಪರಿಣಮಿಸಿದೆ. ಬರುವ ಜನರಲ್ಲ ಆಹಾರ ಸವಿಯಲು ಹೋಗುತ್ತಾರೆಯೇ ಹೊರತು ‍ಪುಸ್ಕಕ ಮೇಳಕ್ಕೆ ಬರುವುದಿಲ್ಲ. ಈ ಮೇಳವನ್ನು ಮುಂದಿನ ವರ್ಷವಾದರೂ ಬೇರೆಡೆಗೆ ಆಯೋಜಿಸಬೇಕು. ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರೆ ನಡೆಯುತ್ತಿದೆ. ಅದರ ಪಕ್ಕದಲ್ಲಿ ಖಾಲಿ ಮೈದಾನ ಇದೆ. ಅಲ್ಲಿ ಜಾಗ ನೀಡಬೇಕು. ವಿವಿಧ ಕಾಲೇಜುಗಳು ಅಲ್ಲಿದ್ದು, ವಿದ್ಯಾರ್ಥಿಗಳು ಬರುತ್ತಾರೆ ಎನ್ನುವುದು ಆಯೋಜಕರ ಕೋರಿಕೆ.

ಸೆಳೆಯದ ಸಾಹಿತಿಗಳ ಸಂವಾದ

ಪುಸ್ತಕ ಮೇಳಕ್ಕೆ ಸಾಹಿತ್ಯಾಭಿಮಾನಿಗಳು ಬರಲಿ ಎಂದು ಇಲ್ಲಿ ವಿವಿಧ ಆಕರ್ಷಣೆ ಇಟ್ಟರೂ ಮೇಳ ಖಾಲಿ ಹೊಡೆಯುವುದು ತಪ್ಪಿಲ್ಲ!

ಇದಕ್ಕಾಗಿ ‘ಸಾಹಿತಿಗಳೊಡನೆ ಒಂದು ಸಂಜೆ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಸಾಹಿತಿಗಳಾದ ಧರಣಿದೇವಿ ಮಾಲಗತ್ತಿ, ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರನ್ನು ಕರೆಸಿ ಸಂವಾದ ಏರ್ಪಡಿಸಲಾಗಿದೆ. ಆದರಿದು ಜನರನ್ನು ಸೆಳೆಯಲು ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT