ದಸರೆಗೆ ಕಾಂಗ್ರೆಸ್ ಮುಖಂಡರ ಗೈರು

7
ದೋಸ್ತಿ ಪಕ್ಷಗಳ ಮುನಿಸು ಮೈಸೂರಿನಲ್ಲೂ ಬಹಿರಂಗ

ದಸರೆಗೆ ಕಾಂಗ್ರೆಸ್ ಮುಖಂಡರ ಗೈರು

Published:
Updated:

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ಮೈಸೂರು, ಚಾಮರಾಜನಗರ ಭಾಗದ ಕಾಂಗ್ರೆಸ್‌ ಮುಖಂಡರು ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.‌

ಈ ಮೂಲಕ ದೋಸ್ತಿ ಸರ್ಕಾರದಲ್ಲಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ದಸರಾ ಉದ್ಘಾಟನೆಗೆ ಸಾಮಾನ್ಯವಾಗಿ ಎಲ್ಲಾ ಪಕ್ಷಗಳ ಸ್ಥಳೀಯ ಶಾಸಕರು, ಸಂಸದರು ಪಾಲ್ಗೊಳ್ಳುತ್ತಾರೆ. ವಿರೋಧ ಪಕ್ಷವಾಗಿರುವ ಬಿಜೆಪಿ ಶಾಸಕರು ಹಾಗೂ ಸಂಸದ ಕೂಡ ಚಾಮುಂಡಿಬೆಟ್ಟದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆದರೆ, ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಶಾಸಕರು, ಸಂಸದ ಭಾಗವಹಿಸಲಿಲ್ಲ. ‘ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ, ಮೈತ್ರಿ ಧರ್ಮ ಪಾಲನೆ ಆಗುತ್ತಿಲ್ಲ’ ಎಂದು ಆರಂಭದಿಂದಲೇ ವಾಗ್ದಾಳಿ ನಡೆಸುತ್ತಿರುವ ಸಚಿವ ಪುಟ್ಟರಂಗಶೆಟ್ಟಿ, ಶಾಸಕ ತನ್ವೀರ್‌ ಸೇಠ್‌ ಸೇರಿದಂತೆ ಬಹುತೇಕ ಮುಖಂಡರ ಅನುಪಸ್ಥಿತಿ ಎದ್ದು ಕಾಣುತಿತ್ತು.

ಚಾಮರಾಜನಗರ ಸಂಸದ ಆರ್‌.ಧ್ರುವನಾರಾಯಣ, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಕುಮಾರ್‌ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ.

ಮೈಸೂರು ಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್‌ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ತನ್ವೀರ್‌ ಅವರು ದಸರಾ ಸಭೆ, ಕಾರ್ಯಕ್ರಮಗಳಿಗೆ ಗೈರು ಹಾಜರಾಗುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಜೆಡಿಎಸ್ ಅವಕಾಶ ನೀಡದಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕೆಲ ವಿಚಾರಗಳು ಸರಿಯಾದ ವಿಧಾನದಲ್ಲಿ ನಡೆಯುತ್ತಿಲ್ಲ. ಮೈತ್ರಿ ಸರ್ಕಾರದ ಗಟ್ಟಿ ಸಂಬಂಧ ಸ್ಥಳೀಯವಾಗಿಯೂ ಕಾಣಬೇಕು. ಆದರೆ, ಇಲ್ಲಿ ಎಲ್ಲೋ ಗೊಂದಲವಿದೆ, ಹಸ್ತಕ್ಷೇಪ ಹೆಚ್ಚಾಗಿದೆ’ ಎಂದು ತನ್ವೀರ್‌ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ದಸರಾ ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ ತಮ್ಮ ಹೆಸರು ಇಲ್ಲ ಎಂದು ಪುಟ್ಟರಂಗಶೆಟ್ಟಿ ಸಭೆಯಿಂದ ಅರ್ಧದಲ್ಲೇ ಎದ್ದು ಹೊರನಡೆದಿದ್ದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕೆಲ ಕಾರ್ಯಕ್ರಮಗಳನ್ನು ಉದ್ಘಾಟಿಸಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಚಾಲನೆ ನೀಡಿದರು. ಅವರಿಗೆ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಜೊತೆಯಾದರು.

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ ಭಾಗವಹಿಸಿದ್ದರು. ಆಹಾರ ಮೇಳಕ್ಕೆ ಆಹಾರ ಸಚಿವ ಜಮೀರ್‌ ಅಹಮದ್‌ ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !