ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿವಾರಿಸಿಕೊಂಡ ದಸರಾ ಗಜಪಡೆ; ಕಾಡಿನಲ್ಲೇ ಹೆಚ್ಚು ಸಂಭ್ರಮ: ಮಾವುತರ ಮನದಾಳದ ಮಾತು

Last Updated 20 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮೈಸೂರು: ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಆನೆಗಳು ಈಗ ವಿರಾಮದಲ್ಲಿವೆ. ಸತತ 10 ದಿನಗಳ ಕಾಲ ದಸರೆಯಲ್ಲಿ ಸಂಭ್ರಮಿಸಿ ಈಗ ದಣಿವಾರಿಸಿಕೊಳ್ಳುತ್ತ ಕಾಲ ಕಳೆಯುತ್ತಿವೆ.

750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಕಿಲೋಮೀಟರುಗಟ್ಟಲೇ ನಡೆಯುವುದೆಂದರೆ ಸಾಮಾನ್ಯದ ವಿಚಾರವಲ್ಲ. ಇಲ್ಲಿ ತೂಕ ಹೊರುವುದಷ್ಟೇ ಸವಾಲಿನ ವಿಚಾರವಲ್ಲ. ಲಕ್ಷಾಂತರ ಜನರ ಮಧ್ಯೆ ಅಂಬಾರಿಯನ್ನು ಗಾಂಭೀರ್ಯದಿಂದ ಹೊತ್ತು ಸಾಗಿ ದಸರೆಯ ಘನತೆಯನ್ನು ಹೆಚ್ಚಿಸುವ ಜವಾಬ್ದಾರಿಯು ಅರ್ಜುನನ ಮೇಲೆಯೇ ಹೆಚ್ಚು. ಅರ್ಜುನನಿಗೆ ದಾರಿ ತೋರಿಸುವ ಮಾವುತ ವಿನಿ ಸಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಇದೀಗ ಕಾಡಿನತ್ತ ಮುಖಮಾಡಲು ಸಿದ್ಧರಾಗುತ್ತಿದ್ದಾರೆ.

ದಸರೆಯ ಜವಾಬ್ದಾರಿಯನ್ನು ವಿನಿಯ ಮಾತುಗಳಲ್ಲೇ ಕೇಳಬೇಕು. ‘ನಮಗೇನು ಕಷ್ಟ ಸ್ವಾಮಿ? ಆನೆಗಳ ಪಾಡು ಹೇಳತೀರದು. 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವುದು ಮಾತಿನಲ್ಲಿ ಹೇಳಿ ಅರ್ಥಮಾಡಿಸುವುದು ಅಸಾಧ್ಯ. ಇಲ್ಲಿ ಆನೆಗಳಿಗೆ ಒಳ್ಳೆಯ ಊಟವನ್ನೇನೋ ಕೊಡುತ್ತಾರೆ. ಆದರೆ, ಆನೆಗಳಿಗೆ ನಾಡಿಗಿಂತ ಕಾಡೇ ಹೆಚ್ಚು ಪ್ರಿಯ. ನಾಡಿನ ನೀರವತೆಗೆ ಆಗಲೇ ಇವು ಬೆಂದು ಹೋಗಿವೆ. ಕಾಡಿನ ದಾರಿಯನ್ನು ನೆನೆದು ಹಿರಿ ಹಿರಿ ಹಿಗ್ಗಲು ಆರಂಭಿಸಿವೆ’ ಎಂದು ಮುಗುಳ್ನಕ್ಕರು.

‘ದಸರೆಯಲ್ಲಿ ಟಾರು ರಸ್ತೆಯ ಮೇಲೆ ನಡೆಯಬೇಕು. ಬಿಸಿಲಲ್ಲಿ ಆನೆಗಳ ಪಾದ ಬೇಯುತ್ತಿರುತ್ತದೆ. ವಾಹನಗಳ ಸದ್ದು, ಮನುಷ್ಯರ ಕಿರಿಕಿರಿ ಆನೆಗಳ ಮನಸಿನ ಮೇಲೆ ಪರಿಣಾಮ ಬೀರಿರುತ್ತದೆ. ಹಬ್ಬದ ಗಾಂಭೀರ್ಯ ಅವಕ್ಕೂ ಗೊತ್ತು. ಮನುಷ್ಯನಷ್ಟೇ ಅವು ಸೂಕ್ಷ್ಮ ಜೀವಿಗಳೇ. ಹಾಗಾಗಿಯೇ, ಹಬ್ಬಕ್ಕೆ ಅರ್ಥ ಬರುವಂತೆ ನಡೆದುಕೊಳ್ಳುತ್ತವೆ. ಮೈಸೂರಿನ ಕೀರ್ತಿಯನ್ನು ವಿಶ್ವದ ಮೂಲೆ ಮೂಲೆಗೂ ಹಂಚಲು ಶ್ರಮಿಸುತ್ತವೆ’ ಎಂದು ವಿಶ್ಲೇಷಿಸಿದರು.

ನೂರು ಕಣ್ಣು ಸಾಲದು...

ಆನೆಗಳ ಸಂತಸ ನೋಡಲು ಸತ್ಯವಾಗಿಯೂ ನೂರು ಕಣ್ಣು ಸಾಲದು. ಆನೆಗಳಿಗೆ ನಿಜಕ್ಕೂ ನಗರಕ್ಕೆ ಬರಲು ಇಷ್ಟವೇ ಇರುವುದಿಲ್ಲ. ಮರಳಿ ಕಾಡಿಗೆ ಕಾಡಿಗೆ ಹೊರಟಾಗಲಂತೂ ಅವುಗಳ ಸಂತಸಕ್ಕೆ ಪಾರವೇ ಇರುವುದಿಲ್ಲ.

ಹೀಗೆಂದು ಹೇಳಿದವರು ಆನೆಗಳ ಮನಸನ್ನು ಅರ್ಥ ಮಾಡಿಕೊಂಡಿರುವ ಮಾವುತ ತಿಮ್ಮ. ‘ಇಲ್ಲಿ ಕಾಲಕ್ಕೆ ಸರಿಯಾಗಿ ಊಟ, ಭಕ್ಷ ಭೋಜನಗಳನ್ನು ಆನೆಗಳಿಗೆ ಕೊಡುತ್ತೇವೆ ನಿಜ. ಬೆಲ್ಲ, ಅವಲಕ್ಕಿ, ಹತ್ತಾರು ಕಾಳುಗಳ ರಸದೌತಣ... ಬಾಯಲ್ಲಿ ನೀರೂರುವುದು ನಿಜ. ಆದರೆ, ಸ್ವಾತಂತ್ರ್ಯದ ಮುಂದೆ ಭೂರಿ ಭೋಜನ ಏನೇನೂ ಅಲ್ಲ’ ಎಂದರು.

‘ಕಾಡಿನಲ್ಲಿ ಆನೆಗಳ ಸಂತಸ ವ್ಯಕ್ತಪಡಿಸುವ ಪರಿ ನೋಡಬೇಕು. ತಲೆ ಅಲ್ಲಾಡಿಸುತ್ತ, ಕಿವಿಗಳನ್ನು ಜೋರಾಗಿ ಬೀಸುತ್ತ, ಸೊಂಡಿಲಲ್ಲಿ ಆಟವಾಡುತ್ತ ನಲಿಯುತ್ತವೆ. ಕಾಡಿನಲ್ಲಿ ತಮ್ಮ ಊಟ ತಾವೇ ಹುಡುಕಿಕೊಂಡು ಹತ್ತಾರು ಕಿಲೋಮೀಟರ್‌ ನಡೆಯುತ್ತವೆ. ಯಾರೂ ಅವಕ್ಕೆ ತಡೆದು ನಿಲ್ಲಿಸುವುದಿಲ್ಲ. ಇಲ್ಲಾದರೆ, ಅವಕ್ಕೆ ಅಡೆತಡೆಯೇ ಹೆಚ್ಚು. ಅಲ್ಲಿ ನಿಲ್ಲಬೇಡ, ಹೋಗಬೇಡ ಎಂದು ಹೇಳುವವರೇ ಹೆಚ್ಚು. ಕಾಡಲ್ಲಾದರೆ ಈ ಇತಿಮಿತಿಗಳಾವುವೂ ಇಲ್ಲ’ ಎಂದು ವಿಶ್ಲೇಷಿಸಿದರು.

‘ಆನೆಗಳಿಗೆ ಹಬ್ಬದ ವೈಭವ ಅರ್ಥವಾಗುವುದೇ? ಅದು ಮನುಷ್ಯರ ಲೋಕ. ಆನೆಗಳಿಗೆ ಇವೆಲ್ಲಾ ಕೃತಕ. ಅವಕ್ಕೇನಿದ್ದರೂ ಕಾಡಿನ ನಿರಂಕುಶ ಬದುಕೇ ಇಷ್ಟ’ ಎನ್ನುತ್ತಾರೆ ಮಾವುತ ವಿನಿ.

ನೀರಿನಲ್ಲಿ ಆಟ... ಜತೆಗೆ ಸವಿಯೂಟ

ದಸರೆಯ ಮರುದಿನ ಆನೆಗಳು ದಣಿವಾರಿಸಿಕೊಳ್ಳಲು ನೀರಿನಲ್ಲಿ ಆಟವಾಡಿದವು. ಆನೆಗಳಿಗೆ ಸ್ನಾನ ಮಾಡಿಸಲೆಂದೇ ನಿರ್ಮಿಸಿರುವ ವೃತ್ತಾಕಾರದ ಜಾಗದಲ್ಲಿ ಮಜ್ಜನ ಮಾಡಿ ಖುಷಿಪಟ್ಟವು.

ಬೆಳಿಗ್ಗೆಯಿಂದಲೇ ಸ್ನಾನಕ್ಕಿಳಿದ ಆನೆಗಳಾದ ಚೈತ್ರಾ, ವರಲಕ್ಷ್ಮಿ, ಧನಂಜಯ, ಗೋಪಿ, ವಿಕ್ರಮ ಗಂಟೆಗಟ್ಟಲೇ ನೀರಿನಲ್ಲಿ ಮಿಂದವು. ಅಂಬಾರಿ ಹೊರುವ ಆನೆಗೆ ಮಾತ್ರ ಸಂಜೆ ಹೊತ್ತು ಬಿಸಿನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ಅಧಿಕ ತೂಕ ಹೊತ್ತಿರುವುದರಿಂದ ಆನೆಯ ಮೈಗೆ ನೋವಾಗಿರುತ್ತದೆ. ಬಿಸಿನೀರು ಅದಕ್ಕೆ ಮದ್ದು ಎಂದು ಮಾವುತರು ತಿಳಿಸಿದರು.

ಜತೆಗೆ, ಕೊನೆಯ ದಿನ ಮೈಸೂರಿನಲ್ಲಿ ತಮ್ಮ ನೆಚ್ಚಿನ ಊಟವನ್ನೂ ಮಾಡಿದವು. ಅರಮನೆಯಲ್ಲಿ ಆನೆಗಳಿಗಾಗಿ ತಯಾರಿಸುವ ವಿಶೇಷ ಊಟವನ್ನು ಸವಿದು ತಮ್ಮ ಸುಸ್ತನ್ನು ನೀಗಿಸಿಕೊಂಡವು.

ತೂಕ ಹೆಚ್ಚಿಸಿಕೊಂಡ ಗಜಪಡೆ

ದಸರೆಗೆ ಬಂದ ಆನೆಗಳು ಪುಷ್ಕಳವಾಗಿ ಊಟ ಮಾಡಿ ತಮ್ಮ ತೂಕ ಹೆಚ್ಚಿಸಿಕೊಂಡಿವೆ. (ತೂಕ ಕೆ.ಜಿ.ಗಳಲ್ಲಿ)

ಆನೆ ಬಂದಾಗಿನ ತೂಕ ಈಗಿನ ತೂಕ ವ್ಯತ್ಯಾಸ

ಅರ್ಜನ 5,620 6,110 460

ಚೈತ್ರಾ 2,920 3,270 350

ವರಲಕ್ಷ್ಮಿ 3,120 3,365 245

ಧನಂಜಯ 4,045 4,570 530

ಗೋಪಿ 4,435 4,715 280

ವಿಕ್ರಮ 3,985 4,180 195

ಬಲರಾಮ 4,910 5,390 480

ಅಭಿಮನ್ಯು 4,930 5,360 430

ದ್ರೋಣ 3,900 4,330 430

ಪ್ರಶಾಂತ 4,650 4,310 – 340

ಕಾವೇರಿ 2,830 3,090 260

ವಿಜಯಾ 2,790 2,915 125

ಇಂದು ಕಾಡಿನತ್ತ ಪಯಣ

ದಸರೆಯಲ್ಲಿ ಪಾಲ್ಗೊಂಡಿದ್ದ ಒಟ್ಟು 12 ಆನೆಗಳು ಭಾನುವಾರ ಬೆಳಿಗ್ಗೆ 9.30ಕ್ಕೆ ಕಾಡಿನತ್ತ ಪ್ರಯಾಣ ಬೆಳೆಸಲಿವೆ.

ಎರಡು ತಂಡಗಳಲ್ಲಿ ಬಂದಿದ್ದ ಆನೆಗಳು ಅರಮನೆಯಿಂದ ಹೊರಟು ತಮ್ಮ ತಮ್ಮ ಶಿಬಿರಗಳಿಗೆ ತಲುಪಲಿವೆ. ನಾಗರಹೊಳೆ, ಬಂಡೀಪುರದ ಬಳ್ಳೆ, ಮತ್ತಿಗೋಡು, ಗಾಡಿಚೌಕ, ದುಬಾರೆ ಶಿಬಿರಗಳಿಗೆ ಸೇರಲಿವೆ.

ಬೆಳಿಗ್ಗೆ 9ಕ್ಕೆ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ಸಲ್ಲಿಸಲಾಗುವುದು. ಬಳಿಕ ಅರಮನೆಯ ಸಿಬ್ಬಂದಿ, ಮಾವುತರು ಹಾಗೂ ಕಾವಾಡಿಗಳಿಗೆ ಉಪಹಾರ ವ್ಯವಸ್ಥೆ ಇದೆ. ನಂತರ ಆನೆಗಳನ್ನು ಲಾರಿಗಳಲ್ಲಿ ಕಳುಹಿಸಿಕೊಡಲಾಗುವುದು ಎಂದು ಆನೆಗಳ ವೈದ್ಯ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT