ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ ನಿದ್ರಿಸುತ್ತಿದ್ದರೆ ಮಾವುತ ಮಲಗುವಂತಿಲ್ಲ

ಕಳೆಗಟ್ಟುತ್ತಿದೆ ಮೈಸೂರು ದಸರಾ: ಏಳನೇ ಬಾರಿ ಚಿನ್ನದ ಅಂಬಾರಿ ಹೊರಲು ಸಿದ್ಧವಾಗುತ್ತಿರುವ ಆನೆ
Last Updated 16 ಅಕ್ಟೋಬರ್ 2018, 1:51 IST
ಅಕ್ಷರ ಗಾತ್ರ

ಮೈಸೂರು: ‘ಕಾಡಿನಲ್ಲಿ ನಿದ್ರಿಸುತ್ತಿದ್ದ ಅರ್ಜುನ ಆನೆ ಮೇಲೆ ಒಮ್ಮೆ ಮದವೇರಿದ ಗಜಗಳು ದಾಳಿ ನಡೆಸಿ ಘಾಸಿಗೊಳಿಸಿದ್ದವು. ಹಣೆಯಲ್ಲಿ ಇನ್ನೂ ಆ ನೋವಿದೆ. ಹೀಗಾಗಿ, ಈ ಆನೆ ನಿದ್ರಿಸುವಾಗ ಯಾವುದೇ ಕಾರಣಕ್ಕೂ ನಾನು ಮಲಗುವುದಿಲ್ಲ’

–ದಸರಾ ಮಹೋತ್ಸವದಲ್ಲಿ ಏಳನೇ ಬಾರಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಅರ್ಜುನನ ಮೇಲಿನ ಕಾಳಜಿಯನ್ನು ಮಾವುತ ವಿನು ತೋರಿಸಿದ ರೀತಿ ಇದು.

ಅ.19ರಂದು ನಡೆಯಲಿರುವ ಜಂಬೂಸವಾರಿಗೆ ಅರ್ಜುನ ಸಿದ್ಧನಾಗುತ್ತಿದ್ದಾನೆ. ಸತತ ಎರಡನೇ ಬಾರಿ ಈ ಆನೆ ಮುನ್ನಡೆಸಲು ವಿನು ಕೂಡ ತಯಾರಾಗಿದ್ದಾರೆ.

‘ಎಷ್ಟೇ ಬಲಶಾಲಿ ಆನೆಗಳನ್ನು ಬೆದರಿಸಿ ಓಡಿಸುವ ತಾಕತ್ತು ಅರ್ಜುನನಿಗಿದೆ. ಆದರೆ, ಮಲಗಿದ್ದ ಸಂದರ್ಭದಲ್ಲಿ ಕಾಡಾನೆಗಳು ಏಕಾಏಕಿ ದಾಳಿ ನಡೆಸಿದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಿಂದಿನ ದಾಳಿಯೇ ಸಾಕ್ಷಿ. ಹೀಗಾಗಿ, ವಿಶೇಷ ಕಾಳಜಿ, ಎಚ್ಚರಿಕೆ ವಹಿಸಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ
ತಿಳಿಸಿದರು.

750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ, ಈ ಬಾರಿಯೂ ಬಲಶಾಲಿಯಾಗಿ ಹೊರಹೊಮ್ಮಿದೆ. ಈ ಸಲಗ ಬರೋಬ್ಬರಿ 5,650 ಕೆ.ಜಿ ಭಾರವಿದೆ. ಕಳೆದ ವರ್ಷಕ್ಕಿಂತ 400 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ.

‘ಕಳೆದ ಬಾರಿ ಕೇವಲ 25 ದಿನಗಳಲ್ಲಿ ಸಿದ್ಧನಾಗಿ ಆನೆ ಮುನ್ನಡೆಸಿದ್ದೆ. ಹೀಗಾಗಿ, ಈ ಬಾರಿಯೂ ಯಶಸ್ವಿಯಾಗಿ ಮುನ್ನಡೆಸುತ್ತೇನೆ ಎಂಬ ವಿಶ್ವಾಸವಿದೆ. ನನ್ನ ಪಾಲಿಗೆ ಅರ್ಜುನ ಮೊದಲು; ಕುಟುಂಬ ನಂತರ’ ಎಂದು ಹೇಳುವ ಮಾವುತನ ಕಂಗಳಲ್ಲಿ ವಿಶ್ವಾಸದ ಚಿಲುಮೆ ಮೂಡಿತು.

‘ಮೊದಲ ಬಾರಿ ಅವಕಾಶ ದೊರೆತಾಗ ಹೆಚ್ಚಿನವರು ಹೆದರಿಸಿದ್ದರು. ಅಪಾಯಕಾರಿ ಆನೆ, ಘಾಸಿಗೊಳಿಸಬಹುದು ಎನ್ನುತ್ತಾ ಆತ್ಮಸ್ಥೈರ್ಯ ಕುಗ್ಗಿಸಿದ್ದರು. ಅದರ ಭಾವನೆ ಅರಿತಿದ್ದ ನಾನು ಯಾವುದೇ ಬೆದರಿಕೆಗೆ ಜಗ್ಗಲಿಲ್ಲ‌. ಚಾಮುಂಡೇಶ್ವರಿ ಹಾಗೂ ಪೋಷಕರಿಗೆ ನಮಸ್ಕರಿಸಿ ಅರ್ಜುನನ ಮೇಲೆ ಕುಳಿತಿದ್ದೆ’ ಎಂದು 2017ರ ಜಂಬೂಸವಾರಿ ನೆನಪಿಸಿಕೊಂಡರು.

58 ವರ್ಷ ವಯಸ್ಸಿನ ಅರ್ಜುನನ್ನು 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. ಬಳ್ಳೆ ಶಿಬಿರದಲ್ಲಿ ಆಶ್ರಯ ಪಡೆದಿದ್ದು, ದ್ರೋಣ ಆನೆಯ ಅಕಾಲಿಕ ಸಾವಿನ ಬಳಿಕ ಒಮ್ಮೆ ಅಂಬಾರಿ ಹೊತ್ತಿತ್ತು. ನಂತರದ ದಿನಗಳಲ್ಲಿ ಮಾವುತನನ್ನು ಕೊಂದಿದ್ದರಿಂದ ಈ ಆನೆಯನ್ನು ಉತ್ಸವದಿಂದ ಹೊರಗಿಡಲಾಗಿತ್ತು. ಬಲರಾಮನಿಗೆ ವಯಸ್ಸಾದ ಕಾರಣ ಮತ್ತೆ ಅಂಬಾರಿ ಹೊರುವ ಜವಾಬ್ದಾರಿ ಲಭಿಸಿತು.‌

ಕೆಲ ವರ್ಷಗಳ ಹಿಂದೆ ಮದವೇರಿದ ಸಂದರ್ಭದಲ್ಲಿ ಬಳ್ಳೆ ಶಿಬಿರದಿಂದ ತಪ್ಪಿಸಿಕೊಂಡಿತ್ತು. ನಾಲ್ಕು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ನಂತರ ಕೇರಳ ಗಡಿ ಭಾಗದಲ್ಲಿಪತ್ತೆಯಾಗಿತ್ತು.

ಮಾವುತನ ಮೇಲಿನ ಕಾಳಜಿ: ಮಾವುತ ವಿನು ಮೇಲೆ ಅರ್ಜುನನಿಗೆ ವಿಶೇಷ ಪ್ರೀತಿ. ವಿನು ನಿದ್ದೆಯಲ್ಲಿದ್ದಾಗ ಎಬ್ಬಿಸಲು, ಯಾರಾದರೂ ಬಂದರೆ ಸೊಂಡಿಲಿನಲ್ಲಿ ಸೊಪ್ಪು ಹಿಡಿದು ಬೀಸುತ್ತದೆ. ವಿನು ಹೆಂಡತಿ ಬಂದರೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಈ ಹಿಂದೆ ತನ್ನನ್ನು ನೋಡಿಕೊಳ್ಳುತ್ತಿದ್ದ ದೊಡ್ಡಮಾಸ್ತಿ ಅಗಲಿಕೆಯನ್ನು ತಡೆದುಕೊಳ್ಳಲು ಈ ಆನೆಗೆ ಸಾಧ್ಯವಾಗಿರಲಿಲ್ಲ. ಬೇಸರದಿಂದ ಪದೇಪದೇ ಘೀಳಿಡುತಿತ್ತು. ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಬೇಸರವಾದಾಗ ಕಾಡಿನಲ್ಲಿ ದೊಡ್ಡಮಾಸ್ತಿ ಸಮಾಧಿಗೆ ನಮಿಸಿ ಬರುತಿತ್ತು.

ಅರ್ಜುನನ ವಿಶೇಷ?

*ವಿಭಿನ್ನ ದೇಹ ವಿನ್ಯಾಸ ಹೊಂದಿದ್ದು, ಎಲ್ಲಾ ಆನೆಗಳಿಗಿಂತ ಬಲಶಾಲಿ

* ತುಂಬಾ ಕೋಪಿಷ್ಟ; ಅಷ್ಟೇ ಭಾವುಕ ಜೀವಿ

* ಹೆಣ್ಣಾನೆಗಳು ಪಕ್ಕದಲ್ಲಿದ್ದರೆ ಶಾಂತ ಸ್ವಭಾವಿ. ಹೀಗಾಗಿ, ಜಂಬೂಸವಾರಿಯಲ್ಲಿ ಅಕ್ಕಪಕ್ಕ ಹೆಣ್ಣಾನೆಗಳಿರುತ್ತವೆ

* ಹಸಿವಾದಾಗ ಕೊರಳಲ್ಲಿರುವ ಗಂಟೆ ಅಲುಗಾಡಿಸುತ್ತದೆ

* ಆಲದ ಮರ, ಅರಳಿ ಮರದ ಸಣ್ಣ ಕೊಂಬೆ, ಭತ್ತದ ಹುಲ್ಲು, ಬೆಲ್ಲ ಇಷ್ಟದ ಆಹಾರ

* ದಿನಕ್ಕೆ 3 ಗಂಟೆ ಮಾತ್ರ ನಿದ್ದೆ

* ಸಿಟ್ಟು ಬಂದಾಗ ಕಿವಿಗಳನ್ನು ಬಾಗಿಸುತ್ತದೆ

* ಬಲರಾಮ, ಅಭಿಮನ್ಯು ಸೇರಿದಂತೆ ಗಂಡಾನೆಗಳನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ

* 19 ವರ್ಷಗಳಿಂದ ದಸರೆಯಲ್ಲಿ ಭಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT