ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಂ ಕನಸಿನಂತೆ ಸೈನ್ಯ ಸಬಲವಾಗಬೇಕು: ಆರ್‌ಎಸ್‌ಎಸ್‌ ಮುಖಂಡ ದತ್ತಾತ್ರೇಯ ಹೊಸಬಾಳೆ

‘ಭಿನ್ನಾಭಿಪ್ರಾಯ ಮರೆತು ದೇಶ ಕಟ್ಟೋಣ’
Last Updated 17 ಮೇ 2020, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶ ಈಗ ಸಂಕಷ್ಟದಲ್ಲಿದೆ. ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು, ಒಗ್ಗಟ್ಟು ಪ್ರದರ್ಶಿಸಬೇಕು. ಎಲ್ಲರೂ ಸೇರಿ ದೇಶವನ್ನು ಸಶಕ್ತವಾಗಿಸಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ-ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

‘ಆತ್ಮನಿರ್ಭರ ಭಾರತ–ಸಮರ್ಥ ಭಾರತ’ ವಿಷಯ ಕುರಿತು ಭಾನುವಾರ ಫೇಸ್‌ಬುಕ್‌ ನೇರಪ್ರಸಾರದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಆತ್ಮನಿರ್ಭರತೆ ನಮ್ಮೊಳಗಿನ ಚೈತನ್ಯವನ್ನು ಜಾಗೃತಗೊಳಿಸುತ್ತದೆ’ ಎಂದರು.

‘ನಾವು ನಮಗೆ, ಮನೆಗೆ, ಸಮಾಜಕ್ಕೆ ಭಾರವಾಗದಂತೆ, ಮತ್ತೊಬ್ಬರಿಗೆ ಸಹಾಯಹಸ್ತ ಚಾಚುವ ಸ್ವಾವಲಂಬಿ, ಸ್ವಾಭಿಮಾನಿ ಪರಿಕಲ್ಪನೆಯೇ ಆತ್ಮನಿರ್ಭರತೆ. ಪುರುಷ ಸೂಕ್ತದಲ್ಲಿ ಹೇಳಿರುವಂತೆ ಇಡೀ ದೇಶವೇ ಒಗ್ಗಟ್ಟಾಗಿ ರಾಷ್ಟ್ರ ಪುರುಷನ ರೀತಿಯಲ್ಲಿ ಎದ್ದು ನಿಲ್ಲಬೇಕು ಎಂಬುದು ಇದರ ಉದ್ದೇಶ’ ಎಂದರು.

‘ಭಾರತ ವಿವಿಧತೆಗಳ ದೇಶ. ಅನೇಕ ಭಾಷೆ, ಜಾತಿ, ಪಂಥ, ಸಂಪ್ರದಾಯಗಳನ್ನು ಹೊಂದಿರುವ ರಾಷ್ಟ್ರ. ಈ ದೇಶ ಸಮರ್ಥವಾಗಬೇಕಾದರೆ ಅನೇಕ ಸವಾಲುಗಳು ಉದ್ಭವವಾಗುವುದು ಸಹಜ. ದೇಶದ ಜನ, ನಾಯಕತ್ವ, ಸಮಾಜ ಎಲ್ಲರೂ ಸಂಘಟಿತವಾಗಿ ಇಂತಹ ಸವಾಲುಗಳನ್ನು ಎದುರಿಸಬೇಕು’ ಎಂದು ಸಲಹೆ ನೀಡಿದರು.

‘ಎಲ್ಲರೂ ಸಮರ್ಥ ಭಾರತದ ಕನಸು ಕಾಣಬೇಕು. ಹಿಂದೆ ಮಹಾತ್ಮಾ ಗಾಂಧೀಜಿ ‘ಮೇರಾ ಸಪ್ನೋಂಕಾ ಭಾರತ್’ ಪುಸ್ತಕದಲ್ಲಿ ಮತ್ತು ಸ್ವಾಮಿ ವಿವೇಕಾನಂದರು ಮುಂದಿನ 50 ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂದು ಚಿಂತಿಸಿದ್ದಾರೆ. ಅವುಗಳನ್ನು ನಾವು ಪಾಲಿಸಬೇಕು’ ಎಂದರು.

‘ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ದೇಶದ ನಾಯಕತ್ವ, ಜನ, ಸಂಘಟನೆಗಳು, ಸಮಾಜ ಹೀಗೆ ಇಡೀ ದೇಶ ಒಂದಾಗಿ ಸಂತ್ರಸ್ತರಿಗೆ ಆಹಾರ, ಔಷಧ ನೀಡುತ್ತಿದ್ದಾರೆ. ದೇಶದ ಪ್ರತಿಯೊಬ್ಬರೂ ಅನ್ನ, ತರಕಾರಿ, ಹಣ್ಣು, ಹಾಲು ಪಡೆಯುವಂತಹ ಆಹಾರ ಭದ್ರತೆ ಸಿಗುವಂತಾಗಬೇಕು’ ಎಂದು ಅವರು ಆಶಿಸಿದರು.

ಸೈನ್ಯ ಬೆಳೆಯಲಿ–ವಿಜ್ಞಾನ ಬೆಳಗಲಿ: ‘ವಿಜ್ಞಾನಿ ಅಬ್ದುಲ್‌ ಕಲಾಂ ಅವರು ಹೇಳಿರುವಂತೆ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಸೈನ್ಯದ ಬೆಳವಣಿಗೆ ಆಗಬೇಕು. ಅಲ್ಲದೆ, ಮುಂದಿನ ಭವಿಷ್ಯಕ್ಕಾಗಿ ವಸ್ತುವಿಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಬೇಕು’ ಎಂದು ಹೊಸಬಾಳೆ ಹೇಳಿದರು.

‘ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೂ ಕೊರೊನಾ ಸಂದರ್ಭದಲ್ಲಿ ನಮ್ಮ ಪೋಲಿಸರು, ವೈದ್ಯರು, ಸ್ವಚ್ಛತಾ ಕಾರ್ಮಿಕರು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ಈ ತರಹದ ಕಾರ್ಯಗಳು ಸರ್ವಕಾಲಕ್ಕೂ ನಡೆದುಕೊಂಡು ಹೋಗುವಂತೆ ಪರಿಶ್ರಮದಿಂದ ದೇಶ ಕಟ್ಟಬೇಕಾಗಿದೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT