ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾತ್ರೇಯ ಬಾಬಾಬುಡನ್‌ ದರ್ಗಾ: ಶ್ರದ್ಧಾ–ಭಕ್ತಿಯ ಸಂದಲ್‌ ಉರೂಸ್‌ ಶುರು

ಹಸ್ರಾರು ಜನರು ಭಾಗಿ
Last Updated 22 ಮಾರ್ಚ್ 2019, 20:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾಡಳಿತದ ನೇತೃತ್ವದಲ್ಲಿ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಶುಕ್ರವಾರ ಸಂದಲ್‌ ಉರೂಸ್‌ ಆರಂಭವಾಯಿತು. ವಿವಿಧೆಡೆಯ ಫಕೀರರು, ಸಹಸ್ರಾರು ಮುಸ್ಲಿಮರು ಪಾಲ್ಗೊಂಡಿದ್ದರು.

ಸಂಜೆ 6.30ರ ಹೊತ್ತಿಗೆ ಉರೂಸ್‌ ಮೆರವಣಿಗೆ ಶುರುವಾಯಿತು. ಗುಹೆಯ ಒಳಗಡೆಗೆ ಹೋಗಿ ಸಾಂಪ್ರದಾಯಿಕ ವಿಧಿಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಶಾಖಾದ್ರಿ ಸಯ್ಯದ್‌ ಗೌಸ್‌ ಮೊಯುದ್ದೀನ್‌ ಮತ್ತು ಅವರ ಬೆಂಬಲಿಗರು ಪಟ್ಟುಹಿಡಿದರು. ಗುಹೆಯ ಪ್ರವೇಶ ಗೇಟಿನ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಪಟ್ಟು ಹಿಡಿದು ನಿಂತಿದ್ದರು. ಗಂಧದ ಮೆರವಣಿಗೆ ಸಂದರ್ಭದಲ್ಲಿ ಫಕೀರರ ನರ್ತನ, ಉದ್ಘೋಷ ಜೋರಾಗಿತ್ತು. ಭಕ್ತರು ಗೀತೆಗಳನ್ನು ಹಾಡಿದರು.

ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ, ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನೀಡದಿದ್ದರಿಂದ ಪ್ರವೇಶ ದ್ವಾರದಲ್ಲೇ ಪ್ರಾರ್ಥನೆ ಸಲ್ಲಿಸಿ, ವಾಪಸ್‌ ಹೋದರು.

ಇದಕ್ಕೂ ಮೊದಲು ಜೋಳದಾಳ್‌ನಿಂದ ತಂದಿಟ್ಟಿದ್ದ ಪವಿತ್ರ ಗಂಧವನ್ನು ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ಬಾಬಾಬುಡನ್‌ಗಿರಿಗೆ ಮೆರವಣಿಗೆಯಲ್ಲಿ ತಂದರು. ಗಿರಿಗೆ ಗಂಧವು ಗಂಧ ತಲುಪುತ್ತಿದ್ದಂತೆ ಭಕ್ತರು ನಾಣ್ಯಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು. ಭಕ್ತರು ಸಾಲಾಗಿ ಗುಹೆಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಸಹಿತ ರಾಜ್ಯದ ವಿವಿಧೆಡೆಗಳಿಂದ ಗಿರಿಗೆ ಭಕ್ತರು ಬಂದಿದ್ದಾರೆ. ಶನಿವಾರ ಫಕೀರರು, ಶಾಖಾದ್ರಿ ದರ್ಬಾರ್‌ ಸಭೆ ನಡೆಯಲಿದೆ. ಭಾನುವಾರದವರೆಗೆ ಉರೂಸ್‌ ನಡೆಯಲಿದೆ.

ನಗರ, ಗಿರಿಮಾರ್ಗ, ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಸಹಿತ ವಿವಿಧೆಡೆ 850 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. 20 ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT