ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದಾನದ ಮೂಲಕ ಕಲ್ಯಾಣಿ ಸ್ವಚ್ಛತೆ

ಅರಕಲಗೂಡು ತಾಲ್ಲೂಕು ದಾಸನಪುರ ರಂಗನಾಥಸ್ವಾಮಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ
Last Updated 10 ಏಪ್ರಿಲ್ 2018, 8:41 IST
ಅಕ್ಷರ ಗಾತ್ರ

ಅರಕಲಗೂಡು: ಸಂಗೀತ ವಿದ್ವಾಂಸ ಆರ್‌.ಕೆ.ಪದ್ಮನಾಭ್ ಅಭಿಮಾನಗಳ ಬಳಗ ಹಾಗೂ ಹಾಸನ ಹಸಿರು ಪ್ರತಿಷ್ಠಾನದ ಕಾರ್ಯಕರ್ತರು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ದಾಸನಪುರದ ರಂಗನಾಥಸ್ವಾಮಿ ಬೆಟ್ಟದಲ್ಲಿನ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಮೂಲಕ ಜಲಮೂಲಗಳ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿದರು.

ರಂಗನಾಥಸ್ವಾಮಿ ಬೆಟ್ಟದ ಮೇಲಿನ ಅತ್ಯಂತ ಪುರಾತನವಾದ ಈ ಕಲ್ಯಾಣಿಯು ಬೆಟ್ಟಹತ್ತಿ ರಂಗನಾಥನ ದರ್ಶನಕ್ಕೆ ಬರುವ ಭಕ್ತರಿಗೆ ನೀರಿನ ಆಸರೆ ಒದಗಿಸುವ ಹಾಗೂ ದೇವಾಲಯದ ಉಪಯೋಗಕ್ಕೆ ನಿರ್ಮಿತವಾಗಿತ್ತು. ಇತ್ತೀಚಿನ ದಿನಗಳಲ್ಲಿ ತೀವ್ರ ನಿರ್ಲಕ್ಷಕ್ಕೊಳಗಾಗಿ ಹೊಳಿನಿಂದ ತುಂಬಿತ್ತಲ್ಲದೆ ಗಿಡಗಂಟಿಗಳು ಬೆಳೆದು ಕಲ್ಯಾಣಿ ಇತ್ತು ಎಂಬ ಕುರುಹು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಾಸನದ ಹಸಿರು ಭೂಮಿ ಪ್ರತಿಷ್ಠಾನ ಜಿಲ್ಲೆಯಲ್ಲಿ ಕೈಗೊಂಡಿರುವ ಜಲಜಾಗೃತಿ ಕಾರ್ಯದಿಂದ ಪ್ರೇರಿತರಾದ ಪದ್ಮನಾಭ್‌ ಅಭಿಮಾನಿ ಬಳಗದ ಸದಸ್ಯರು ನೀರಿನ ಮೂಲಗಳ ಸಂರಕ್ಷಣೆ ಕಾರ್ಯದಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಿ ಪರಿಶೀಲನೆ ನಡೆಸಿದಾಗ ಬೆಟ್ಟದ ಮೇಲಿನ ಕಲ್ಯಾಣಿಯ ದುಸ್ಥಿತಿ ಕಣ್ಣಿಗೆ ಬಿತ್ತು. ಹಸಿರು ಭೂಮಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಇದನ್ನು ದುರಸ್ತಿಪಡಿಸಲು ಬಳಗದ ಸದಸ್ಯರು ನಿರ್ಧರಿಸಿದರು. ಈ ಕುರಿತು ಪದ್ಮನಾಭ್‌ ಅವರಲ್ಲಿ ಪ್ರಸ್ತಾಪಿಸಿದಾಗ ಇಂತಹ ಉತ್ತಮ ಕಾರ್ಯದಲ್ಲಿ ತಾವು ಸಹ ಭಾಗವಹಿಸುವುದಾಗಿ ತಿಳಿಸಿದರು.

ಬೆಳಿಗ್ಗೆಯೆ ಹಾರೆ, ಗುದ್ದಲಿ, ಬಾಣಲೆಗಳೊಂದಿಗೆ ಸಿದ್ಧರಾದ ಬಳಗದವರೊಂದಿಗೆ ಹಸಿರು ಪ್ರತಿಷ್ಠಾನದ ಸದಸ್ಯರು ಜತೆಗೂಡಿದರು.
ವಾಹನಗಳ ಮೂಲಕ ದಾಸನಪುರದ ಬೆಟ್ಟದತ್ತ ತೆರಳಿ ಬೆಳಿಗ್ಗೆ ಉಪಹಾರ ಸ್ವೀಕರಿಸಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಇವರೊಂದಿಗೆ ಗ್ರಾಮದ ಕೆಲವರೂ ಕೈಜೋಡಿಸಿದರು. ಬೆಳಿಗ್ಗೆ 9.30ಕ್ಕೆ ಆರಂಭಗೊಂಡ ಕಾರ್ಯಕ್ಕೆ ಪದ್ಮನಾಭ್‌ ಗಾಯನದ ಮೂಲಕ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯ ಮುಗಿಯುವವರೆಗೂ ತಮ್ಮ ಗಾನಸುಧೆ ಹರಿಸಿ ಸ್ಫೂರ್ತಿ ತುಂಬಿದರು. ಮಧ್ಯಾಹ್ನ 1.30ರ ವೇಳೆಗೆ ಸ್ವಚ್ಛತಾ ಕಾರ್ಯ ಮುಗಿದು ಕಲ್ಯಾಣಿಯಲ್ಲಿ ಜಲಸೆಲೆ ಹನಿಯಲಾರಂಭಿಸಿದಾಗ ಎಲ್ಲರ ಮೊಗದಲ್ಲೂ ಸಾರ್ಥಕ ಭಾವ ಮೂಡಿಸಿತು.

ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಸಾಹಿತಿ ರೂಪ ಹಾಸನ್, ಪಶ್ಚಿಮ ಘಟ್ಟಗಳ ನೆರಳಿನಲ್ಲೆ ಇರುವ ಹಾಸನ ಜಿಲ್ಲೆ ಬರಗಾಲ ಪೀಡಿತವಾಗಿದೆ ಎಂದರೆ ಇಲ್ಲಿನ ಪರಿಸರ ಎಷ್ಟು ಹದಗೆಟ್ಟಿದೆ ಎಂಬ ಸತ್ಯ ತಿಳಿಯುತ್ತದೆ. ನೀರಿನ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸುವ ಜತೆಗೆ ಜಲಮೂಲಗಳನ್ನು ಸಂರಕ್ಷಿಸಲು ಜನಾಂದೋಲನ ರೋಪಿಸಬೇಕು ಎಂಬ ಹಿನ್ನೆಲೆಯಲ್ಲಿ ರೂಪುಗೊಂಡ ಹಸಿರುಭೂಮಿ ಪ್ರತಿಷ್ಠಾನ ಈವರೆಗೂ 29 ಕಲ್ಯಾಣಿ ಹಾಗೂ 4 ಕೆರೆಗಳ ಸ್ವಚ್ಛಚತಾ ಕಾರ್ಯ ನಡೆಸಿದೆ. ಇವುಗಳು ಇಂದು ನೀರಿನಿಂದ ತುಂಬಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಸುಧಾರಿಸಿದೆ ಎಂದರು.

ಶ್ರಮದಾನದ ಬಳಿಕ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಕೈಗೊಂಡಿರುವ ಜಲಸಾಕ್ಷರತೆ ಕುರಿತ ಕಾರ್ಯಕ್ರಮದ ವಿಡಿಯೋ ಪ್ರದರ್ಶನ ಹಾಗೂ ಮಾಹಿತಿ ನೀಡಲಾಯಿತು. ಬಳಿಕ ಕಾರ್ಯಕರ್ತರು ಸಾಮೂಹಿಕ ಭೋಜನ ಸವಿದರು.

ಹಸಿರು ಭೂಮಿ ಪ್ರತಿಷ್ಠಾನದ ಗಿರಿಜಾ ದಿನಕರ್‌, ತಿರುಪತಿಹಳ್ಳಿ ಶಿವಶಂಕರಪ್ಪ, ಬಿ.ಎಸ್‌ ದೇಸಾಯಿ, ಹಗರೆ ಅಹಮದ್‌, ಅಭಿಮಾನಿ ಬಳಗದ ರಮೇಶ್‌ ವಾಟಾಳ್, ಭೀಮರಾಜ್‌, ಗುರು ಮೂರ್ತಿ, ವಿಜಯ್‌ ಕುಮಾರ್‌, ಪುನೀತ್‌ ಗೌಡ ಶಶಿಕುಮಾರ್‌, ನಾಗೆಂದ್ರ ಗ್ರಾಮಸ್ಥರಾದ ರಾಮಕೃಷ್ಣಯ್ಯ, ಮಧು, ವರದರಾಜ್‌, ಪರಮೇಶ್‌ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT