ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಸಾರುವ ದಾವಣಗೆರೆಯ ‘ರಾಮ್‌–ರಹೀಮ್‌ ಹೋಟೆಲ್‌’

Last Updated 19 ಮಾರ್ಚ್ 2019, 19:10 IST
ಅಕ್ಷರ ಗಾತ್ರ

ದಾವಣಗೆರೆ: ದೇವರ, ತಂದೆ, ತಾಯಿಯ, ಮಕ್ಕಳ ಹೆಸರುಗಳನ್ನು ಹೋಟೆಲ್‌ಗಳಿಗೆ ಇಡುವುದು ಹೊಸತಲ್ಲ. ಜಾತಿಯಾಧಾರಿತ ಹೆಸರುಗಳೂ ಕೆಲವೆಡೆ ಇರುತ್ತವೆ. ಇವ್ಯಾವುದೂ ಬೇಡ ಎಂದು ಸ್ವಾಗತ, ಪ್ರಕೃತಿ, ನಿಸರ್ಗ ಎಂದು ತಟಸ್ಥ ಹೆಸರನ್ನೂ ಕೆಲವರು ಚಿಂತನೆ ನಡೆಸಿ ಇಡುತ್ತಾರೆ. ಆದರೆ ಎರಡು ಧರ್ಮಗಳನ್ನು ಬೆಸೆಯುವ ಹೆಸರು ಕಾಣಸಿಗುವುದು ವಿರಳ. ಇದಕ್ಕೆ ಅಪವಾದ ಎಂಬಂತೆ ನಗರದಲ್ಲಿ ‘ರಾಮ್‌– ರಹೀಮ್‌ ಹೋಟೆಲ್‌ (ಬಾಂಬೆ)’ ಸೌಹಾರ್ದ ಸಾರುತ್ತಿದೆ.

ಜಗಳೂರು ತಾಲ್ಲೂಕು ಕಲ್ಲೇದೇವಪುರದ ಪ್ರಕಾಶ್‌ ಶೆಟ್ಟಿ ಈಚೆಗಷ್ಟೇ ಈ ಹೋಟೆಲ್‌ ಅನ್ನು ನಗರದ ಜಯದೇವ ಸರ್ಕಲ್‌–ನಿಟುವಳ್ಳಿ ರಸ್ತೆಯ ಭಗತ್‌ಸಿಂಗ್‌ ನಗರದಲ್ಲಿ ತೆರೆದಿದ್ದಾರೆ. ‘ಈಶ್ವರ್ ಅಲ್ಲಾ ತೇರೇ ನಾಮ್‌, ಸಬ್‌ಕೊ ಸನ್ಮತಿ ದೇ ಭಗವಾನ್‌’ ಎಂದು ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಪೂರ್ವದಲ್ಲಿಯೇ ಹೇಳಿದ್ದಾರೆ. ಅದೇ ಚಿಂತನೆಯಡಿ ಈ ಹೆಸರು ಇಡಲಾಗಿದೆ ಎಂದು ಅವರು ಹೇಳಿಕೊಳ್ಳುತ್ತಾರೆ.

ಪ್ರಕಾಶ್‌ ಶೆಟ್ಟಿ ಎಸ್ಎಸ್‌ಎಲ್‌ಸಿ ಮುಗಿಸಿದ ಬಳಿಕ ಮುಂದಕ್ಕೆ ಓದಲಾರದೇ ಮುಂಬೈಗೆ ಹೋಗಿದ್ದರು. ಅಲ್ಲಿ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಾ ಬೆಳೆದ ಅವರು ಅಂಧೇರಿಯಲ್ಲಿ ಸ್ವಂತ ಕ್ಯಾಂಟೀನ್‌ ಹಾಕಿದ್ದರು. 30 ವರ್ಷಗಳ ಕಾಲ ವ್ಯಾಪಾರ ನಡೆಸಿದ್ದರು. ಈಚೆಗೆ ಊರಿಗೆ ಮರಳಿದ ಅವರು ಈ ಹೋಟೆಲ್‌ ತೆರೆದಿದ್ದಾರೆ. ಅದಕ್ಕೆ ಮುಂಬೈನಲ್ಲಿನ ಸೌಹಾರ್ದಯುತ ಬದುಕಿನ ನೆನಪಿನಲ್ಲಿ ಈ ಹೆಸರು ಇಟ್ಟಿದ್ದಾರೆ.

‘ಜಗತ್ತನ್ನು ಸೃಷ್ಟಿಸಿದ ದೇವರನ್ನು ಯಾರೂ ಕಂಡಿಲ್ಲ. ನಾವೇ ಹಿಂದೂ, ಮುಸ್ಲಿಂ, ಕ್ರೈಸ್ತ ಎಂದೆಲ್ಲ ವಿಭಾಗ ಮಾಡಿ ದೇವರಿಗೆ ಬೇರೆ ಬೇರೆ ಹೆಸರಿಟ್ಟುಕೊಂಡು ಬಡಿದಾಡುತ್ತಿದ್ದೇವೆ. ಹಾಗಾಗಿಯೇ ಮುಸ್ಲಿಮರ ಮಧ್ಯೆ ಹಿಂದೂಗಳು ಬದುಕುವುದು ಕಷ್ಟ ಅಥವಾ ಹಿಂದೂಗಳ ಮಧ್ಯೆ ಮುಸ್ಲಿಮರಿಗೆ ಕಷ್ಟ ಎಂದು ಭಾವಿಸುತ್ತಾ ಹೋಗುತ್ತೇವೆ. ನಾನು ಮುಂಬೈಯಲ್ಲಿ ಇದ್ದಿದ್ದೇ ಮುಸ್ಲಿಂ ಕೇರಿಯಲ್ಲಿ. ನನಗೆ ಯಾವ ತೊಂದರೆಯೂ ಆಗಿಲ್ಲ’ ಎಂದು 54 ವರ್ಷದ ಪ್ರಕಾಶ್‌ ಶೆಟ್ಟಿ ಹಿಂದಿನ ಯೋಚನೆಯನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಪತ್ನಿ ಎಂ. ಉಷಾ ಟೈಲರ್‌ ಆಗಿದ್ದಾಳೆ. ಮಗ ನವೀನ್‌ ಐಪಿಎಸ್‌ ಪರೀಕ್ಷೆ ಬರೆಯಲು ಸಿದ್ಧತೆ ಮಾಡುತ್ತಿದ್ದಾನೆ. ಹೆಣ್ಣುಮಕ್ಕಳಾದ ನಯನಾ ಡೆಂಟಲ್‌ ಸೈನ್ಸ್‌, ಮೋನಿಕಾ ಎಲ್‌ಎಲ್‌ಬಿ, ರಾಧಿಕಾ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ. ಧರ್ಮಗಳ ಹೆಸರಲ್ಲಿ ಹೊಡೆದಾಡದೇ ಎಲ್ಲ ದೇವರು ಒಂದೇ ಎಂದು ದುಡಿದು ಬದುಕುವುದನ್ನು ಅವರಿಗೂ ಹೇಳಿಕೊಟ್ಟಿದ್ದೇನೆ’ ಎಂದು ತಿಳಿಸಿದರು.

**

ನಾವು ಸರಿ ಇದ್ದರೆ ದುನಿಯಾ ಸರಿ ಇರುತ್ತದೆ. ನಾವು ಹೊಂದಿಕೊಂಡರೆ ಇನ್ನೊಬ್ಬರೂ ನಮಗೆ ಹೊಂದಿಕೊಳ್ಳುತ್ತಾರೆ. ಪರಸ್ಪರರನ್ನು ದೂರುವುದೇ ಸಮಸ್ಯೆಗಳಿಗೆ ಕಾರಣ
- ಪ್ರಕಾಶ್‌ ಶೆಟ್ಟಿ, ರಾಮ್‌–ರಹೀಮ್‌ ಹೋಟೆಲ್‌ ಮಾಲೀಕ

**

ಈ ಹೆಸರು ಮೊದಲು ವಿಭಿನ್ನವಾಗಿ ಕಂಡಿತು. ನಂತರ ಇದರ ಹಿನ್ನೆಲೆ ಅರ್ಥವಾಯಿತು. ದಾವಣಗೆರೆ ಮಾತ್ರವಲ್ಲ, ಎಲ್ಲ ಕಡೆ ಈ ರೀತಿ ಸೌಹಾರ್ದ ಸಾರುವ ಹೆಸರುಗಳೇ ಬರಬೇಕು.
- ಗಣೇಶ, ಮಸ್ತಾನ್‌,ಗ್ರಾಹಕರು, ಭಗತ್‌ಸಿಂಗ್‌ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT