ಸಂತ್ರಸ್ತರ ಮನೆ ಬೆಳಗಿಸಿದ ಕಾರ್ಪೋರೇಟರ್‌

7
ಕೇರಳದಲ್ಲಿ ಮಂಗಳೂರು ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ ಶ್ರಮದಾನ

ಸಂತ್ರಸ್ತರ ಮನೆ ಬೆಳಗಿಸಿದ ಕಾರ್ಪೋರೇಟರ್‌

Published:
Updated:
Deccan Herald

ಮಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ತೆರಳಿದ್ದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ನೂರಾರು ಮನೆಗಳ ವಿದ್ಯುತ್‌ ಸಂಪರ್ಕ ದುರಸ್ತಿ ಮಾಡಿ ಸಂತ್ರಸ್ತರ ಮೊಗದಲ್ಲಿ ನಗುವಿನ ‘ಬೆಳಕು’ ಮೂಡಿಸಿ ಬಂದಿದ್ದಾರೆ.

ವೃತ್ತಿಯಲ್ಲಿ ವಿದ್ಯುತ್‌ ಕಾಮಗಾರಿಗಳ ಗುತ್ತಿಗೆದಾರರಾಗಿದ್ದ ದಯಾನಂದ ಶೆಟ್ಟಿ, ತ್ರಿಶೂರ್‌ ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯಿತಿಗಳು ಮತ್ತು ಒಂದು ನಗರಸಭೆ ವ್ಯಾಪ್ತಿಯಲ್ಲಿ ಶ್ರಮದಾನ ಮುಗಿಸಿ ಮರಳಿದ್ದಾರೆ. ಈ ಅವಧಿಯಲ್ಲಿ ಅವರು ಖುದ್ದಾಗಿ ನೂರಕ್ಕೂ ಹೆಚ್ಚು ಮನೆಗಳ ವಿದ್ಯುತ್‌ ಸಂಪರ್ಕ ದುರಸ್ತಿ ಮಾಡಿದ್ದಾರೆ. 400ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಸಂಪರ್ಕ ದುರಸ್ತಿ ಕೆಲಸಕ್ಕೂ ಮಾರ್ಗದರ್ಶನ ಮಾಡಿದ್ದಾರೆ.

ಕೇರಳದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಮನೆಗಳು ಮೇಲ್ಚಾವಣಿಯವರೆಗೂ ನೀರಿನಲ್ಲಿ ಮುಳುಗಿದ್ದವು. ಇದರಿಂದಾಗಿ ಮನೆಯೊಳಗೆ ಕೆಸರು ತುಂಬಿಕೊಂಡಿದ್ದಲ್ಲದೇ, ವಿದ್ಯುತ್‌ ಸಂಪರ್ಕ ವ್ಯವಸ್ಥೆಗೂ ಹಾನಿಯಾಗಿತ್ತು. ದುರಸ್ತಿ ಕಾರ್ಯ ನಡೆಸದೇ ಮನೆಗಳಿಗೆ ವಿದ್ಯುತ್‌ ಪೂರೈಕೆ ಮಾಡಲಾಗದ ಸ್ಥಿತಿ ಇತ್ತು. ಹೀಗೆ ತ್ರಿಶೂರ್‌ ಜಿಲ್ಲೆಯಲ್ಲಿ ತೊಂದರೆಗೊಳಗಾಗಿರುವ ಮನೆಗಳಲ್ಲಿ ವಿದ್ಯುತ್‌ ಸಂಪರ್ಕ ದುರಸ್ತಿಗೆ ಕಾಸರಗೋಡು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ 100 ಜನರ ತಂಡ ಹೊರಟು ನಿಂತಿತ್ತು.

ಪ್ರಾಯೋಗಿಕವಾಗಿ ಕೆಲಸ ಮಾಡಿದ ಅನುಭವವಿಲ್ಲದ ವಿದ್ಯಾರ್ಥಿಗಳನ್ನು ಕರೆದೊಯ್ದು ಅವರಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ದುರಸ್ತಿ ಮಾಡಿಸುವುದು ಸವಾ
ಲಾಗಿತ್ತು. ಆಗ, ಮಾರ್ಗದರ್ಶನಕ್ಕಾಗಿ ಅನುಭವಿ ಕೆಲಸಗಾರರ ತಂಡವೊಂದನ್ನು ಅವ‌ರೊಂದಿಗೆ ಕಳುಹಿಸಲು ಕಾಸರಗೋಡು ಜಿಲ್ಲಾಧಿಕಾರಿ ತೀರ್ಮಾನಿಸಿದ್ದರು. ಆಗ ದಯಾನಂದ ಶೆಟ್ಟಿ ಅವರಿಗೆ ಆಹ್ವಾನ ಬಂದಿತ್ತು. ಆರು ಜನರ ತಂಡದೊಂದಿಗೆ ತ್ರಿಶೂರ್‌ ಜಿಲ್ಲೆಗೆ ತೆರಳಿದ್ದ ಅವರು ಏಳು ದಿನಗಳ ಕಾಲ ಅಲ್ಲಿದ್ದು, ಕೆಲಸ ಮಾಡಿ ಬಂದಿದ್ದಾರೆ. 

ತಂಡದ ನೇತೃತ್ವ: ‘ಕಾಸರಗೋಡು ಐಟಿಐನಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ 100 ಮಂದಿ ಬಂದಿದ್ದರು. ನಾನು ಮತ್ತು ಆರು ಜನರು ಮಂಗಳೂರಿನಿಂದ ಹೋಗಿದ್ದೆವು. ನಾನು ಮತ್ತು ನನ್ನೊಂದಿಗೆ ಇದ್ದವರು ಹಲವು ವರ್ಷಗಳಿಂದ ಎಲೆಕ್ಟ್ರಿಷಿಯನ್‌ ಕೆಲಸ ಮಾಡಿದ ಅನುಭವ ಹೊಂದಿದ್ದವರು. ಏಳು ತಂಡಗಳನ್ನು ರಚಿಸಿ, ಪ್ರತಿ ತಂಡಕ್ಕೂ ನಮ್ಮಲ್ಲಿ ಒಬ್ಬರಿಗೆ ನಾಯಕತ್ವ ನೀಡಿದ್ದರು. ತ್ರಿಶೂರ್‌ ಜಿಲ್ಲೆಯ ಅನ್ನಮನಡ, ಮಾಲಾ, ಕುಲೂರು ಮತ್ತು ಪೊಯ್ಯ ಗ್ರಾಮ ಪಂಚಾಯಿತಿಗಳು ಹಾಗೂ ಇರಿಂಜಲಕ್ಕುಡ ನಗರಸಭೆ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡಿ ಬಂದಿದ್ದೇವೆ’ ಎಂದು ದಯಾನಂದ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘20 ವರ್ಷಗಳಿಂದ ವಿದ್ಯುತ್‌ ಕಾಮಗಾರಿಗಳ ಕೆಲಸಗಾರನಾಗಿ, ಗುತ್ತಿಗೆದಾರನಾಗಿ ಕೆಲಸ ಮಾಡಿದ ಅನುಭವವಿತ್ತು. ಅದನ್ನು ಪ್ರವಾಹ ಸಂತ್ರಸ್ತರ ಒಳಿತಿಗಾಗಿ ಬಳಕೆ ಮಾಡಿದ್ದು ಸಂತೋಷ ತಂದಿದೆ. ವಿದ್ಯುತ್‌ ಸಂಪರ್ಕ ವ್ಯವಸ್ಥೆ ದುರಸ್ತಿ ಮಾಡಿ, ದೀಪ ಉರಿಸಿ ಬಂದಾಗ ಸಾರ್ಥಕ ಭಾವ ಮೂಡಿತು’ ಎಂದರು.

ವ್ಯವಸ್ಥಿತ ಬಳಕೆ

ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕೆಲಸದಲ್ಲಿ ಭಾಗಿಯಾಗಲು ವಿವಿಧೆಡೆಯಿಂದ ಸಾವಿರಾರು ಮಂದಿ ಸ್ವಯಂಸೇವಕರು ಬಂದಿದ್ದಾರೆ. ಅಲ್ಲಿನ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಎಲ್ಲರನ್ನೂ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿವೆ ಎನ್ನುತ್ತಾರೆ ದಯಾನಂದ ಶೆಟ್ಟಿ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !