ಡಿ.ಸಿ, ಸಿಇಒಗಳಿಗೆ ಹೋಬಳಿ ವಾಸ್ತವ್ಯ ಕಡ್ಡಾಯ

7
ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಕಡ್ಡಾಯ

ಡಿ.ಸಿ, ಸಿಇಒಗಳಿಗೆ ಹೋಬಳಿ ವಾಸ್ತವ್ಯ ಕಡ್ಡಾಯ

Published:
Updated:

ಬೆಂಗಳೂರು: ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಿಂಗಳಲ್ಲಿ ಒಂದು ವಾರ ತಾಲ್ಲೂಕುಗಳಿಗೆ ಪ್ರವಾಸ ಮತ್ತು ಒಂದು ದಿನ ಹೋಬಳಿಯಲ್ಲಿ ಕಡ್ಡಾಯ ವಾಸ್ತವ್ಯ ಮಾಡಬೇಕು

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಸೂಚನಾ ಪತ್ರ ಕಳಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡಿ.ಸಿ ಮತ್ತು ಸಿಇಒಗಳ ಸಭೆಯಲ್ಲಿ ಈ ಬಗ್ಗೆ  ಸಮಗ್ರ ಚರ್ಚೆ ನಡೆಸಲಾಗಿತ್ತು. ಈ ಸಂಬಂಧ ಕಡ್ಡಾಯವಾಗಿ ಮಾಡಬೇಕಾಗಿರುವ ಕಾರ್ಯಗಳ ಮಾಹಿತಿಯನ್ನು ಒಳಗೊಂಡ ಟಿಪ್ಪ ಸಿದ್ಧಪಡಿಸಿ ಕಳುಹಿಸಿದ್ದಾರೆ.

ಟಿಪ್ಪಣಿಯಲ್ಲಿರುವ ಅಂಶಗಳು

*ಪ್ರತಿ ತಾಲ್ಲೂಕಿನಲ್ಲಿ ಒಂದು ಸಮೀಕ್ಷಾ ಸಭೆ ಮತ್ತು ಸಾರ್ವಜನಿಕ ಸಂಪರ್ಕ ಸಭೆ ನಡೆಸಬೇಕು.

*ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಜಿಲ್ಲಾ ಮಟ್ಟದ ಒಂದು ಸಮನ್ವಯ  ಸಮಿತಿ ರಚಿಸಿ ಸಭೆಗಳನ್ನು ನಡೆಸಬೇಕು.

* ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಸತಿ ಶಾಲೆಗಳಿಗೆ ತಿಂಗಳಿಗೆ ಒಂದು ದಿನ ಆಕಸ್ಮಿಕ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಾಮರ್ಶಿಸಬೇಕು.

* ಬಂಡವಾಳ ಹೂಡಿಕೆದಾರರಿಗೆ ಬೇಕಾಗುವ ಜಮೀನಿನ ಭೂಸ್ವಾಧ್ವೀನ ಪ್ರಕ್ರಿಯೆ ತ್ವರಿತಗೊಳಿಸಬೇಕು.

* ಶಾಲಾ– ಕಾಲೇಜುಗಳ ಕಟ್ಟಡ ಮತ್ತು ಶಿಕ್ಷಕರ ಕೊರತೆ ಪರಾಮರ್ಶೆ ನಡೆಸಬೇಕು.

* ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.

* ನಿವೇಶನ ರಹಿತ ವ್ಯಕ್ತಿಗಳಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಕಾಯ್ದಿರಿಸಬೇಕು. ವಸತಿ ಯೋಜನೆಗಳಿಗೆ ಬೇಕಾಗುವ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು. ಸೆಪ್ಟಂಬರ್‌ 30 ರೊಳಗೆ ಎಷ್ಟು ಜಮೀನು ಬೇಕೆಂಬ ವರದಿಯನ್ನು ವಸತಿ ಇಲಾಖೆ ಕಾರ್ಯದರ್ಶಿಗೆ ನೀಡಬೇಕು.

* ವಸತಿ ಶಾಲೆ, ಆಸ್ಪತ್ರೆ ಇತ್ಯಾದಿಗಳಿಗೆ ಆಗಸ್ಟ್‌ 31ರೊಳಗೆ ಜಮೀನು ಗುರುತಿಸಬೇಕು.

* ಇತ್ತೀಚಿನ ಮಳೆ ಅನಾಹುತದಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರವನ್ನು ತಕ್ಷಣವೇ ಪಾವತಿಸಬೇಕು. 

* ರಸ್ತೆ, ರೈಲ್ವೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಜಮೀನು ನೀಡಲು ಭೂಸ್ವಾಧೀನ ತ್ವರಿತಗೊಳಿಸಬೇಕು. ಅಧಿಕಾರಿಗಳು ಸರ್ಕಾರಿ ಶಾಲೆಗಳ ಪ್ರದೇಶಗಳಲ್ಲಿ ಎರಡು ಅಥವಾ ಹೆಚ್ಚಿನ ಮಹಡಿಯ ಹಾಸ್ಟೆಲ್‌ಗಳನ್ನು ನಿರ್ಮಿಸಲು ನಿವೇಶನ ನೀಡಬೇಕು.

* ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಕಳಿಸಬೇಕು.

* ಎಲ್ಲ ಪ್ರಾದೇಶಿಕ ಆಯುಕ್ತರು ಪ್ರತಿ ತಿಂಗಳು ಸಮೀಕ್ಷಾ ಸಭೆಗಳನ್ನು ನಡೆಸಬೇಕು.

* ಜಿಲ್ಲೆಗಳಲ್ಲಿ ಒತ್ತುವರಿ ತೆರವು ಮಾಡಿದ ಜಮೀನುಗಳಿಗೆ ಬೇಲಿ ಹಾಕಬೇಕು. ಎಸ್‌.ಡಿ.ಆರ್‌.ಎಫ್‌ ಅಡಿ ಕಾಲು ಸಂಕಗಳ ರಿಪೇರಿ ಮಾಡಿಸಬೇಕು.

* ಘನ ತ್ಯಾಜ್ಯ ಘಟಕಗಳಿಗೆ ನಗರ, ಪಟ್ಟಣಗಳ ಸುತ್ತಮುತ್ತ ಜಮೀನು ಮಂಜೂರು ಮಾಡುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !