ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕುಟುಂಬಕ್ಕೆ ₹ 3800 ಪರಿಹಾರ

ಕೂಡಲೇ ವಿತರಿಸಲು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ
Last Updated 12 ಆಗಸ್ಟ್ 2019, 11:20 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ಆರಂಭಿಸಿದ ಪರಿಹಾರ ಕೇಂದ್ರಗಳಲ್ಲಿರುವ ಪ್ರತಿ ಕುಟುಂಬಕ್ಕೂ ಬಟ್ಟೆ ಹಾಗೂ ಪಾತ್ರೆಗಳಿಗಾಗಿ ತಲಾ ₹ 3,800 ಪರಿಹಾರವನ್ನು ತಕ್ಷಣ ವಿತರಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಕ್ಷಣೆ, ಸ್ಥಳಾಂತರ, ಪರಿಹಾರ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಸೋಮವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾಹಿತಿ ಪಡೆದರು. ‘ಮಾನವೀಯತೆ ಆಧಾರದ ಮೇಲೆ ಪರಿಹಾರ ವಿತರಿಸಿ ವರದಿ ಸಲ್ಲಿಸಬೇಕು. ಜನಪ್ರತಿನಿಧಿಗಳ ಗಮನಕ್ಕೆ ತಂದು ಆದಷ್ಟು ಬೇಗನೆ ಚೆಕ್ ವಿತರಿಸಬಹುದು. ವಿಳಂಬ ಮಾಡಬಾರದು’ ಎಂದು ಸೂಚಿಸಿದರು.

ನಿರಾಕರಿಸಿದವರಿಗೆ ಆಹಾರ, ನೀರು:‘ಪ್ರವಾಹಕ್ಕೆ ಸಿಲುಕಿರುವ ಎಲ್ಲರನ್ನೂ ರಕ್ಷಿಸಲಾಗಿದೆ. ಚಿಕ್ಕೋಡಿ ತಾಲ್ಲೂಕಿನ 4 ಗ್ರಾಮಗಳಲ್ಲಿ ಇನ್ನೂ ಜನರಿದ್ದು, ಸ್ಥಳಾಂತರಕ್ಕೆ ನಿರಾಕರಿಸುತ್ತಿದ್ದಾರೆ. ಉಳಿದ ಕಡೆಗಳಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಪರಿಹಾರ ಹಾಗೂ ಪುನರ್ವಸತಿ ಕೆಲಸ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅಪಾಯದಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ. ಹೊರಬರಲು ನಿರಾಕರಿಸುತ್ತಿರುವ ಕೆಲ ಗ್ರಾಮಗಳ ಜನರಿಗೆ ಆಹಾರ ಮತ್ತು ನೀರು ಪೂರೈಸಲಾಗುತ್ತಿದೆ. ನದಿಗಳಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದರೆ ಅವರ ಮನವೊಲಿಸಿ ಸ್ಥಳಾಂತರಿಸಲಾಗುವುದು’ ಎಂದರು.

‘ಜಾನುವಾರುಗಳಿಗೆ ಅಗತ್ಯವಿರುವ ಮೇವು ಖರೀದಿಸಬೇಕು. ಪರಿಹಾರ ಕೇಂದ್ರಗಳ ಜಾನುವಾರುಗೆ ಉಚಿತವಾಗಿ ಒದಗಿಸಬೇಕು. ಪ್ರವಾಹಪೀಡಿತ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಆರಂಭಿಸಬೇಕು’ ಎಂದು ಬೊಮ್ಮನಹಳ್ಳಿ ಸೂಚಿಸಿದರು.

‘2005ರಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಮಾತ್ರ ಪ್ರವಾಹವಿತ್ತು. ಈಗ ಜಿಲ್ಲೆಯ ಎಲ್ಲ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹದಿಂದಾಗಿ ಎಲ್ಲ ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿದ್ದು, ನಿರ್ವಹಣೆ ಸವಾಲಾಗಿದೆ. ಈಗ 300ಕ್ಕೂ ಹೆಚ್ಚಿನ ಗ್ರಾಮಗಳನ್ನು ಸ್ಥಳಾಂತರಿಸಿ, 400ಕ್ಕೂ ಅಧಿಕ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಗುಣಮಟ್ಟದ ಆಹಾರ ನೀಡಬೇಕು. ಸಂಘ-ಸಂಸ್ಥೆಗಳು ನೀಡುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿಯೇ ನೀಡಬೇಕು’ ಎಂದು ತಾಕೀತು ಮಾಡಿದರು.

ಪ್ರವಾಹ ಪರಿಸ್ಥಿತಿ ನಿಯಂತ್ರಣ:‘ರಾಮದುರ್ಗದ 8 ಗ್ರಾಮಗಳ ರಸ್ತೆ ಬಂದ್ ಆಗಿತ್ತು. ಮಂಗಳವಾರದ ವೇಳೆಗೆ ಮುಕ್ತವಾಗಲಿವೆ. ರಾಮದುರ್ಗ ಪಟ್ಟಣವೂ ಜಲಾವೃತಗೊಂಡಿದೆ’ ಎಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.

‘ಚಿಕ್ಕೋಡಿ ತಾಲ್ಲೂಕಿನ ಚಂದೂರ, ಚಂದೂರವಾಡಿ, ಯಡೂರು, ಯಡೂರವಾಡಿಯ ಸಾವಿರ ಮಂದಿ ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ’ ಎಂದು ನೋಡಲ್ ಅಧಿಕಾರಿ ಜಿಲಾನಿ ಮೊಖಾಶಿ ಮಾಹಿತಿ ನೀಡಿದರು.

‘ಅಥಣಿಯ ಮಹೇಶವಾಡಿಯಲ್ಲಿ 50ರಿಂದ 60 ಜನರಿದ್ದಾರೆ. ನಂದೇಶ್ವರದಲ್ಲೂ ಸ್ವಲ್ಪ ಜನರಿದ್ದಾರೆ. ಅವರನ್ನು ಸ್ಥಳಾಂತರಿಸಲಾಗುವುದು’ ಎಂದು ತಹಶೀಲ್ದಾರ್‌ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ರಮೇಶ ಕಳಸದ, ಶಶಿಧರ ಕುರೇರ, ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT