ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಮ್ಯಾರಥಾನ್; ಮುಂದೆಯೂ ಓಡಬೇಕಿದೆ...’

ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರದ್ದು ಮುಂಚೂಣಿ ಪಾತ್ರ
Last Updated 22 ಜೂನ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ‘ಕ್ಷಿಪ್ರವಾಗಿ ವ್ಯಾಪಿಸುತ್ತಿರುವ ಕೋವಿಡ್‌ 19 ಯಾವಾಗ ಕೊನೆಯಾಗಲಿದೆ ಎಂಬ ಮಾಹಿತಿ ಯಾರಲ್ಲೂ ಇಲ್ಲ. ಲಾಕ್‌ಡೌನ್‌ ಸಡಿಲಿಕೆಯಾಗಿದೆ. ಈಗ ಕೇಂದ್ರ, ರಾಜ್ಯ ಸರ್ಕಾರದಿಂದ ಬರುವ ಎಲ್ಲ ಮಾರ್ಗಸೂಚಿಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು. ಇದೊಂದು ಮ್ಯಾರಥಾನ್‌ ಇದ್ದಂತೆ. ಎರಡು ಕಿ.ಮೀ ಸಾಗಿದ ಮೇಲೆ ಜಯಗಳಿಸಿದ್ದೇವೆ ಎಂದು ಕೂರುವಂತಿಲ್ಲ. ಈ ಹೋರಾಟದಲ್ಲಿ ಮುಂದೆಯೂ ಓಡಬೇಕಿದೆ...’

– ಹೀಗೆ ನುಡಿದವರು ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌.

ಮಾರ್ಚ್‌ನಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ಅನೀಸ್‌ ಕಣ್ಮಣಿ ಜಾಯ್‌ ಅವರದ್ದು ಪ್ರಮುಖ ಪಾತ್ರ. ಇವರ ನೇತೃತ್ವದಲ್ಲಿ ಕೋವಿಡ್‌ 19 ವಿರುದ್ಧ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೊರೊನಾ ವಾರಿಯರ್ಸ್‌ಗಳಾಗಿ ಹೋರಾಟದಲ್ಲಿ ತೊಡಗಿದ್ದಾರೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗ ಕೊರೊನಾ ಸೋಂಕು ಮತ್ತಷ್ಟು ಕ್ಷಿಪ್ರವಾಗಿ ಹರಡುತ್ತಿದ್ದು ಅದು ಕೊಡಗಿಗೂ ಎಚ್ಚರಿಕೆಯ ಗಂಟೆಯಾಗಿದೆ. ಸದ್ಯಕ್ಕೆ ನಿರಾಳಭಾವದಲ್ಲಿರುವ ಕಾಫಿ ನಾಡಿನಲ್ಲಿ ಎರಡು ಮಾತ್ರ ಸಕ್ರಿಯ ಪ್ರಕರಣಗಳಿವೆ. ಆದರೂ, ಎಚ್ಚರಿಕೆ ತಪ್ಪಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಅರಿವು ಎಲ್ಲರಲ್ಲೂ ಇದೆ.

ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಜೊತೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರು ಮಾತನಾಡಿದ್ದು ಅದರ ವಿವರ ಇಲ್ಲಿದೆ.

‘ನಾನು ಜಿಲ್ಲೆಗೆ ಬಂದು ಒಂದು ವರ್ಷ, ನಾಲ್ಕು ತಿಂಗಳು ಕಳೆದಿದೆ. ಕೋವಿಡ್‌ ಮಾತ್ರವಲ್ಲ; ಪ್ರವಾಹ, ಭೂಕುಸಿತ, ಚುನಾವಣೆ ಮತ್ತಿತರ ಸಂದರ್ಭದಲ್ಲೂ ಎಲ್ಲ ಅಧಿಕಾರಿಗಳೂ ಸೇರಿದಂತೆ ಕೆಳಹಂತದ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇಲಾಖೆಗಳ ನಡುವೆ ಸಮನ್ವಯತೆಯಿದೆ. ಕೋವಿಡ್‌ ಸಂದರ್ಭದಲ್ಲಿ ಪ್ರತಿ ಗ್ರಾಮಕ್ಕೂ ತೆರಳಿ ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ಇಲಾಖೆ ಅಧಿಕಾರಿಗಳೂ ಸಾಕಷ್ಟು ಉತ್ತಮ ಸಲಹೆಗಳನ್ನೇ ನೀಡಿದ್ದು ಅದನ್ನು ಜಿಲ್ಲಾಡಳಿತದಿಂದ ಅನುಷ್ಠಾನಕ್ಕೆ ತರಲಾಗಿದೆ’ ಎಂದು ನುಡಿದರು.

ಯಶಸ್ವಿ ನಿರ್ವಹಣೆ ತೃಪ್ತಿ:

‘ರಾಜ್ಯದಲ್ಲಿ ಬೆಂಗಳೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾದ ಮೇಲೆ, ಕೊಡಗಿನಲ್ಲಿ ಒಂದು ಪ್ರಕರಣ ಕಂಡುಬಂತು. ಮಾರ್ಚ್‌ 18ರಂದು ದುಬೈನಿಂದ ಜಿಲ್ಲೆಗೆ ಮರಳಿದ್ದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅದು ಜಿಲ್ಲೆಯ ಮೊದಲ ಪ್ರಕರಣ. ಅಂದು ನಮ್ಮ ಕಣ್ಮುಂದೆ ಯಾವ ಮಾರ್ಗಸೂಚಿಗಳೂ ಇರಲಿಲ್ಲ. ಸೋಂಕು ವ್ಯಾಪಿಸಿದಂತೆ ತಡೆಯುವುದು ಮೊದಲ ಕೆಲಸವಾಗಿತ್ತು. ಸಾಕಷ್ಟು ಮಂದಿ ಸಲಹೆ ಪಡೆದು ನಿಯಮಾವಳಿ ಜಾರಿಗೆ ತರಲಾಯಿತು. ಆರಂಭದಲ್ಲಿ ಕೆಲವು ನಿಯಮ ಜಾರಿಗೆ ತಂದೆವು. ಜನರಿಗೆ ಕಷ್ಟವಾಗಲಿದೆ ಎಂಬುದು ಅರಿವಿಗೆ ಬಂದ ಕೂಡಲೇ ವಾಪಸ್ ಪಡೆದು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಾವಳಿ ರೂಪಿಸಲಾಯಿತು’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

‘ಕೊಂಡಂಗೇರಿಯ ಜನರ ಸಹಕಾರ ಮುಖ್ಯವಾಗಿತ್ತು. ಆ ಗ್ರಾಮವನ್ನು ಕಂಟೈನ್ಮೆಂಟ್‌ ವಲಯವೆಂದು ಘೋಷಣೆ ಮಾಡಲಾಗಿತ್ತು. ಭಯದಿಂದ ಕಂಟೈನ್ಮೆಂಟ್‌ ವಲಯದಲ್ಲಿ ಯಾರೂ ಅಂಗಡಿ ತೆರೆದು ವ್ಯಾಪಾರ ನಡೆಸಲಿಲ್ಲ. ತಕ್ಷಣವೇ ಜಿಲ್ಲಾಡಳಿತದಿಂದ ಆಹಾರ ಪದಾರ್ಥ ಪೂರೈಕೆ ಮಾಡಲಾಯಿತು. ಅಗತ್ಯ ವಸ್ತುಗಳಿಗೆ ಕೊಂಡಂಗೇರಿ ಗ್ರಾಮಸ್ಥರೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದರು’ ಎಂದು ಅನೀಸ್‌ ಕಣ್ಮಣಿ ಜಾಯ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಮ್ಲಜನಕ ಪೂರೈಕೆಗೆ ವ್ಯವಸ್ಥೆ:

‘ಕೊಡಗು ಅತ್ಯಂತ ಪುಟ್ಟ ಜಿಲ್ಲೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಲ್ಲ. ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಪರಿಸ್ಥಿತಿ ನಿಭಾಯಿಸಬೇಕಿದೆ. ಮೊದಲ ಪ್ರಕರಣ ಪತ್ತೆಯಾದಾಗ ಕೋವಿಡ್‌ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಇರಲಿಲ್ಲ. ಜಿಲ್ಲಾ ಆಸ್ಪತ್ರೆಯನ್ನೇ ಕೋವಿಡ್‌– 19 ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಏಕಕಾಲದಲ್ಲಿ ಪೈಪ್‌ ಮೂಲಕ 170 ಮಂದಿಗೆ ಆಮ್ಲಜನಕ ಪೂರೈಕೆಗೆ ವ್ಯವಸ್ಥೆಯಿದೆ. ವೆಂಟಿಲೇಟರ್‌ ದಾಸ್ತಾನು ಮಾಡಿಕೊಳ್ಳಲಾಗಿದೆ. ಕೋವಿಡೇತರ ರೋಗಿಗಳಿಗೆ ತೊಂದರೆ ಆಗಬಾರದೆಂದು ಖಾಸಗಿ ಆಸ್ಪತ್ರೆಯನ್ನೇ ವಶಕ್ಕೆ ಪಡೆದು ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 25 ದಿನಗಳಲ್ಲಿ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡಿದ್ದು ಹೆಗ್ಗಳಿಕೆ. ಈ ಮೊದಲು ಮಾದರಿಗಳನ್ನು ಮೈಸೂರಿಗೆ ರವಾನಿಸಬೇಕಿತ್ತು. ಇದೀಗ ಜಿಲ್ಲೆಯಲ್ಲೇ ಲ್ಯಾಬ್ ವ್ಯವಸ್ಥೆಯಿದೆ. ಲ್ಯಾಬ್‌ನಲ್ಲಿ ದಿನದ 24 ಗಂಟೆಯೂ ಮಾದರಿಗಳ ಪರೀಕ್ಷೆಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಮುಂಗಾರು ಆರಂಭವಾಗಿದೆ. ಮಳೆಗಾಲದಲ್ಲಿ ಏನಾದರೂ ಅನಾಹುತವಾದರೆ ಪರಿಹಾರ ಕೇಂದ್ರದಲ್ಲಿ ಹೆಚ್ಚು ಜನರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಪರಿಹಾರ ಕೇಂದ್ರಕ್ಕೆ ಹಾಸ್ಟೆಲ್‌, ವಸತಿಯುತ ಶಾಲೆ ಗುರುತಿಸಲಾಗಿದೆ. ಕೆಟ್ಟ ಪರಿಸ್ಥಿತಿ ಎದುರಾದರೆ ಹೋಟೆಲ್‌, ಲಾಡ್ಜ್‌ ಹಾಗೂ ಹೋಂ ಸ್ಟೇ ವಶಕ್ಕೆ ಪಡೆಯುತ್ತೇವೆ. ಕೋವಿಡ್–‌ 19 ಹಾಗೂ ಮಳೆಗಾಲದ ಸವಾಲು ಎದುರಿಗಿದೆ. ಅಧಿಕಾರಿಗಳ ಹಾಗೂ ಜನರ ಸಹಕಾರದಿಂದ ಅದನ್ನು ಸಮರ್ಥವಾಗಿ ಎದುರಿಸುವ ನಂಬಿಕೆ, ವಿಶ್ವಾಸವಿದೆ’ ಎಂದು ನುಡಿದರು.

‘ಕೋವಿಂಡ್‌ನಂಥ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಬೇರೆಲ್ಲಾ ಇಲಾಖೆಗಳೂ ಹೊರಗಿನಿಂದ ಬೆಂಬಲವಾಗಿ ನಿಂತರೂ ಕೊನೆಯಲ್ಲಿ ಆರೋಗ್ಯ ಇಲಾಖೆ ಪಾತ್ರ ಬಹಳ ಮುಖ್ಯ. ನಾನು ವೈದ್ಯಕೀಯ ಕ್ಷೇತ್ರದ ಹಿನ್ನೆಲೆಯಿಂದ ಬಂದಿರುವ ಕಾರಣಕ್ಕೆ ಆಡಳಿತಕ್ಕೆ ಸ್ವಲ್ಪ ಅನುಕೂಲವಾಯಿತು. ಜಿಲ್ಲೆಯ ಹಲವು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜನರ ಸಹಕಾರದಿಂದಲೇ 10 ಸಾವಿರ ಕಿಟ್‌ ವಿತರಣೆ’

‘ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಜನರು ನಿಯಮ ಪಾಲನೆ ಮಾಡಿದ್ದು ಕಂಡುಬಂತು. ಅವರ ಸಹಕಾರದಿಂದ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಲಾಕ್‌ಡೌನ್‌ ಸಹ ಯಶಸ್ವಿ ಆಗಿತ್ತು. ಜಿಲ್ಲೆಯ ಜನರ ನೆರವಿನಿಂದ ಅಂದಾಜು 10 ಸಾವಿರ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ ಮಾಡಿದ್ದೇವೆ. ‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ಗೆ ಸಾಕಷ್ಟು ನೆರವು ಹರಿದು ಬಂದಿತ್ತು. ಆಹಾರ ಕಿಟ್, ಮಾಸ್ಕ್‌, ಸ್ಯಾನಿಟೈಸರ್‌... ಹೀಗೆ ಅಗತ್ಯವಾದ ವಸ್ತುಗಳನ್ನು ದಾನಿಗಳೇ ವಿತರಣೆ ಮಾಡಿದ್ದರು. ಮುಂದೆಯೂ ಇದೇ ಸಹಕಾರ ನಿರೀಕ್ಷಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT