ಭಾನುವಾರ, ಸೆಪ್ಟೆಂಬರ್ 15, 2019
30 °C
ಉಮೇಶ್‌ ಕತ್ತಿ ಸೇರ್ಪಡೆಗೆ ಗ್ರೀನ್‌ ಸಿಗ್ನಲ್

3ನೇ ಡಿಸಿಎಂ: ಈಶ್ವರಪ್ಪ, ಸವದಿ ಪೈಪೋಟಿ

Published:
Updated:
Prajavani

ಬೆಂಗಳೂರು: ಹಿರಿಯ ಸಚಿವ ಗೋವಿಂದ ಕಾರಜೋಳ ಮತ್ತು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗಳು ಖಚಿತವಾಗಿದ್ದು, ಮೂರನೇ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಲಕ್ಷ್ಮಣ ಸವದಿ ಹಾಗೂ ಕೆ.ಎಸ್.ಈಶ್ವರಪ್ಪ ಮಧ್ಯೆ ಪೈಪೋಟಿ ನಡೆದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಮೂಲಗಳ ಪ್ರಕಾರ, ಮೂರನೇ ಉಪಮುಖ್ಯಮಂತ್ರಿ ಹುದ್ದೆಗೆ ವರಿಷ್ಠರ ಸೂಚನೆಯ ಪ್ರಕಾರ ಲಕ್ಷ್ಮಣ ಸವದಿ ಅವರನ್ನೇ ಪರಿಗಣಿಸುವ ಸಾಧ್ಯತೆ ಹೆಚ್ಚು. ಪ್ರತಿರೋಧ ವ್ಯಕ್ತವಾದರೆ ಮಾತ್ರ ಈಶ್ವರಪ್ಪ ಅವರಿಗೆ ಅದೃಷ್ಟ ಒಲಿಯಬಹುದು.

ಈ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ‘ಖಾತೆ ಹಂಚಿಕೆ ಪ್ರಕ್ರಿಯೆ ಸೋಮವಾರ ಪೂರ್ಣಗೊಳ್ಳಲಿದೆ. ವರಿಷ್ಠರ ಸೂಚನೆಯಂತೆ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳು ಇರುತ್ತಾರೆ. ಯಾರು ಎಂಬುದೂ ತಿಳಿಯಲಿದೆ’ ಎಂದು ಹೇಳಿದರು.

‘ಲಕ್ಷಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕೆಲವರಿಗೆ ಬೇಸರವಿದೆ. ವರಿಷ್ಠರ ಆದೇಶದಂತೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬೆಳಗಾವಿಯ ಮತ್ತೊಬ್ಬರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗುವುದು. ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ನೀಡಿರುವ ಸೂಚನೆ ಪಾಲಿಸುತ್ತೇನೆ. ಬಿಜೆಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದರು.

ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಸೂಚನೆಯನ್ನೂ ವರಿಷ್ಠರು ರವಾನಿಸಿದ್ದಾರೆ. ಇದರಿಂದ ಪಕ್ಷದಲ್ಲಿ ಆಂತರಿಕ ಬೇಗುದಿ ಹೆಚ್ಚಬಹುದು ಎಂಬ ಆತಂಕ ಯಡಿ
ಯೂರಪ್ಪ ಅವರನ್ನು ಕಾಡಿದೆ.

ಕತ್ತಿ, ಲಿಂಬಾವಳಿ ಸಂಪುಟಕ್ಕೆ: ಉಮೇಶ್ ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಲು ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಲಿಂಬಾವಳಿ ಸೇರ್ಪಡೆಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೊಸ ಸಚಿವರು ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೋದಿ, ಶಾ ಸಲಹೆ ಮೇರೆಗೆ ಡಿಸಿಎಂ ಹುದ್ದೆ ಸೃಷ್ಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸಲಹೆ ಮೇರೆಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಂಡಿದ್ದು ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು. ‘ನಮ್ಮದು ರಾಷ್ಟ್ರೀಯ ಪಕ್ಷ, ಹೈಕಮಾಂಡ್‌ ಸೂಚನೆ ಮೇರೆಗೆ ಉಪ ಮುಖ್ಯಮಂತ್ರಿ ಹುದ್ದೆಗೆ ಒಬ್ಬರು, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ನೇಮಿಸಲಾಗುತ್ತದೆ. ಕಾದು ನೋಡಿ’ ಎಂದರು.

ಅನೇಕ ಹಿರಿಯರು ಸಚಿವ ಸ್ಥಾನ ಬಯಸಿದ್ದರು. ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರಿಗೂ ಆದ್ಯತೆ ನೀಡಲಾಗುವುದು. ಪಕ್ಷದಲ್ಲಿ ಕಚ್ಚಾಟ ಇಲ್ಲ. ಅದೆಲ್ಲ ಜೆಡಿಎಸ್‌ ಮತ್ತು ಕಾಂಗ್ರೆಸ್‌ ವಲಯದಲ್ಲಿ ಕಂಡುಬರುತ್ತಿದೆ ಎಂದು ಹೇಳಿದರು.

 

Post Comments (+)