ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ ಇನ್‌ | ಸಾರಿಗೆ ನಿಗಮಗಳಿಗೆ ₹ 3 ಸಾವಿರ ಕೋಟಿ ನಷ್ಟ: ಸವದಿ

Last Updated 7 ಜೂನ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ ಜಾರಿಯಾದ ಬಳಿಕ ರಾಜ್ಯದ ಸಾರಿಗೆ ನಿಗಮಗಳಿಗೆ ಒಟ್ಟು ₹ 3 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಲಿದೆ ಎಂದು ಅಂದಾಜು ಮಾಡಲಾಗಿದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

’ಪ್ರಜಾವಾಣಿ‘ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್‌ ಬಳಿಕ ಇದುವರೆಗೆ ₹ 2,180 ಕೋಟಿ ನಷ್ಟ ಉಂಟಾಗಿದೆ. ಈಗ ಟಿಕೆಟ್‌ನಿಂದ ಬರುತ್ತಿರುವ ಹಣ ಡೀಸೆಲ್‌ ಖರ್ಚಿಗೂ ಸಾಲುತ್ತಿಲ್ಲ. ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಲು ಇನ್ನೂ ಒಂದೂವರೆ ತಿಂಗಳು ಬೇಕಾದೀತು’ ಎಂದು ವಸ್ತುಸ್ಥಿತಿ ಬಿಚ್ಚಿಟ್ಟರು.

‘2014ರ ಬಳಿಕ ಟಿಕೆಟ್‌ ದರ ಹೆಚ್ಚಿಸಿಲ್ಲ. ಆದರೆ, ಡೀಸೆಲ್‌ ದರ ಲೀಟರ್‌ಗೆ ₹ 52 ಇದ್ದುದು ಈಗ ₹ 72 ಆಗಿದೆ. ಸಂಬಳ ಹೆಚ್ಚಳದಿಂದ ಶೇ 40ರಷ್ಟು ಆರ್ಥಿಕ ಹೊರೆ ಹೆಚ್ಚಿದೆ. ಬಿಡಿಭಾಗಗಳ ವೆಚ್ಚ ಹಾಗೂ ನಿರ್ವಹಣಾ ವೆಚ್ಚವೂ ಹೆಚ್ಚಳವಾಗಿದೆ. ಲಾಕ್‌ಡೌನ್‌ಗೆ ಮುನ್ನವೂ ನಿಗಮಗಳು ನಿತ್ಯ ₹ 4 ಕೋಟಿಗಳಷ್ಟು ನಷ್ಟ ಅನುಭವಿಸುತ್ತಿದ್ದವು’ ಎಂದರು.

‘ನಷ್ಟ ಉಂಟಾಗುತ್ತಿದೆ ಎಂದು ಸಾರಿಗೆ ಸೇವೆ ನಿಲ್ಲಿಸಲಾಗದು. ನೌಕರರಿಗೆ ಏಪ್ರಿಲ್‌ ತಿಂಗಳ ಸಂಬಳ ಪಾವತಿಗಾಗಿ ಸರ್ಕಾರ ₹ 326 ಕೋಟಿ ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ ಅರ್ಧ ಸಂಬಳ ಮಾತ್ರ ನೀಡಿದ್ದು, ಪೂರ್ತಿ ಸಂಬಳ ನೀಡಲು ಇನ್ನು ₹ 320 ಕೋಟಿ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಹೆಚ್ಚುವರಿ ಸಾರಿಗೆ ಆಯುಕ್ತರಾದ ಶಿವರಾಜ ಬಿ.ಪಾಟೀಲ, ಎಲ್‌.ಹೇಮಂತ್‌ ಕುಮಾರ್‌, ಉಪಕಾರ್ಯದರ್ಶಿ ನಾಗರಾಜ ಪಾಟೀಲ, ಕೆಎಸ್‌ಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ , ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಎಸ್‌. ರಾಜೇಶ್‌, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯಶಂಕರ್‌ ಇದ್ದರು.

‘ವಾಹನ ನೋಂದಣಿ ಆದಾಯ ಕುಸಿತ’
‘ವಾಹನ ನೋಂದಣಿಯಿಂದ ಬರುವ ವರಮಾನ ಶೇ 70ರಷ್ಟು ಕುಸಿದಿದೆ. ಏಪ್ರಿಲ್‌ ತಿಂಗಳಲ್ಲಿ ಶೇ 20ರಷ್ಟು ಮಾತ್ರ ಗುರಿಸಾಧನೆಯಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ₹ 1,103 ಕೋಟಿ ವರಮಾನ ಬರಬೇಕಾದ ಕಡೆ ಕೇವಲ ₹ 22 ಕೋಟಿ ಬಂದಿದೆ. ರಸ್ತೆ ತೆರಿಗೆ, ಪರವಾನಗಿ ಶುಲ್ಕದಿಂದ ಬರುವ ವರಮಾನಕ್ಕೂ ಕತ್ತರಿ ಬಿದ್ದಿದೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಸಂಗ್ರಹವೂ ಕಡಿಮೆಯಾಗಿದೆ’ ಎಂದು ಸವದಿ ವಿವರಿಸಿದರು.

‘ಹೊಸ ಬಸ್‌ ಖರೀದಿ ಸದ್ಯಕ್ಕಿಲ್ಲ’
‘ಎಲ್ಲ ನಿಗಮಗಳೂ ನಷ್ಟದಲ್ಲಿವೆ. ಹಾಗಾಗಿ ಯಾವುದೇ ನಿಗಮಕ್ಕೂ ಸದ್ಯಕ್ಕೆ ಹೊಸ ಬಸ್‌ ಖರೀದಿಸುವುದಿಲ್ಲ. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಏಕೆ’ ಎಂದು ಸವದಿ ಪ್ರಶ್ನಿಸಿದರು.

ಮೆರಿಟ್‌ ಇದ್ದವರಿಗೆ ಖಂಡಿತ ಉದ್ಯೋಗ

* ಎಂವಿಐ ನೇಮಕಾತಿ ಸ್ಥಿತಿ–ಗತಿ ಏನಾಗಿದೆ ಎಂದು ತಿಳಿಯುತ್ತಿಲ್ಲ. 2016ರಿಂದ ಕಾಯುತ್ತಿದ್ದೇವೆ.
-ಜೂಲಿಯೆಟ್ಮೈಸೂರು, ಅನಿಲ್‌ತುಮಕೂರು, ಅನಿಲ್‌ಕುಮಾರ್,ಬಾಗಲಕೋಟೆ, ಹರಿಪ್ರಸಾದ್‌ದಾವಣಗೆರೆ
ಸಚಿವರು: ಮೋಟಾರ್‌ ವೆಹಿಕಲ್‌ ಇನ್‌ಸ್ಪೆಕ್ಟರ್‌ ನೇಮಕಾತಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದವು. ಕೆಲವು ಪ್ರಮಾಣಪತ್ರಗಳನ್ನು ಪರಿಗಣಿಸಿರಲಿಲ್ಲ. ಹೀಗಾಗಿ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಕೆಪಿಎಸ್‌ಸಿ ಕೂಡ ಸರ್ಕಾರದ ಅಭಿಪ್ರಾಯ ಕೇಳಿತ್ತು. ಎಲ್ಲ ಪ್ರಮಾಣಪತ್ರಗಳನ್ನು ಪರಿಗಣಿಸಿ, ಮೆರಿಟ್‌ ಆಧಾರದ ಮೇಲೆ ಮತ್ತೊಮ್ಮೆ ಪಟ್ಟಿ ಬಿಡುಗಡೆ ಮಾಡುವಂತೆ ಹೇಳಿದ್ದೇವೆ. ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಅರ್ಹರಿಗೆ, ಮೆರಿಟ್‌ ಇದ್ದವರಿಗೆ ಖಂಡಿತ ಉದ್ಯೋಗ ಸಿಗಲಿದೆ.

* ಚಾಲಕ, ನಿರ್ವಾಹಕ, ಮೆಕಾನಿಕ್‌ ಮತ್ತು ಸೆಕ್ಯುರಿಟಿ ಹುದ್ದೆಗಾಗಿ ಪರೀಕ್ಷೆ ನಡೆಸಿ, ಸಂದರ್ಶನವೂ ಮುಗಿದಿದೆ. ಇನ್ನೂ ಆಯ್ಕೆಪಟ್ಟಿ ಬಿಡುಗಡೆ ಮಾಡಿಲ್ಲ.
-ಪ್ರಶಾಂತ್‌,ವಿಜಯಪುರ, ವಿಜಯ್‌,ಜಮಖಂಡಿ
ಸಚಿವರು: ನಿತ್ಯ ಒಂದು ಕೋಟಿ ಜನ ಪ್ರಯಾಣಿಸಲು ಪ್ರಾರಂಭವಾದ ಮೇಲೆ ಈ ಹುದ್ದೆಗಳ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುವುದು.

* ಅಂತರ ನಿಗಮ ವರ್ಗಾವಣೆ ಕಾರ್ಯ ಇನ್ನೂ ಆರಂಭವಾಗಿಲ್ಲ. ವರ್ಗಾವಣೆ ಮಾಡಿದರೆ ಅನುಕೂಲವಾಗುತ್ತದೆ.
-ನಂದಿನಿ,ಕುಮಟಾ
ಸಚಿವರು: ನಿಗಮಗಳಲ್ಲಿ ವೇತನದ ವ್ಯತ್ಯಾಸವಿದೆ. ಹೆಚ್ಚು ವೇತನವಿದ್ದವರನ್ನು ನಿಯೋಜಿಸಿಕೊಳ್ಳಲು ನಿಗಮಗಳು ಹಿಂದೇಟು ಹಾಕುತ್ತಿವೆ. ಪರಸ್ಪರ ಒಪ್ಪಿಗೆಯ ವರ್ಗಾವಣೆಗೆ ಅನುಮತಿ ನೀಡುವ ಯೋಚನೆ ಇದೆ. ಒಂದೇ ವೇತನ ಮತ್ತು ಒಂದೇ ವಯಸ್ಸು ಇದ್ದವರನ್ನು ಮಾತ್ರ ಈ ನಿಯಮದಡಿ ವರ್ಗಾವಣೆಗೆ ಪರಿಗಣಿಸುವ ಚಿಂತನೆ ಇದೆ.

**

ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಸಾರಿಗೆ ನಿಗಮಗಳ ಸಿಬ್ಬಂದಿಯೂ ಧೈರ್ಯದಿಂದ ಕಾರ್ಯನಿರ್ವಹಿಸಬೇಕು. ಅವರ ಸುರಕ್ಷತೆಯೂ ನಮ್ಮ ಆದ್ಯತೆ. ಯಾರನ್ನೂ ಕೆಲಸದಿಂದ ವಜಾ ಮಾಡುವುದಿಲ್ಲ. ಆ ಚಿಂತೆ ಬೇಡ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT