ಭಾನುವಾರ, ನವೆಂಬರ್ 17, 2019
21 °C

ವಿಧಾನಸೌಧದಲ್ಲಿ ಸತ್ತ ಇಲಿ ದುರ್ವಾಸನೆ!

Published:
Updated:
Prajavani

ಬೆಂಗಳೂರು: ವಿಧಾನಸೌಧದ ಕೆಲವು ಕಡೆಗಳಲ್ಲಿ ಮುರಿದು ಹೋದ ಖುರ್ಚಿ, ಮೇಜುಗಳು, ಕಸ ಕಡ್ಡಿಗಳ ರಾಶಿ ಸಾಮಾನ್ಯ. ಸಚಿವರು, ಉನ್ನತ ಅಧಿಕಾರಿಗಳು ಅತ್ತ ಗಮನಹರಿಸುವುದೂ ಕಡಿಮೆ. ಆದರೆ, ನಿತ್ಯವೂ ಮಹತ್ವದ ಸಭೆಗಳು ನಡೆಯುವ ಸಮಿತಿ ಸಭಾಂಗಣ ಸೋಮವಾರ ಸತ್ತ ಇಲಿಯ ದುರ್ವಾಸನೆಯಿಂದ ಕೂಡಿತ್ತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರಣಿ ಸಭೆಯಲ್ಲಿ ಭಾಗವಹಿಸಲೆಂದು ಕೊಠಡಿಯೊಳಗೆ ಕಾಲಿಡುತ್ತಿದ್ದಂತೆ ವಾಸನೆ ಅವರ ಮೂಗಿಗೂ ರಾಚಿತು. ಇದರಿಂದ ಕೆಂಡಾಮಂಡಲ ರಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಕ್ಷಣವೇ ಸಭೆಗಳನ್ನು ತಮ್ಮ ಕಚೇರಿಗೆ ಸ್ಥಳಾಂತರಿಸಿದರು.

ಸಮಿತಿ ಸಭಾಂಗಣ 313ರಲ್ಲಿ ಸೋಮವಾರ ಬೆಳಿಗ್ಗೆ ಎರಡು– ಮೂರು ಸಭೆಗಳು ನಿಗದಿಯಾಗಿದ್ದವು. ಇಲಿ ಸತ್ತು ದುರ್ನಾತ ಬೀರುತ್ತಿರುವುದು ಸಿಬ್ಬಂದಿ ಗಮನಕ್ಕೆ ಬಂದಿತ್ತು. ಆದರೆ, ಅದನ್ನು ಪತ್ತೆ ಮಾಡಿ ತೆಗೆಯುವ ಗೋಜಿಗೆ ಹೋಗಲಿಲ್ಲ. ಸಮಯ ಕಮ್ಮಿ ಇದ್ದ ಕಾರಣ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಸಿಬ್ಬಂದಿಯ ಅಳಲು.

ಆದರೆ, ಈ ವಿಷಯವನ್ನು ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳಿಗೂ ತಿಳಿಸಲಿಲ್ಲ. ಕಡೆ ಗಳಿಗೆಯಲ್ಲಿ ತಿಳಿಸಿದರೆ, ಮುಖ್ಯಮಂತ್ರಿಯವರ ಕೆಂಗಣ್ಣಿಗೆ ಗುರಿಯಾಗಬೇಕು ಎಂದು ಸುಮ್ಮನೇ ಇದ್ದರು. ಮುಖ್ಯಮಂತ್ರಿಯವರಿಗಿಂತ ಮೊದಲೇ ಬಂದಿದ್ದ ಅಧಿಕಾರಿಗಳು ದುರ್ವಾಸನೆ ಸಹಿಸಿಕೊಂಡೇ ಕುಳಿತಿದ್ದರು.

ನಿಗದಿತ ಸಮಯಕ್ಕೆ ಸರಿಯಾಗಿ ಸಭಾಂಗಣಕ್ಕೆ ಬಂದ ಯಡಿಯೂರಪ್ಪ ಅವರ ಮೂಗಿಗೆ ಕೆಟ್ಟವಾಸನೆ ಬಡಿದಿದೆ. ತಕ್ಷಣವೇ ಅವರು ‘ಏನ್ರಿ ಇದು ಕೆಟ್ಟ ವಾಸನೆ. ಸಭಾಂಗಣ ಸರಿಯಾಗಿ ಇಟ್ಟುಕೊಳ್ಳಬೇಕು ಎಂಬ ಜ್ಞಾನ ಇಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಲು ಮುಂದಾದರು, ‘ಇದನ್ನು ಕ್ಲೀನ್‌ ಮಾಡಿ. ಇಲ್ಲದ ಕಾರಣಗಳನ್ನು ಹೇಳಬೇಡಿ. ಇಲ್ಲದಿದ್ದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಗದರಿದರು. ಬಳಿಕ ಸಭೆಯನ್ನು ತಮ್ಮ ಕಚೇರಿಗೆ ಸ್ಥಳಾಂತರಿಸಿದರು.

ಸಮ್ಮೇಳನ ಸಭಾಂಗಣಗಳಲ್ಲೂ ವಾಸನೆ: ವಿಕಾಸಸೌಧದಲ್ಲಿರುವ ಸಮ್ಮೇಳನ ಸಭಾಂಗಣಗಳಲ್ಲೂ ಗಬ್ಬು ವಾಸನೆ ತುಂಬಿಕೊಂಡಿರುತ್ತದೆ. ಅವುಗಳನ್ನು ಬಳಕೆ ಮಾಡುವುದೇ ಕಡಿಮೆ ಆಗಿರುವುದರಿಂದ ಕೆಟ್ಟ ವಾಸನೆ ಸಾಮಾನ್ಯ. ಅಲ್ಲಿ ಕಾರ್ಯಕ್ರಮ ನಡೆಯುವಾಗ ಸಿಬ್ಬಂದಿ ಏರ್‌ ಫ್ರೆಷನರ್‌ ಸಿಂಪಡಿಸುತ್ತಾರೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಏರ್‌ ಫ್ರೆಷನರ್‌ ಸಿಂಪಡಿಸದೇ ಇದ್ದರೆ, ಅಲ್ಲಿ ಕೂರುವುದೇ ಕಷ್ಟ ಎನ್ನುವಷ್ಟು ದುರ್ವಾಸನೆ ಬೀರುತ್ತದೆ. ಸೊಳ್ಳೆಗಳ ಕಾಟವೂ ಇರುತ್ತದೆ. ಹೆಚ್ಚು ಜನ ಸೇರಿದಾಗ ಊಟದ ವಿತರಣೆಗಾಗಿ ಬಳಸುವ ಹಾಲ್‌ಗಳು ಮತ್ತು ಕೈತೊಳೆಯುವ ಸಿಂಕ್‌ಗಳ ನಿರ್ವಹಣೆ ಕೆಟ್ಟದಾಗಿದೆ. ಮೇಲಿನ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಗಮನ ಹರಿಸದೇ ಇರುವುದರಿಂದ ಈ ಸ್ಥಿತಿ ಬಂದಿದೆ ಎಂದರು.

ಪ್ರತಿಕ್ರಿಯಿಸಿ (+)