ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಾನನಗರಿ’ಯ ಎಲ್ಲ ರಸ್ತೆಗಳೂ ಈಗ ಚಿನ್ನಸ್ವಾಮಿಕ್ರೀಡಾಂಗಣದತ್ತ ಮುಖ ಮಾಡಿವೆ. ಕ್ರಿಕೆಟ್‌ ಪ್ರೇಮಿಗಳ ಮಾತುಗಳೆಲ್ಲ ಐಪಿಎಲ್ ಕ್ರಿಕೆಟ್ ಮತ್ತು ಕಾವೇರಿ ನೀರಿನ ಸುತ್ತಲೇ ಹರಿದಾಡುತ್ತಿವೆ.

ಇಷ್ಟಕ್ಕೆಲ್ಲ ಕಾರಣ, ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ನಡುವಣ ಪಂದ್ಯ. ಕಾವೇರಿ ನದಿ ನೀರು ನಿರ್ವಹಣೆ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಚೆನ್ನೈನಲ್ಲಿ ಫ್ರತಿಭಟನೆ ನಡೆಯುತ್ತಿರುವುದರಿಂದ ಸಿಎಸ್‌ಕೆ ತಂಡವು ತವರಿನಲ್ಲಿ ಆಡಬೇಕಿದ್ದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿದೆ.

ಚೆನ್ನೈನಿಂದ ಬೆಂಗಳೂರು ಹತ್ತಿರವಿರುವ ಕಾರಣ ಮತ್ತು ಕಾವೇರಿ ನೀರು ಈ ಎರಡು ರಾಜ್ಯಗಳ ನಡುವಣ ವಿವಾದವಾಗಿರುವುದರಿಂದ ಈ ಪಂದ್ಯಕ್ಕೆ ಮಹತ್ವ ಹೆಚ್ಚಿದೆ.

2013ರ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಎರಡು ವರ್ಷಗಳ ಶಿಕ್ಷೆ ಅನುಭವಿಸಿದ ಸಿಎಸ್‌ಕೆ ಇದೇ ವರ್ಷ ಮತ್ತೆ ಕಣಕ್ಕಿಳಿದಿದೆ.

ಮಹೇಂದ್ರಸಿಂಗ್ ದೋನಿ ನಾಯಕತ್ವದ ತಂಡವು ಈಚೆಗೆ ಪುಣೆಯಲ್ಲಿ ಆಡಿದಾಗ, ಚೆನ್ನೈನಿಂದ ಅಭಿಮಾನಿಗಳು ವಿಶೇಷ ರೈಲಿನಲ್ಲಿ ಹೋಗಿ ಹುರಿದುಂಬಿಸಿದ್ದರು. ಇದೀಗ ಬೆಂಗಳೂರಿಗೂ ಸಾವಿರ ಸಾವಿರ ಸಂಖ್ಯೆಯಲ್ಲಿ ಚೆನ್ನೈನ ಅಭಿಮಾನಿಗಳು ಬರುವ ನಿರೀಕ್ಷೆ ಇದೆ.

‘ಸಿಎಸ್‌ಕೆ ಫ್ರಾಂಚೈಸಿಯು ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಅಭಿಮಾನಿಗಳಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದೆ’ ಎಂದು ಕೆಎಸ್‌ಸಿಎ ಮೂಲಗಳು ಹೇಳುತ್ತಿವೆ. ಅದೇನೆ ಇರಲಿ; ಭಾರತ ಕ್ರಿಕೆಟ್‌ ಲೋಕದ ಇಬ್ಬರು ಯಶಸ್ವಿ ನಾಯಕರ ನಡುವಣದ ಹಣಾಹಣಿಯಾಗಿಯೂ ಈ ಪಂದ್ಯ ಕುತೂಹಲ ಕೆರಳಿಸಿದೆ. ದೋನಿ 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು 2017ರಲ್ಲಿ ಏಕದಿನ ಮತ್ತು ಟ್ವೆಂಟಿ–20 ತಂಡಗಳ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆದರೆ ಆಟಗಾರನಾಗಿ ಮುಂದುವರಿದಿದ್ದರು. ಅವರ ನಂತರ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಉನ್ನತ ಸಾಧನೆ ಮಾಡುತ್ತಿದೆ.

ಆದರೆ ಐಪಿಎಲ್‌ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ದೋನಿ ಅವರ ಸಾಧನೆಯ ಎತ್ತರಕ್ಕೆ ಮುಟ್ಟಲು ಕೊಹ್ಲಿ ಸಾಗಬೇಕಾದ ಹಾದಿ ಬಹುದೂರ ಇದೆ. ದೋನಿ ನಾಯಕತ್ವದಲ್ಲಿ ಸಿಎಸ್‌ಕೆ ಎರಡು ಬಾರಿ (2010, 2011) ಮತ್ತು ನಾಲ್ಕು ಸಲ ರನ್ನರ್ಸ್‌ ಅಪ್ (2008, 2012, 2013 ಮತ್ತು 2015) ಆಗಿದೆ. ಆದರೆ, 2013ರಿಂದ ಕೊಹ್ಲಿ ನಾಯಕರಾಗಿರುವ ಆರ್‌ಸಿಬಿ ತಂಡವು ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2016ರಲ್ಲಿ ರನ್ನರ್ಸ್‌ ಅಪ್ ಆಗಿದ್ದು ಮಾತ್ರ ಅವರ ಹೆಗ್ಗಳಿಕೆ.

ಈ ಸಲದ ಟೂರ್ನಿಯಲ್ಲಿಯೂ ಸಿಎಸ್‌ಕೆಯು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಅಷ್ಟೇ ಸಂಖ್ಯೆಯ ಪಂದ್ಯಗಳನ್ನು ಆಡಿರುವ ಕೊಹ್ಲಿ ಬಳಗವು ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ.  ಏ.21ರಂದು ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಅಬ್ಬರಿಸಿದ್ದ ಎಬಿ ಡಿವಿಲಿಯರ್ಸ್‌ (ಅಜೇಯ 90 ) ಅವರ ಬಲದಿಂದ ಆರ್‌ಸಿಬಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಸೋಲಿಸಿತ್ತು. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಎಬಿಡಿ, ಮನದೀಪ್ ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ. ಆರಂಭಿಕ ಆಟಗಾರ ಬ್ರೆಂಡನ್ ಮೆಕ್ಲಮ್ ಮೊದಲ ಪಂದ್ಯದ ನಂತರ ಮತ್ತೆ ಮಿಂಚಿಲ್ಲ. ಕಳೆದ ಪಂದ್ಯದಲ್ಲ ಸರ್ಫರಾಜ್ ಖಾನ್ ಬದಲು ಸ್ಥಾನ ಪಡೆದಿದ್ದ ಮನನ್ ವೊಹ್ರಾ ಕೂಡ ನಿರಾಶೆ ಮೂಡಿಸಿದರು.

ಬೌಲಿಂಗ್‌ನಲ್ಲಿ ಉಮೇಶ್ ಯಾದವ್, ಸ್ಪಿನ್ನರ್ ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಸಿರಾಜ್ ಅಹ್ಮದ್, ಕ್ರಿಸ್ ವೋಕ್ಸ್‌  ಮತ್ತು ಕೋರಿ ಆ್ಯಂಡರ್ಸನ್ ನಿರೀಕ್ಷೆಯ ಮಟ್ಟಕ್ಕೆ ಆಡುತ್ತಿಲ್ಲ. ಟೂರ್ನಿಯ ಆರಂಭದಿಂದಲೂ ಬೆಂಚ್‌ ಕಾಯುತ್ತಿರುವ ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್‌ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಖಚಿತವಾಗಿಲ್ಲ.

ಸಿಎಸ್‌ಕೆ ತಂಡದ ಶೇನ್ ವಾಟ್ಸನ್‌ ಈಗಾಗಲೇ ಒಂದು ಶತಕ ಹೊಡೆದು ತಮ್ಮ ಆಟವನ್ನು ತೋರಿಸಿದ್ದಾರೆ. ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ದೋನಿ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಮಧ್ಯಮವೇಗಿ ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಡ್ವೇನ್ ಬ್ರಾವೊ ಅವರು  ಉತ್ತಮ ಲಯದಲ್ಲಿರುವುದರಿಂದ ಬೌಲಿಂಗ್ ವಿಭಾಗದಲ್ಲಿಯೂ ತಂಡಕ್ಕೆ ಚಿಂತೆ ಇಲ್ಲ. ಈ ಎಲ್ಲ ಕಾರಣಗಳಿಂದ ಟೂರ್ನಿಯ ಉತ್ತಮ ತಂಡಗಳಿಗೆ ಚಳ್ಳೆಹಣ್ಣು ತಿನ್ನಿಸಿ ಬಂದಿರುವ ಸಿಎಸ್‌ಕೆಯನ್ನು ಎದುರಿಸಲು ಶಿಸ್ತಿನ ಯೋಜನೆ ರೂಪಿಸಿಕೊಂಡು ಕಣಕ್ಕೆ ಇಳಿಯುವ ಸವಾಲು ಕೊಹ್ಲಿ ಮುಂದಿದೆ.

ಆರಂಭ: ರಾತ್ರಿ 8.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT