ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಪ್ರಿನ್ಸಿಪಾಲ್‌ ಅನಿಸಿಕೊಳ್ಳಲೂ ಸಮಯ ಬೇಕು: ಡಾ.ಗುರುರಾಜ ಕರಜಗಿ

‘ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಷನ್‌’ ವತಿಯಿಂದ ಶೈಕ್ಷಣಿಕ ನಾಯಕತ್ವ ಕಾರ್ಯಾಗಾರ
Last Updated 6 ಫೆಬ್ರುವರಿ 2019, 18:22 IST
ಅಕ್ಷರ ಗಾತ್ರ

ಬೆಂಗಳೂರು: ‘ಮಗುವೊಂದು ಅಮ್ಮ ಎಂದು ಕರೆಯಲು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಹಾಗೆಯೇ ಒಳ್ಳೆಯ ಪ್ರಿನ್ಸಿಪಾಲ್‌ ಅನಿಸಿಕೊಳ್ಳಲೂ ಸಮಯ ಬೇಕು’.

– ಇದು ಶಾಲೆಯೊಂದರ ಪ್ರಾಂಶುಪಾಲರ ಪ್ರಶ್ನೆಗೆ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ನೀಡಿದ ಪ್ರತಿಕ್ರಿಯೆ.

‘ನನ್ನನ್ನು ಯಾವ ಶಿಕ್ಷಕರೂ ವಿಶ್ವಾಸದಿಂದ ಕಾಣುತ್ತಿಲ್ಲ’ ಎಂಬ ಅಳಲಿಗೆ ಅವರು ಮೇಲಿನ ಪ್ರತಿಕ್ರಿಯೆ ನೀಡಿದರು.

‘ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಷನ್‌’, ಕೆಎಂಎಫ್‌ ಮತ್ತು ಎಂಎಸ್‌ಐಎಲ್‌ ಆಶ್ರಯದಲ್ಲಿ ಶಾಲಾ ಪ್ರಾಂಶುಪಾಲರಿಗಾಗಿ ಹಮ್ಮಿಕೊಂಡ ಶೈಕ್ಷಣಿಕ ನಾಯಕತ್ವ ಕಾರ್ಯಾಗಾರದಲ್ಲಿ ಈ ಸಂವಾದ ನಡೆಯಿತು.

‘ಶಿಕ್ಷಕರಿಗೇಕೆ ತರಬೇತಿ ಕೊಡಬೇಕು? ನಮ್ಮಲ್ಲಿ ತರಬೇತಿ ಪಡೆದು ಒಂದೆರಡು ವರ್ಷಗಳಲ್ಲಿ ಬೇರೆ ಶಾಲೆಗೆ ಹೋಗಿಬಿಡುತ್ತಾರೆ. ಅವರಿಗಾಗಿ ನಾವೇಕೆ ವೆಚ್ಚ ಮಾಡಬೇಕು’ ಎಂಬ ಇನ್ನೊಂದು ಪ್ರಶ್ನೆ ತೇಲಿ ಬಂತು.

‘ದಯವಿಟ್ಟು ತರಬೇತಿ ಕೊಡಿ. ಅವರು ಬೇರೆ ಕಡೆ ಹೋಗಿಯಾದರೂ ಸರಿಯಾಗಿ ಕೆಲಸ ಮಾಡಲಿ. ಕೊನೇಪಕ್ಷ ಇಡೀ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಸುಧಾರಿಸುತ್ತದೆ. ಅವರು ಹೋಗದಂತೆ ಪ್ರೀತಿ ವಿಶ್ವಾಸದಿಂದ ಕಾಣುವುದು ನಿಮ್ಮ ಜವಾಬ್ದಾರಿಯೂ ಹೌದು. ಅಂಥ ಒಳ್ಳೆಯ ವಾತಾವರಣ ಸಂಸ್ಥೆಯಲ್ಲಿ ಇರಬೇಕು. ಇಷ್ಟಾಗಿಯೂ ಹೋಗುತ್ತಾರೆ ಎಂದಾದರೆ ಅವರ ಇಷ್ಟ. ಅವರನ್ನು ಬಿಟ್ಟುಬಿಡಿ. ಹೋದಲ್ಲಿ ನಿಮ್ಮ ಸಂಸ್ಥೆಯನ್ನು ಖಂಡಿತ ನೆನಪಿಸುತ್ತಾರೆ’ ಎಂದರು ಕರಜಗಿ.

ವಿಪರೀತ ಒತ್ತಡ ಹೇರುವ ಪೋಷಕರನ್ನು ನಿಭಾಯಿಸುವುದು ಹೇಗೆ?

‘ಶಾಲೆ ಲಾಂಡ್ರಿ (ಬಟ್ಟೆ ತೊಳೆಯುವ ಜಾಗ) ಅಲ್ಲ. ಎಂಬುದನ್ನು ಮನವರಿಕೆ ಮಾಡಿ. ಯಾರೂ ದಿಢೀರನೆ ಐನ್‌ಸ್ಟೈನ್‌ ಆಗಲಿಲ್ಲ. ಸಿ.ವಿ.ರಾಮನ್‌ ಅವರಿಗೆ ಬಾಲ್ಯದಲ್ಲೇ ನೊಬೆಲ್‌ ಪ್ರಶಸ್ತಿ ಬರಲಿಲ್ಲ. ಬೆಳವಣಿಗೆ ನಿಧಾನವಾಗಿ ಆಗಬೇಕಾದ ಕೆಲಸ. ಇದನ್ನು ಮನವರಿಕೆ ಮಾಡಿ. ಒಂದೇ ಮಗು ಇರುವ ಪೋಷಕರು ಇಂಥ ಒತ್ತಡ ಹೆಚ್ಚು ಹೇರುತ್ತಾರೆ. ಅದು ಇಂದಿನ ಕಾಲಘಟ್ಟದ ಸಮಸ್ಯೆ’ ಎಂದರು.

‘ಜಗತ್ತೇ ಒಂದು ವ್ಯಾಯಾಮಶಾಲೆ. ನೀವು ವ್ಯಾಯಾಮಶಾಲೆ ಸೇರುವುದು ಅದನ್ನು ದುರಸ್ತಿಗೊಳಿಸಲು ಅಲ್ಲ. ನಿಮ್ಮ ದೇಹ ಸ್ವಾಸ್ಥ್ಯ ಕಾಪಾಡಿಕೊಳ್ಳಲು. ಹಾಗಾಗಿ ಸಮಸ್ಯೆಗಳೇ ನಿಮ್ಮ‘ವರ್ಕೌಟ್‌’. ಬಂದದ್ದೆಲ್ಲವನ್ನೂ ಸರಳವಾಗಿ ಸ್ವೀಕರಿಸಿ. ತಪ್ಪು ಎಂದೆನಿಸಿದಾಗ ನಸುನಕ್ಕು ಹೊಸ ನಿರ್ಧಾರಗಳತ್ತ ಮುಂದುವರಿಯಿರಿ’ ಎಂದು ಸಲಹೆ ಮಾಡಿದರು.

‘ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗುತ್ತದೆ ಏನು ಮಾಡಲಿ' ಎನ್ನುವ ಪ್ರಶ್ನೆಯೂ ಬಂತು.

‘ನಿಮ್ಮ ಸಹೋದ್ಯೋಗಿಗಳಲ್ಲೇ ಸ್ವಲ್ಪ ಹಿರಿಯರನ್ನು, ಅನುಭವಿಗಳನ್ನು ಸೇರಿಸಿಕೊಂಡು ಕನಿಷ್ಠ ಸದಸ್ಯರ ಆಂತರಿಕ ಸಮಿತಿ ಮಾಡಿ. ಹೊಸ ವಿಷಯಗಳನ್ನು ಚರ್ಚಿಸಿ. ಬಹುಪಾಲು ಅಭಿಪ್ರಾಯ ಹೇಳಲು ಅವಕಾಶ ಕೊಡಿ. ಸರಿಯಾದದ್ದನ್ನು ಆಯ್ಕೆ ಮಾಡಿ ಕಾರ್ಯಾಚರಿಸಿ’ ಎಂದರು.

ಬದಲಾಗಿದೆ ಶಿಕ್ಷಣ ವ್ಯವಸ್ಥೆ
‘ಶಿಕ್ಷಣ ಸರಕಾಗಿದೆ. ಕಾರ್ಪೊರೇಟ್‌ ವ್ಯವಸ್ಥೆ ಬಂದಿದೆ. ಮಕ್ಕಳು ಮೂಲಬೇರುಗಳನ್ನು ಮರೆತೇ ಶಿಕ್ಷಣ ಪಡೆಯುತ್ತಿದ್ದಾರೆ. ಪೋಷಕರಿಗೂ ಇದು ಅರ್ಥವಾಗುತ್ತಿಲ್ಲ. ಪ್ರಾಂಶುಪಾಲರಾದವರು ಹಲವು ಬಗೆಯ ಒತ್ತಡಗಳಲ್ಲಿ ಬಂಧಿಯಾಗಿಬಿಡುತ್ತಾರೆ. ಅವರದು ದ್ರೌಪದಿಯಂಥ ಪಾತ್ರ. ದ್ರೌಪದಿಗೆ ಐವರು ಗಂಡಂದಿರು. ಪ್ರಾಂಶುಪಾಲರಿಗೆ ಇನ್ನೂ ಹೆಚ್ಚು ಇದ್ದಾರೆ’ ಎಂದರು ಕರಜಗಿ.

‘ಶಿಕ್ಷಕರ ನಿಷ್ಠೆ, ಆದ್ಯತೆಗಳು ಬದಲಾಗಿವೆ. ಮಕ್ಕಳಿಗೂ ಬೇರೆ ಬೇರೆ ಮಾಧ್ಯಮಗಳ ಮೂಲಕ ಮಾಹಿತಿ ಹರಿದು ಬರುತ್ತಿದೆ. ಪಾಠ ಯೋಜನೆ ಮಾಡುವವರು ಒಬ್ಬರು, ಪಾಠ ಮಾಡುವವರೊಬ್ಬರು ಆಗಿಬಿಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೆ ಸ್ಥಳೀಯ ವಿಷಯಗಳ ಪರಿಚಯ ಆಗುತ್ತಿಲ್ಲ’ ಎಂದು ವಿಷಾದಿಸಿದರು.

‘ಶಿಕ್ಷಕರು ಸ್ಮಾರ್ಟ್‌ ಆಗಬೇಕು’
‘ತರಗತಿ ಕೊಠಡಿಯ ಫಲಕಗಳು ಸ್ಮಾರ್ಟ್‌ ಆಗಿವೆ. ಆದರೆ, ಶಿಕ್ಷಕರು ಸ್ಮಾರ್ಟ್‌ ಆಗಬೇಕು. ಬಹು ಮಾಧ್ಯಮಗಳ ಮೂಲಕ ಮಕ್ಕಳ ಜ್ಞಾನಮಟ್ಟ ಏರುತ್ತಿದೆ. ಅದೇ ವೇಳೆಗೆ ಶಿಕ್ಷಕರ ಜ್ಞಾನಮಟ್ಟ ಇಳಿಮುಖವಾಗುತ್ತಿದೆ. ಪ್ರಾಂಶುಪಾಲ ಸ್ಥಾನದ ಘನತೆಯೂ ಕುಸಿಯುತ್ತಿದೆ. ಮೊದಲು ಶಾಲಾ ಕೇಂದ್ರಿತ ವ್ಯವಸ್ಥೆ ಇತ್ತು. ಈಗ ಶಿಕ್ಷಣ ಕ್ಷೇತ್ರವು ಪೋಷಕ ಕೇಂದ್ರಿತ ಮಾರುಕಟ್ಟೆ ಆಗಿದೆ. ಪೋಷಕರ ಮುಂದೆ ಅವರವರ ಸಾಮರ್ಥ್ಯಕ್ಕೆ ತಕ್ಕಂತಹ ಆಯ್ಕೆಗಳು ಇವೆ. ಹೀಗಾಗಿ ಪ್ರಾಂಶುಪಾಲರು ಮಾರುಕಟ್ಟೆ ಸ್ಪರ್ಧೆಯನ್ನೂ ಎದುರಿಸಲು ಸಿದ್ಧರಾಗಿರಬೇಕು’ ಎಂದು ಕರಜಗಿ ಕಿವಿಮಾತು ಹೇಳಿದರು.

**

ಶೈಕ್ಷಣಿಕ ನಾಯಕತ್ವ ಬಯಸುವವನಿಗೆ ಮೊದಲು ವಿಷಯದ ಮೇಲೆ ಗಟ್ಟಿಯಾದ ಹಿಡಿತ ಇರಬೇಕು. ಆಗ ಮಾತ್ರ ಇತರರಿಗೆ ಹೇಳಬಲ್ಲ.
- ಡಾ.ಗುರುರಾಜ ಕರಜಗಿ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT