ಶ್ರೀಗಳ ಗುಣಗಾನದಲ್ಲಿ ತುಂಬಿ ಹೋದ ಸಾಮಾಜಿಕ ಮಾಧ್ಯಮ

7
‘ಭಾರತ ರತ್ನ’ ನೀಡದಿರುವುದಕ್ಕೆ ನೆಟ್ಟಿಗರ ಅಸಮಾಧಾನ

ಶ್ರೀಗಳ ಗುಣಗಾನದಲ್ಲಿ ತುಂಬಿ ಹೋದ ಸಾಮಾಜಿಕ ಮಾಧ್ಯಮ

Published:
Updated:

ಬೆಳಗಾವಿ: ಸೋಮವಾರ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ‘ನೆಟ್ಟಿಗರು’ ಸಾಮಾಜಿಕ ಮಾಧ್ಯಮಗಳಲ್ಲಿ ನುಡಿನಮನ ಸಲ್ಲಿಸಿದ್ದಾರೆ. ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ‘ನಡೆದಾಡುವ ದೇವರು’ ಕುರಿತ ಗುಣಗಾನ ಮತ್ತು ಚಿತ್ರಗಳಿಂದ ತುಂಬಿ ಹೋಗಿವೆ.

ತಾವು ಕಂಡಂತೆ ಅಥವಾ ಕೇಳಿದಂತೆ ಶ್ರೀಗಳನ್ನು ಬಣ್ಣಿಸಿರುವ ಅವರು, ವಿಡಿಯೊ, ಸ್ವಾಮೀಜಿಯವರ ದರ್ಶನ–ಆಶೀರ್ವಾದ ಪಡೆದ ಫೊಟೊಗಳು, ಸಾಕ್ಷ್ಯಚಿತ್ರ, ರೇಖಾ ಚಿತ್ರಗಳು, ಅವರ ಅರ್ಥಪೂರ್ಣ ಹೇಳಿಕೆಗಳು, ಸಿದ್ದಗಂಗಾ ಮಠದ ಚಟುವಟಿಕೆಗಳು, ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ತುಣುಕುಗಳು ಹಾಗೂ ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾದ ಶ್ರೀಗಳ ಕುರಿತ ಕಾರ್ಯಕ್ರಮಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ನಮಿಸಿದ್ದಾರೆ.

ಬಹುತೇಕರು ತಮ್ಮ ಪ್ರೊಫೆಲ್‌ ಫೋಟೊಗಳು ಹಾಗೂ ವಾಟ್ಸ್‌ಆ್ಯಪ್‌ ಡಿಪಿಗಳಲ್ಲಿ ಪ್ರಸನ್ನವದನ ಶಿವಕುಮಾರ ಸ್ವಾಮೀಜಿಯ ಚಿತ್ರಗಳನ್ನು ಹಾಕಿಕೊಂಡು ಗೌರವ ಸಲ್ಲಿಸಿದ್ದಾರೆ. ಅವರು ನಾಡು, ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಕೊಂಡಾಡಿದ್ದಾರೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮೊದಲಾದವರು ಅವರು ಶ್ರೀಗಳ ಬಗ್ಗೆ ಕವಿತೆ, ಲೇಖನಗಳನ್ನು ತಮ್ಮ ‘ವಾಲ್‌’ಗಳಲ್ಲಿ ಪ್ರಕಟಿಸಿದ್ದಾರೆ.

ಬಹಳಷ್ಟು ಶೇರ್‌:
ಒಂದು ಮಠದ ಪೀಠಾಧ್ಯಕ್ಷರ ಕುರಿತಾದ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶೇರ್‌ ಆಗುತ್ತಿರುವುದು ಇದೇ ಮೊದಲು ಎನ್ನಬಹುದು. ಅಷ್ಟರ ಮಟ್ಟಿಗೆ ನೆನಪಿನ ಮೆರವಣಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೊರಟಿದೆ. ಸಂತಾಪ, ಶ್ರದ್ಧಾಂಜಲಿ ಹಾಗೂ ನುಡಿನಮನಗಳಿಂದಲೇ ಈ ಪುಟಗಳು ತುಂಬಿ ಹೋಗಿವೆ. ದೇವರ ನಡಿಗೆ ದೇವರ ಕಡೆಗೆ ಹೊರಟಿದೆ. ಅಲ್ಲೂ ಅವರು ದಾಸೋಹ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ ಎಂದು ಭಕ್ತರು ಸ್ಮರಿಸಿದ್ದಾರೆ. ಚಿತ್ರನಟ ದಿ. ವಿಷ್ಣುವರ್ಧನ ಅವರು ಸ್ವಾಮೀಜಿ ಪಾದಪೂಜೆ ನೆರವೇರಿಸಿದ್ದ ಚಿತ್ರ ಬಹಳಷ್ಟು ಶೇರ್ ಆಗಿದೆ.

ಸ್ವಾಮೀಜಿ ಲಿಂಗಪೂಜೆಯಲ್ಲಿ ತೊಡಗಿದ್ದ ಕ್ಷಣಗಳ ವಿಡಿಯೊ ಸಾವಿರಾರು ಮಂದಿ ವೀಕ್ಷಿಸಿದ್ದಾರೆ ಹಾಗೂ ಹಂಚಿಕೊಂಡಿದ್ದಾರೆ. ಕೆಲವರು ಶ್ರೀಗಳನ್ನು ‘ಮನುಕುಲದ ಆತ್ಮಸಾಕ್ಷಿ’ ಎಂದು ಬಣ್ಣಿಸಿದ್ದಾರೆ. ಜ್ಞಾನ ದಾಸೋಹದ ಮೂಲಕ ನಾಡನ್ನು ಪವಿತ್ರಗೊಳಿಸಿದ ರತ್ನ ಎಂದು ಕೆಲವರು ಶ್ಲಾಘಿಸಿದ್ದಾರೆ. ಸಿದ್ದಗಂಗಾ ಶ್ರೀ ರಚಿಸಿದ ಕವಿತೆಯೂ ಹಬ್ಬಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲೂ ಹರಿದಾಡುತ್ತಿದೆ.

ಎಲ್ಲ ಬಡವರೂ ನೆನೆಯುತ್ತಾರೆ:
‘ಶ್ರೀಗಳು ಮಾಡಿದ ಅನ್ನ ಹಾಗೂ ವಿದ್ಯೆಯ ಹಂಚಿಕೆಯನ್ನು ಎಲ್ಲ ಜಾತಿಯ ಬಡವರೂ ನೆನಯುತ್ತಾರೆ. ಅವರಿಗೆ ನಮನ’ ಎಂದು ವೆಂಕಟರಾಮಯ್ಯ ಲಕ್ಷ್ಮಿನಾರಾಯಣ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ಮುಂಜಾನೆಯ ಹೊಂಗಿರಣ ಚೆಲ್ಲುತ್ತಾ ಬರುವ ಆ ರವಿಗೆ ಕಾಣಿಸಲಿಲ್ಲ ಇಂದು ಇಹಲೋಕದ ಜಂಗಮನ ಬೆಳಕು’ ಎಂದು ಉದ್ಯಮಿ ಮಂಗಲ ಶಿವಕುಮಾರ್‌ ಶರಣು ಸಮರ್ಪಿಸಿದ್ದಾರೆ.

‘ಅನ್ನ, ಅಕ್ಷರ, ಆಶ್ರಯ ನೀಡಿದ ತ್ರಿವಿಧಿ ದಾಸೋಹಿಗೆ ಶತಕೋಟಿ ನಮನಗಳು’ ಎಂದು ನಮಿಸಿರುವವರು ಮಲ್ಲು ಆಜಾದ್.

‘ಶಿವಕುಮಾರ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸೇವೆ ಮಾಡಿದ್ದಾರೆ. ಅವಕಾಶ ವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನದಾಸೋಹದ ಜೊತೆಗೆ ಶಿಕ್ಷಣ ನೀಡಿದರು. ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ಧಪುರುಷರು’ ಎಂದು ಫೇಸ್‌ಬುಕ್‌ನಲ್ಲಿ ಸ್ಮರಿಸಿದ್ದಾರೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್. ಅದನ್ನು ಬಹಳ ಮಂದಿ ಶೇರ್‌ ಮಾಡಿದ್ದಾರೆ.

ಸಮರ್ಪಣೆ:
‘ಕಂಡಿಲ್ಲ ನಾನು ಆ ದೇವರನ್ನು
ಇರಬಹುದೊ ಏನೋ ನಿಮ್ಮಂತೆ ಅವನು.
ಶರಣ ಎಂದರೆ ಅದಕ್ಕೂ ಎತ್ತರ.
ಶಿವನೇ ಎಂದರೆ ಅದಕ್ಕೂ ಹತ್ತಿರ’

ಎಂದು ಸಂಜು ವೆಡ್ಸ್‌ ಗೀತಾ ಚಲನಚಿತ್ರದ ಹಾಡನ್ನು ತಮ್ಮದೇ ಶೈಲಿಯಲ್ಲಿ ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಧನಂಜಯ ಗೌಡ ಹಾಸನ.

‘ನಾಳೆ ಹೂ ಬಿಟ್ಟು ಫಲ ಕೊಡುವ ಇಂದಿನ ವೃಕ್ಷಗಳಿಗೆ ನಿನ್ನೆಯೇ ನೀರನ್ನು ಎರೆದವರನ್ನು ನಾವು ಸದಾ ಸ್ಮರಿಸಲೇಬೇಕು... ಶರಣರ ಬಾಳನ್ನು ಮರಣದಲ್ಲಿ ಕಾಣು...’ ಎಂದು ಮಂಜುನಾಥ್ ಜಿ.ಎನ್. ಮೈಸೂರು ಬರೆದಿದ್ದಾರೆ.

ಶ್ರೀಗಳು ಬದುಕಿದ್ದಾಗಲೇ ‘ಭಾರತ ರತ್ನ’ ಕೊಡದಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ರತ್ನವನ್ನು ನೀವೇ ಇಟ್ಟುಕೊಳ್ಳಿ. ಭಾರತಕ್ಕೆ ಇವರು ರತ್ನವೇ ಹೊರತಾಗಿ, ಇವರಿಗೆ ಭಾರತ ರತ್ನ ಬೇಕಿಲ್ಲ’ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘ಶಿವಕುಮಾರ ಶ್ರೀಗಳಿಗೆ ಸರ್ಕಾರವು ಭಾರತ ರತ್ನ ನೀಡಲಿಲ್ಲ. ಆದರೆ, ಅವರು ಜನಮಾನಸದಲ್ಲಿ ಭಾರತ ರತ್ನ, ಭೂಲೋಕ ರತ್ನ, ವಿಶ್ವರತ್ನ ಹಾಗೂ ಸಿರಿಗನ್ನಡ ರತ್ನ’ ಎಂದು ಬೆಳಗಾವಿಯ ಸಿರಿಗನ್ನಡ ಪ್ರತಿಷ್ಠಾನದ ಶಶಿಧರ ಘಿವಾರಿ ಚುಚ್ಚಿದ್ದಾರೆ.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !