ಹಬ್ಬದಾಚರಣೆ ಹೀಗಿರಲಿ

7

ಹಬ್ಬದಾಚರಣೆ ಹೀಗಿರಲಿ

Published:
Updated:
Deccan Herald

‘‘ದೀ ಪಯತಿ ಸ್ವಂ ಪರಚ ಇತಿ ದೀಪ:’’ 
- ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿದೀಪಕ್ಕಿದೆ.

ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ. ಆಶ್ವಯುಜದ ಕೊನೆ ಮತ್ತು ಕಾರ್ತೀಕ ಮಾಸದ ಆರಂಭದ ದಿನಗಳಲ್ಲಿ ಅದ್ಧೂರಿಯ ಆಚರಣೆ ಮಾಡಲಾಗುತ್ತದೆ.

ದೀಪಾವಳಿ ಹಬ್ಬವನ್ನು ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದದಿನವೆಂದೂ... ಶ್ರೀಕೃಷ್ಣನು ನರಕಾಸುರನನ್ನು ಕೊಂದದಿನವೆಂದೂ ಆಚರಿಸುತ್ತಾರೆ.

ತ್ರಯೋದಶಿ ಹಬ್ಬದ ಮೊದಲ ದಿನ. ನೀರು ತುಂಬುವ ಹಬ್ಬವೆಂದು ಆಚರಿಸಲಾಗುತ್ತದೆ.

ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ಶಾಸ್ತ್ರವು ಹೇಳಿರುತ್ತದೆ. ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂ ದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ.

ಅಂದು ಬೆಳಿಗ್ಗೆ ಸುಮಂಗಲೆಯರಿಂದ ತೈಲವನ್ನು ಹಚ್ಚಿಸಿಕೊಂಡು ಆರತಿ ಮಾಡಿಸಿಕೊಳ್ಳುವುದು, ನಂತರ ಅಭ್ಯಂಜನ ಮಾಡುವುದು ಈ ಹಬ್ಬದ ಪ್ರಮುಖ ಅಂಗ. 

ಸ್ನಾನದ ನಂತರ ಹೊಸ ಬಟ್ಟೆ ಧರಿಸಿ, ಮನೆಯ ಹಿರಿಯರಿಗೆ ನಮಸ್ಕರಿಸಿ, ಸಿಹಿ ತಿಂದು ಪಟಾಕಿ ಹಚ್ಚುತ್ತಾರೆ ಮಕ್ಕಳು. ಅಂದು ನರಕಾಸುರನ ಸಂಹಾರ ಮಾಡಿಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಇದರ ಪ್ರತೀಕವಾಗಿಯೇ ದುಷ್ಟರನ್ನು ಸಂಹರಿಸುವ ಎಲ್ಲರಿಗೂ ಆರತಿ ಎತ್ತುವ ಸಂಪ್ರದಾಯ ಬೆಳೆದುಬಂದಿದೆ.

ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯಂದು ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮಿ ಪೂಜೆಯನ್ನು ಮಾಡಿ, ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ತುಂಬಾ ಪ್ರಶಸ್ತವಾದ ದಿನ ಲಕ್ಷ್ಮಿ ಪೂಜೆಗೆ. ಇದು ಶ್ರೀಕೃಷ್ಣನು ದೇಹತ್ಯಾಗ ಮಾಡಿದದಿನವೆಂದೂ, ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

ನಾಲ್ಕನೆಯ ದಿನವನ್ನು ಬಲಿ ಪಾಡ್ಯಮಿ ಎಂದು ಕರೆಯುತ್ತಾರೆ. ವಿಷ್ಣು ಪುರಾಣದ ಪ್ರಕಾರ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಮನೆಯಲ್ಲಿನ ಎತ್ತುಗಳಿಗೂ ಪೂಜೆ. ಸ್ನಾನ ಮಾಡಿಸಿ, ಅರಿಸಿನ– ಕುಂಕುಮ ಹಚ್ಚಿ, ಕೊಂಬಿಗೆ ಸೇವಂತಿಗೆ, ಚಂಡು ಹೂಗಳನ್ನು ಸುತ್ತಿ ಪೂಜಿಸುತ್ತಾರೆ. ಎತ್ತುಗಳ ಮೆರವಣಿಗೆ ಕೂಡ ಮಾಡುತ್ತಾರೆ. ಗದ್ದೆಗಳಲ್ಲಿ, ಹೊಲಗಳಲ್ಲಿ ಧಾನ್ಯಲಕ್ಷ್ಮಿಯ ಪೂಜೆಯನ್ನೂ ಮಾಡುತ್ತಾರೆ.

ಬೆಂಗಳೂರಿನಲ್ಲಿ ಹಸು, ಎತ್ತುಗಳು ಕಂಡರೆ ಒಂದಷ್ಟು ಹಣ್ಣು, ಬೆಲ್ಲ, ಧಾನ್ಯಗಳನ್ನು ದಾನ ಮಾಡಿ. ಹಾಲು ಮಾರುವವರಿಗೆ ನೀಡಿದರೂ ಆಗುತ್ತದೆ. ಈ ದಿನ ಮಹಾಬಲಿ ಭೂಮಿಗೆ ಬರುತ್ತಾನೆಂಬುದೂ ಒಂದು ನಂಬಿಕೆ. ಹೊಲ, ಗದ್ದೆಗಳಲ್ಲಿ ಬಲೀಂದ್ರನ ಸ್ಮರಣಾರ್ಥ ದೀಪಗಳನ್ನು ಕೂಡ ಹಚ್ಚಿಡುತ್ತಾರೆ. ಅಂದು ಸಂಜೆ ಮನೆಯಲ್ಲಿದ್ದು ಬಂದು ಹೋಗುವ ಬಲೀಂದ್ರನನ್ನು ಸ್ವಾಗತಿಸಿ. ಈ ನೆಪದಲ್ಲಾದರೂ ಮನೆಯ ಸದಸ್ಯರೆಲ್ಲ ಮನೆಯಂಗಳದಲ್ಲಿ, ಪಡಸಾಲೆಯಲ್ಲಿ, ಇಲ್ಲವೇ ‘ಹಾಲ್‌’ನಲ್ಲಾದರೂ ಸರಿ ಒಟ್ಟಿಗೆ ಸೇರಿ, ಮೊಬೈಲ್‌ ಫೋನ್‌ ಬದಿಗಿರಿಸಿ ಪರಸ್ಪರ ಮಾತಾಡಿ.

ಐದನೆಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯಾ ಎಂದು ಆಚರಿಸುತ್ತಾರೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ. ಸಹೋದರಿಯರು ದೂರದ ಊರಿನಲ್ಲಿದ್ದರೆ ಸಹೋದರಿ ಸಮಾನರಾದವರ ಬಳಿ ಆರತಿ ಮಾಡಿಸಿಕೊಳ್ಳಿ. ಕಚೇರಿಯಲ್ಲಿಯ ಸಹೋದ್ಯೋಗಿಗಳೊಂದಿಗೆ ಸಹೋದರ ಭಾವದಿಂದಿರಿ. ಪರಸ್ಪರ ಸಿಹಿಹಂಚಿಕೊಳ್ಳಿ.

ಈ ಎಲ್ಲ ಕ್ರಿಯೆಗಳೂ ನಮ್ಮಲ್ಲಿಯ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುತ್ತವೆ. ಚೈತನ್ಯ ತುಂಬುತ್ತವೆ. ಖುಷಿಯಿಂದ ಇರುವಂತೆ ಮಾಡುತ್ತವೆ. ಸಂಭ್ರಮ ಮತ್ತು ಸಡಗರದ ವಾತಾವರಣ ಮನೆಯಲ್ಲಿಯೂ, ಕಚೇರಿಯಲ್ಲಿಯೂ ಸಕಾರಾತ್ಮಕ ತರಂಗಗಳನ್ನು ಆಹ್ವಾನಿಸಿ, ಆಹ್ಲಾದಕರ ವಾತಾವರಣ ಉಂಟು ಮಾಡುತ್ತವೆ.

**

ಐದು ದಿನಗಳ ದೀವಳಿಗೆ

* ಮೊದಲ ದಿನ ನೀರು ತುಂಬುವ ಹಬ್ಬ: ಮನೆಯ ಟ್ಯಾಂಕುಗಳನ್ನೆಲ್ಲ ಸ್ವಚ್ಛಗೊಳಿಸಿ

* ನರಕ ಚತುರ್ದಶಿ: ದೀಪಗಳನ್ನು ಬೆಳಗಿಸಿ, ಆರತಿ ಬೆಳಗುವುದು

* ಅಮವಾಸೆ: ಲಕ್ಷ್ಮಿ ಪೂಜೆ ಮಾಡುತ್ತ, ಒಳಿತನ್ನು ಅವಾಹಿಸಿ

* ಬಲಿಪಾಡ್ಯಮಿ: ಬಲೀಂದ್ರನ ಪೂಜೆ, ಗೋಪೂಜೆ

* ಯಮ ದ್ವಿತೀಯ: ಸಹೋದರಿಯರ ಭೇಟಿ, ಸಿಹಿ ವಿನಿಮಯ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !