ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದ ಮೆಲುಕು!

Last Updated 5 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಕನ್ನಡದಲ್ಲಿ ಬೆಳಗಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಬ್ಯಾನರ್‌ಗಳಲ್ಲಿ ಮಿಂಚುತ್ತಿರುವ ನಭಾ ನಟೇಶ್‌, ‘ಟ್ರಂಕ್‌’ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ ರಿಶಿಕಾ ಶರ್ಮ, ‘ನಾತಿಚರಾಮಿ’ ಸಿನಿಮಾದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿನಿತ್ಯ ಚರ್ಚೆಗೆ ತೆರೆದುಕೊಳ್ಳುತ್ತಿರುವ ನಿರ್ದೇಶಕ ಮಂಸೋರೆ, ಕಿರುತೆರೆಯಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಮನೆ ಮಾತಾಗಿರುವ ಚಿತ್ಕಳಾ ಬಿರಾದಾರ್‌ ಮತ್ತು ಅಂಜನ್‌ ಎ. ಭಾರದ್ವಾಜ್‌ ಹಬ್ಬಕ್ಕಾಗಿ ಆಗಲೇ ಸಜ್ಜಾಗಿದ್ದಾರೆ.

‘ಸಾಂಪ್ರದಾಯಿಕ ಆಚರಣೆಯೇ ನಂಗಿಷ್ಟ’

ರಿಶಿಕಾ ಶರ್ಮ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್‌ ಅವರ ಮೊಮ್ಮಗಳು. ‘ಟ್ರಂಕ್‌’ ಚಿತ್ರವನ್ನು ನಿರ್ದೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ರಿಶಿಕಾ ಈಗ ಉತ್ತರ ಕರ್ನಾಟಕದ ಸಿನಿಮಾವೊಂದರ ಚಿತ್ರೀಕರಣದಲ್ಲಿ ಬ್ಯುಸಿ.

‘ದೀಪಾವಳಿ ಅಂದ್ರೆ ಬೆಳಿಗ್ಗೆ ಬೇಗನೆ ಎದ್ದು ಮಾಡುವ ಎಣ್ಣೆ ಸ್ನಾನ, ಹೊಸ ಬಟ್ಟೆ, ಪಟಾಕಿ, ತಿಂಡಿಗಳನ್ನು ತಿನ್ನೋದು. ಒಂದು ರೀತಿಯಲ್ಲಿ, ದೀಪಾವಳಿ ಹಬ್ಬ ಅಂದ್ರೆ ತಿನ್ನುವ ಹಬ್ಬ. ಈಗ ಇದರಲ್ಲಿ ಆಗಿರುವ ಬದಲಾವಣೆ ಅಂದ್ರೆ ಪಟಾಕಿ ಹಚ್ಚಲ್ಲ ಅನ್ನೋದೊಂದೇ.

ನಿಜ ಹೇಳ್ಬೇಕಂದ್ರೆ, ನಾನು ಸಣ್ಣವಳಿದ್ದಾಗ ಕೂಡು ಕುಟುಂಬದಲ್ಲಿದ್ದ ಕಾರಣ ಎಲ್ಲರಿಗೂ ಸಾಕು ಎನಿಸುವಷ್ಟು ತಿನ್ನಲು ಸಿಗ್ತಿರಲಿಲ್ಲ. ಯಾಕಂದ್ರೆ 11 ಮಂದಿಯ ಕೂಡುಕುಟುಂಬ ನಮ್ಮದು. ಆಗ ನಾವು ರಾಜಾಜಿನಗರದಲ್ಲಿದ್ದೆವು. ನಾನು ಹುಟ್ಟಿಬೆಳೆದದ್ದೆಲ್ಲ ಅಲ್ಲಿಯೇ. ಬೆಳಿಗ್ಗೆ ಎಣ್ಣೆ ಸ್ನಾನ ಆದ ತಕ್ಷಣ ಯಾರ ಮನೆಯಿಂದ ಪಟಾಕಿ ಸದ್ದು ಕೇಳಿಬರುತ್ತೆ ಅನ್ನೋದು ಒಂಥರಾ ಸ್ಪರ್ಧೆ. ಸಂಜೆಯಾದ ಮೇಲೆ ಯಾರು ಎಷ್ಟು ಪಟಾಕಿ ಹಚ್ಚಿದ್ರು ಅನ್ನೋದೂ ಸ್ಪರ್ಧೆಯೇ. ನಮ್ಮಲ್ಲಿ ಹಬ್ಬದ ದಿನ ಪೂಜೆ ಆಗೋವರೆಗೂ ಊಟ ಮಾಡುವಂತಿಲ್ಲ.
ಈ ಕ್ರಮ ಈಗಲೂ ಇದೆ ಆದ್ರೆ ನಾನು ಅಜ್ಜಿ, ಅತ್ತೆ, ಅಮ್ಮನ ಕೈಲಿ ಏನಾದ್ರೂ ತಿನ್ತಿದ್ದೆ.

ನಾವೀಗ ಕನಕಪುರ ರಸ್ತೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿದ್ದೇವೆ. ಹಾಗಾಗಿ ಕಮ್ಯೂನಿಟಿ ಪಾರ್ಟಿಯಂತೆ ದೀಪಾವಳಿ ಆಚರಿಸುತ್ತೇವೆ. ಮನೆಯನ್ನು ದೀಪಗಳಿಂದಲೇ ಸಿಂಗಾರ ಮಾಡುತ್ತೇನೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಜೋರಾಗೇ ನಡೆಯುತ್ತೆ. ಆದರೂ ನಾನು ಸಂಪ್ರದಾಯಬದ್ಧವಾಗಿಯೇ ಆಚರಿಸುತ್ತೇನೆ. ಅಮಾವಾಸ್ಯೆಗೆ ಎರಡು ದಿನ ಮುಂಚೆ ಅಂದ್ರೆ ಸೋಮವಾರ ಕಲ್ಲುಪ್ಪು ತರುವುದು, ನಂತರ ಪೊರಕೆ ಅದಾದ ಮೇಲೆ ಚಿನ್ನ ತರೋದನ್ನು ಕಡ್ಡಾಯವಾಗಿ ಆಚರಿಸುತ್ತೇನೆ. ಈಗಷ್ಟೇ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಈ ಬಾರಿಯ ಹಬ್ಬಕ್ಕೆ ತುಂಬಾ ವಿಶೇಷವಿದೆ.

**

ಹಬ್ಬದ ನೆಪದಲ್ಲಿ ಊರಿಗೊಂದು ಭೇಟಿ

‘ನಾತಿಚರಾಮಿ’ ಸಿನಿಮಾ ಮುಂಬೈನ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಾಗಿನಿಂದಲೂ ನಿರ್ದೇಶಕ ಮಂಸೋರೆ ಚರ್ಚೆಯ ಕೇಂದ್ರಬಿಂದು. ಪ್ರತಿಭಾವಂತ ನಿರ್ದೇಶಕ ಎಂಬುದನ್ನು ಅವರು ಈಗಾಗಲೇ ಸಾಬೀತು ಮಾಡಿದ್ದಾರೆ.

‘ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು, ನಂಗಲಿ ಸಮೀಪದ ವೆಂಕಟಾಪುರವೆಂಬ ನಮ್ಮೂರಲ್ಲಿ ಕಳೆದ ದೀಪಾವಳಿಯೇ ನಿಜವಾದ ದೀಪಾವಳಿ. ನಮ್ಮದು ಪಟೇಲರ ಮನೆತನ. ಹಾಗಾಗಿ ಊರಲ್ಲಿ ನಮ್ಮ ಮನೆಯ ಹಬ್ಬದ ಆಚರಣೆಗೆ ಪ್ರಾಮುಖ್ಯತೆಯಿತ್ತು. ನಮ್ಮ ಕುಟುಂಬಕ್ಕೆ ದೀಪಾವಳಿ ದೊಡ್ಡ ಹಬ್ಬ. ಈಗ ವಿಕೇಂದ್ರೀಕರಣವಾದಂಗೆ ಎಲ್ಲರೂ ಚೆಲ್ಲಾಪಿಲ್ಲಿಯಾಗಿದ್ದೀವಿ. ಆಗ ನಮ್ಮ ದೊಡ್ಡಪ್ಪ ಓದುತ್ತಿದ್ದ ದೀಪಾವಳಿ ಸಂಬಂಧಿ ಕತೆ ಕೇಳಲು ಜನ ಸೇರ್ತಿದ್ರು. ದಾರ ಕಟ್ಟುವ ಸಂಪ್ರದಾಯವಿತ್ತು. ಕಜ್ಜಾಯ–ಎಲೆಅಡಿಕೆ–ದಾರವನ್ನು ದೇವರ ಮನೆಯಲ್ಲಿಟ್ಟು ಅವರು ಕತೆ ಓದುತ್ತಿದ್ದರು. ಕೊನೆಯಲ್ಲಿ ಅದರ ವಿಸರ್ಜನೆ ಮಾಡುತ್ತಿದ್ದರು. ಹಾಗೆ ಹೋಗುವಾಗ ದಾರಿಯುದ್ದಕ್ಕೂ ಪಟಾಕಿ ಹೊಡೀಬೇಕಿತ್ತು. ಪಟಾಕಿ ಬೆಳಕೇ ದಾರಿದೀಪ! ನಾನು ನನ್ನ ಸಂಗ್ರಹದ ಪಟಾಕಿಯನ್ನು ತೆಗೆಯುತ್ತಿರಲಿಲ್ಲ. ಮರುದಿನ ಎಲ್ಲರ ಹೊಟ್ಟೆ ಉರಿಸುವಂತೆ ಹೊಡೆಯಲು ಬೇಕಲ್ಲ?

ಅಪ್ಪ ಚಿಂತಾಮಣಿಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದರು. ಅವರಿರುವಷ್ಟು ದಿನ ದೀಪಾವಳಿಗೆ ಎಲ್ಲರೂ ವೆಂಕಟಾಪುರದ ಮನೆಯಲ್ಲಿ ಸೇರುತ್ತಿದ್ದೆವು. ಅಪ್ಪ ತೀರ್ಕೊಂಡ ಮೇಲೆ ಹಬ್ಬದಲ್ಲಿ ಆಸಕ್ತಿಯೇ ಹೊರಟುಹೋಗಿದೆ. ಈಗ ಅಮ್ಮ ಪೂಜೆ ಮಾಡಿ ಏನಾದರೂ ವಿಶೇಷ ಅಡುಗೆ ಮಾಡ್ತಾರೆ. ನಾನು ಊರಿಗೆ ಹೋದರೆ ಅವಳಿಗೆ ಅದೇ ಖುಷಿ.

– ಮಂಸೋರೆ, ಚಿತ್ರ ನಿರ್ದೇಶಕ

**

‘ಬಾಲ್ಯವನ್ನು ಮಿಸ್‌ ಮಾಡ್ಕೊತಿದ್ದೀನಿ’

ಜಾಲಹಳ್ಳಿ ಸಮೀಪ ಕಮ್ಮಗೊಂಡನಹಳ್ಳಿಯಲ್ಲಿ ಅಪ್ಪ, ಅಮ್ಮ ಮತ್ತು ಅಜ್ಜಿ ತಾತನ ಜೊತೆಗೆ ಕಳೆದ ಬಾಲ್ಯ ಮತ್ತು ಆಗಿನ ದೀಪಾವಳಿ ಹಬ್ಬ ಈಗಲೂ ಕಾಡುತ್ತದೆ. ಅತ್ಯಂತ ಸಾಂಪ್ರದಾಯಿಕವಾಗಿ ಮಾಡುತ್ತಿದ್ದ ಹಬ್ಬ.

ನರಕ ಚತುರ್ದಶಿ ದಿನ ಮುಂಜಾನೆಯೇ ಅಜ್ಜ, ಅಜ್ಜಿಯ ಮನೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಮತ್ತು ಹತ್ತಿರದ ಬಂಧುಗಳು ಸೇರೋರು. ಆ ಎಣ್ಣೆ ಶಾಸ್ತ್ರವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗ್ತದೆ.ಸ್ನಾನ ಆದ ತಕ್ಷಣ ಶಾಸ್ತ್ರಕ್ಕೆ ಅಂತ ಒಂದು ಪಟಾಕಿ ಹಚ್ಚಬೇಕಿತ್ತು. ಅಮ್ಮ ಅಥವಾ ಅಜ್ಜಿ ನನಗೆ ಸ್ನಾನ ಮಾಡಿಸ್ತಿದ್ರು. ಜೀವನದಲ್ಲಿ ಅತಿ ಪ್ರಿಯವಾದ ಅವಧಿ ಅದು.

ಪಟಾಕಿ ಅಂದ್ರೆ ಆಗ್ತಿರಲಿಲ್ಲ. ಹಾಗಾಗಿ ನನಗೆ ಪಟಾಕಿ ತರುತ್ತಿರಲಿಲ್ಲ. ಹೊಸ ಬಟ್ಟೆ, ಭರ್ಜರಿ ಊಟಕ್ಕೆ ಮಾತ್ರ ಆದ್ಯತೆ. ನಾನು ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡ ನಂತರ ಜೆ.ಪಿ.ನಗರದಲ್ಲಿ ಬಂದು ನೆಲೆಸಿದೆವು. ಈಗ ಹಬ್ಬವೆಂದರೆ ಖದರೇ ಇಲ್ಲ. ನಮ್ಮ ಬಂಧುಗಳೆಲ್ಲ ಕಮ್ಮಗೊಂಡನಹಳ್ಳಿಯಲ್ಲಿಯೇ ಇದ್ದಾರೆ. ಅಲ್ಲಿಗೆ ಹೋಗುವುದೇ ನನಗೆ ಹಬ್ಬ. ಈಗಲೂ ದೀಪಾವಳಿಗೆ ಎಣ್ಣೆ ಸ್ನಾನ, ಹೊಸ ಬಟ್ಟೆ, ಆರತಿ, ವಿಶೇಷ ಊಟ ಇದೆ. ಆದರೆ ಬಾಲ್ಯದ ಹಬ್ಬ ಇನ್ನೆಂದೂ ಮರುಕಳಿಸದು.

–ಅಂಜನ್‌ ಎ. ಭಾರದ್ವಾಜ್‌ , ‘ಪಾಪ ಪಾಂಡು’ ಧಾರಾವಾಹಿಯ ಪುಂಡಲೀಕ

**

ವರ್ಷದ ಹಬ್ಬಕ್ಕಾಗಿ ಕಲಬುರ್ಗಿಯಲ್ಲೇ ಪಯಣ

‌ಚಿತ್ಕಳಾ ಬಿರಾದಾರ್‌, ಕಿರುತೆರೆಯ‍ಪ್ರಮುಖ ನಟಿ. ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಿತ್ಕಳಾ ಗುಲ್ಬರ್ಗಾ ಮೂಲದವರು. ತವರು ಮತ್ತು ಗಂಡನ ಮನೆ ಅಲ್ಲಿಯೇ. ಹಾಗಾಗಿ ದೀಪಾವಳಿಗೆ ಕುಟುಂಬದ ಪ್ರತಿ ಸದಸ್ಯರೂ ಸೇರುತ್ತಾರಂತೆ.ಮನೆ ಮಂದಿಯೆಲ್ಲಾ ಸೇರೋದೇ ಹಬ್ಬ. ಮಕ್ಕಳ ಉಪಸ್ಥಿತಿಯೇ ಮನೆಗೆ ಬೆಳಕು ಎಂಬುದು ಅವರ ವಿಶ್ಲೇಷಣೆ. ಈ ಖುಷಿಗಾಗಿ ಆರು ತಿಂಗಳಿಗೂ ಮೊದಲೇ ಟಿಕೆಟ್‌ ಬುಕ್‌ ಮಾಡುವಲ್ಲಿಂದ ಹಬ್ಬದ ತಯಾರಿ ಶುರುವಾಗುತ್ತದಂತೆ.

‘ನರಕ ಚತುರ್ದಶಿ ದಿನ ಬೆಳಿಗ್ಗೆ ಎಣ್ಣೆ ಸ್ನಾನವಾದ ಬಳಿಕ ತಾಯಿ ಮನೆಗೆ ಹೋಗಿ ನನ್ನ ಸಹೋದರರಿಗೆ ಆರತಿ ಬೆಳಗಿ ಕಾಣಿಕೆ ಪಡೆದು ಗಂಡನ ಮನೆಯಲ್ಲಿ ಅದೇ ಸಾಂಪ್ರದಾಯಿಕ ಆಚರಣೆ ಮಾಡುತ್ತೇನೆ. ಕರ್ಚಿಕಾಯಿ, ಬೇಸನ್‌ ಉಂಡೆ, ಚಕ್ಕುಲಿ, ಶೇಂಗಾ ಹೋಳಿಗೆಯಂತೂ ಇರಲೇಬೇಕು. ಈಗಇದನ್ನೆಲ್ಲ ಹೊರಗಿನಿಂದ ಖರೀದಿಸುತ್ತೇವೆ. ಚಿಡುವಾ ಮಾತ್ರ ಮನೇಲೇ ಮಾಡ್ತೀವಿ. ಈ ಸಲ ನನ್ನ ಇಬ್ಬರೂ ಮಕ್ಕಳು ಊರಲ್ಲಿಲ್ಲ. ಹಾಗಾಗಿ ಸ್ವಲ್ಪ ಸಪ್ಪೆ. ಆದರೂ ಹಬ್ಬ ಬರೋದೂ ವರ್ಷಕ್ಕೊಂದೇ ಬಾರಿ. ಹಣತೆ, ಪಟಾಕಿ, ಊಟ ತಿಂಡಿಯೊಂದಿಗೆ ಸಂಭ್ರಮಿಸೋದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT