ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಕ್ಕಾಗಿ ಸೋತವರ ಬಿಗಿ ಪಟ್ಟು

‘ಆಪರೇಷನ್‌ ಕಮಲ’ದ ಬಗ್ಗೆ ವಿಶ್ವನಾಥ್‌ ಪುಸ್ತಕ/ ಮಠಾಧೀಶರ ಮೊರೆ ಹೋದ ಶಂಕರ್
Last Updated 31 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆಯಲ್ಲಿ ಸೋತವರು ಸಚಿವ ಸ್ಥಾನಕ್ಕಾಗಿ ಪಟ್ಟು ಇನ್ನಷ್ಟು ಬಿಗಿಗೊಳಿಸಿದ್ದಾರೆ. ‘ಆಪರೇಷನ್‌ ಕಮಲ’ದ ಬಗ್ಗೆ ಪುಸ್ತಕ ಬರೆಯುವುದಾಗಿ ಎಚ್‌.ವಿಶ್ವನಾಥ್ ಎಚ್ಚರಿಕೆ ನೀಡಿದ್ದರೆ, ಸಂಪುಟ ವಿಸ್ತರಣೆ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಎಂ.ಟಿ.ಬಿ.ನಾಗರಾಜ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ವಿಶ್ವನಾಥ್‌, ‘ಆಪರೇಷನ್‌ ಕಮಲದ ಕುರಿತು ಪುಸ್ತಕ ಬರೆಯಲಿದ್ದು, ಅದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಯಾವ ನಾಯಕರು ಭಾಗಿಯಾಗಿದ್ದರು ಎಂಬ ವಿಚಾರ ತಿಳಿಸುತ್ತೇನೆ’ಎಂದಿದ್ದಾರೆ.

‘ಸಮ್ಮಿಶ್ರ ಸರ್ಕಾರದ ಪತನ, ಆ ಬಳಿಕ ಏನೆಲ್ಲ ನಡೆಯಿತು ಎಂಬುದರ ಎಲ್ಲ ಮಾಹಿತಿಯನ್ನೂ ಇಟ್ಟುಕೊಂಡಿದ್ದೇನೆ. ಮುಂಬೈಗೆ ಹೋಗಿದ್ದು, ಕೋಲ್ಕತ್ತಾಗೆ ಹೋಗಿದ್ದು ಸೇರಿ ಎಲ್ಲ ವಿಷಯಗಳನ್ನೂ ಬರೆಯುತ್ತೇನೆ’ ಎಂದು ಹೇಳಿದ್ದಾರೆ.

‘ನನ್ನನ್ನು ಮಂತ್ರಿ ಮಾಡುತ್ತಾರೆ ಎಂಬ ನಂಬಿಕೆ ಇದೆ. ಮುಖ್ಯಮಂತ್ರಿಯವರು ಮಾತು ಉಳಿಸಿಕೊಳ್ಳುತ್ತಾರೆ. ನನಗೆ ಪಕ್ಷವಾಗಲಿ, ಹೈಕಮಾಂಡ್‌ ಆಗಲಿ ಗೊತ್ತಿಲ್ಲ. ನಮಗೆ ಗೊತ್ತಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ. ಅವರು ಕಾಲದ ಧ್ವನಿಯಾಗಬೇಕು. ಹೈಕಮಾಂಡ್‌ ಧ್ವನಿಯಾಗಬಾರದು’ ಎಂದರು.

ಪ್ರಬಲ ಖಾತೆಗೆ ಪಟ್ಟು: ಉಪಮುಖ್ಯಮಂತ್ರಿ ಹುದ್ದೆ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಪ್ರಬಲ ಖಾತೆಯನ್ನು ಪಡೆಯಲು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರಯತ್ನ ನಡೆಸಿದ್ದಾರೆ.

ಈ ಸಂಬಂಧ ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಜತೆ ಮುಂದಿನ ನಡೆಯ ಕುರಿತು ನಗರದ ಹೋಟೆಲ್‌ವೊಂದರಲ್ಲಿ ಮಾತುಕತೆ ನಡೆಸಿದರು.ಬಿಜೆಪಿಗೆ ಸೇರುವ ಮೊದಲು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಭರವಸೆ ಉಳಿಸಿಕೊಳ್ಳಲು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿ ಮೊರೆ ಹೋದ ಶಂಕರ್‌: ಸಚಿವ ಸ್ಥಾನದ ಆಕಾಂಕ್ಷಿ ಆರ್‌.ಶಂಕರ್ ಸಂಪುಟದಲ್ಲಿ ಸ್ಥಾನ ಪಡೆಯಲು ಕುರುಬ ಸಮುದಾಯದ ಸ್ವಾಮೀಜಿಗಳ ಮೊರೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಬಲ ಸಮುದಾಯವಾಗಿರುವ ಕುರುಬ ಸಮಾಜದ ಸ್ವಾಮೀಜಿಗಳ ಮಾತನ್ನು ಮುಖ್ಯಮಂತ್ರಿಯವರು ಕೇಳಬಹುದು ಎಂಬ ಲೆಕ್ಕಾಚಾರ ಶಂಕರ್‌ ಅವರದ್ದಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಸುದ್ದಿಗಾರರ ಜತೆ ಮಾತನಾಡಿರುವ ಅವರು, ‘ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿದೆ. ನನಗೆ ಅನ್ಯಾಯ ಅಗಿದೆ ಎನ್ನುವುದಕ್ಕಿಂತ, ಸ್ವಲ್ಪ ಸಮಯ ಕಾಯಬೇಕಾದ ಪರಿಸ್ಥಿತಿ ಬರಬಹುದು. ಲಕ್ಷ್ಮಣ ಸವದಿ ಅವರಿಗೆ ಪರಿಷತ್‌ಗೆ ನೇಮಕ ಮಾಡುವ ಬಗ್ಗೆ ಏನೂ ಹೇಳುವುದಿಲ್ಲ. ಅದು ನನಗೆ ಸಂಬಂಧಿಸಿದ್ದಲ್ಲ’ ಎಂದು ಹೇಳಿದರು.

ಮೂರು ಜಿಲ್ಲಾಧ್ಯಕ್ಷರ ನೇಮಕ

ಬಿಜೆಪಿ ಮೂರು ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಮಂಡ್ಯ ಜಿಲ್ಲೆಗೆ ಕೆ.ಜೆ.ವಿಜಯಕುಮಾರ್‌, ಬೀದರ್‌ಗೆ ಶಿವಾನಂದ ಮತ್ತು ಕಲಬುರ್ಗಿ ನಗರಕ್ಕೆ ಸಿದ್ದಾಜಿ ಎಸ್‌. ಪಾಟೀಲ ಅವರನ್ನು ನೇಮಿಸಿದೆ.\

‘ಸೋಲು ಗೆಲುವಿನ ಪ್ರಶ್ನೆ ಇಲ್ಲದೆ ಸಚಿವ ಸ್ಥಾನ’

‘ಯಡಿಯೂರಪ್ಪ ಅವರನ್ನು ನಂಬಿ ರಾಜಿನಾಮೆ ನೀಡಿದ್ದೇವೆ. ಸೋಲು– ಗೆಲುವಿನ ಲೆಕ್ಕಾಚಾರ ಬಿಟ್ಟು ನಮಗೆ ಸಚಿವ ಸ್ಥಾನ ನೀಡಬೇಕು’ ಎಂದು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದ್ದಾರೆ.

ಹೊಸಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಾವು ರಾಜೀನಾಮೆ ನೀಡುವುದಕ್ಕೆ ಮೊದಲು ಹಲವು ಬಾರಿ ಯಡಿಯೂರಪ್ಪ ಜತೆ ಮಾತುಕತೆ ಮಾಡಿದ್ದೇವೆ. ಅಲ್ಲಿ ಏನು ಚರ್ಚೆ ನಡೆದಿದೆ’ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

‘ನನ್ನ ತಾಲ್ಲೂಕಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳಾಗಲಿ, ಅಧಿಕಾರಿಗಳ ವರ್ಗಾವಣೆ ಆಗಲಿ, ನಾನು ಹೇಳಿದಂತೆಯೇ ಮಾಡಿದ್ದಾರೆ’ ಎಂದರು.

ಅಧಿಕಾರ ಬೇಡ ಅನ್ನೋದಕ್ಕೆ ನಾನು ಸನ್ಯಾಸಿ ಅಲ್ಲ. ರಾಜಕೀಯ ಮಾಡುವುದಕ್ಕೆ ಮತ್ತು ಜನ ಸೇವೆ ಮಾಡುವುದಕ್ಕೇ ಬಂದಿದ್ದೇನೆ.

- ಆರ್‌.ಶಂಕರ್‌, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT