ಶನಿವಾರ, ಡಿಸೆಂಬರ್ 14, 2019
24 °C

ಕಡೆಯ ದಿನ ಹಲವರ ನಾಮಪತ್ರ ಸಲ್ಲಿಕೆ, ರಾಜಕೀಯ ಪಕ್ಷಗಳ ಮೆರವಣಿಗೆ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಉಪ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿರುವುದರಿಂದ ಬೆಂಗಳೂರಿನ 4 ಕ್ಷೇತ್ರಗಳು ಸೇರಿದಂತೆ ರಾಜ್ಯದ ಎಲ್ಲ 15 ಕ್ಷೇತ್ರಗಳಲ್ಲಿ ಇದೀಗ ನಾಮಪತ್ರಗಳ ಸಲ್ಲಿಕೆ ಅಂತಿಮ ಹಂತಕ್ಕೆ ಬಂದು ತಲುಪಿದೆ.

ಪ್ರಮುಖ ವ್ಯಕ್ತಿಗಳು ಬೆಳಗ್ಗೆಯೇ ಒಳ್ಳೆಯ ಮುಹೂರ್ತ ನೋಡಿಕೊಂಡು ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಮೊರೆ ಹೋಗಿದ್ದು, ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸುತ್ತಿವೆ.

ಕೆ.ಆರ್. ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಅವರಿಗೆ ಕಂದಾಯ ಸಚಿವ ಆರ್ ಅಶೋಕ್ ಜತೆಯಾಗಿದ್ದರೆ, ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೆ.ಗೋಪಾಲಯ್ಯ ಅವರಿಗೆ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಜತೆಯಾಗಿದ್ದರು.

ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಜತೆಯಾಗಿದ್ದಾರೆ. 

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಉಮೇದುವಾರಿಕೆ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಬಂದಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ರಾಜುಗೌಡ, ಹಾಲಪ್ಪ ಆಚಾರ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಜತೆಗಿದ್ದಾರೆ. 

ಶಿವಾಜಿನಗರ: ಬಿಜೆಪಿ ಆಭ್ಯರ್ಥಿ ಎಂ ಶರವಣ ಅವರಿಗೆ ಮೇಯರ್ ಗೌತಮ್ ಕುಮಾರ್ ಸಾಥ್ ನೀಡಿದ್ದಾರೆ. ಬಹುತೇಕ ಅಭ್ಯರ್ಥಿಗಳು ಬೆಳಿಗ್ಗೆ ಹಲವಾರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಅಥಣಿ: ಗಜಾನನ ಮಂಗಸೂಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಜಾನನ ಮಂಗಸೂಳಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಶಾಸಕ ಎಂ.ಬಿ. ಪಾಟೀಲ, ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ ಜೊತೆ ಬಂದು ಅಥಣಿ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಜಿಲಾನಿ ಮೊಕಾಶಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಬೆಳಗಾವಿಯಲ್ಲಿ ತಮ್ಮನ ರೋಡ್ ಶೋ, ಅಣ್ಣ ಸೈಲೆಂಟ್ ಆಗಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಒಂದೆಡೆ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಬ್ಬರದ ರೋಡ್ ಶೋ ನಡೆಸುತ್ತಿದ್ದರೆ, ಪ್ರತಿಸ್ಪರ್ಧಿ ಸಹೋದರ ಬಿಜೆಪಿಯ ರಮೇಶ ಜಾರಕಿಹೊಳಿ ಸೈಲೆಂಟ್ ಆಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಗೋಕಾಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ರೋಡ್ ಶೋ ಆರಂಭಿಸಿದ್ದಾರೆ. ಇಲ್ಲಿನ ಕೊಳವಿ ಹಣಮಂತ ಹಾಗೂ ಲಕ್ಷ್ಮಿ ದೇವಸ್ಥಾನ ಹಾಗೂ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭಿಸಿದರು. ಸಹೋದರ, ಶಾಸಕ ಸತೀಶ ಮೆರವಣಿಗೆಯಲ್ಲಿ ಪಾಲ್ಗೊಂಡರು. ಆದರೆ, ಸತೀಶ್ ಲಖನ್ ಜೊತೆ ತೆರೆದ ವಾಹನ ಏರದೇ, ಕಾರ್ಯಕರ್ತರ ಜೊತೆ ಹೆಜ್ಜೆ ಹಾಕಿದರು. ಲಖನ್ ಅವರ ರೋಡ್ ಶೋದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ರಮೇಶ್ ಜಾರಕಿಹೊಳಿ ಜ್ಯೋತಿಷಿಯೊಬ್ಬರು ಸೂಚಿಸಿದಂತೆ ಬೆಳಿಗ್ಗೆ 11.02 ಗಂಟೆಗೆ ನಾಮಪತ್ರ ಸಲ್ಲಿಸಿದರು. ಅವರ ಜೊತೆ ಸಹೋದರ, ಶಾಸಕ ಬಾಲಚಂದ್ರ ಜಾರಕಿಹೊಳಿ, ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಸೇರಿದಂತೆ ಕೆಲವೇ ಕೆಲವು ಸ್ಥಳೀಯ ಮುಖಂಡರು ಇದ್ದರು. ಯಾವುದೇ ಅಬ್ಬರ ಇರಲಿಲ್ಲ.

ಬಿಜೆಪಿ ಬಂಡಾಯ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಹೊಸಪೇಟೆ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮುಖಂಡ ಕವಿರಾಜ ಅರಸ್ ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಉಮೇದುವಾರಿಕೆ ಸಲ್ಲಿಸಿದರು.
ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಅವರು ಕವಿರಾಜ ಅರಸ್ ಅವರನ್ನು ಮನವೊಲಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡಿದ್ದು, ಬಿಜೆಪಿ ಮುಖಂಡರಿಗೆ ತಲೆನೋವಾಗಿದೆ. ಆರ್.ಎಸ್.ಎಸ್. ಮುಖಂಡರು ಕವಿರಾಜ ಅರಸ್ ಅವರ ಬೆಂಬಲಕ್ಕೆ ನಿಂತಿರುವುದರಿಂದಲೇ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದೇ ಬಿಜೆಪಿಯಿಂದ ಆನಂದ್ ಸಿಂಗ್, ಕಾಂಗ್ರೆಸ್ ನಿಂದ ವೆಂಕಟರಾವ ಘೋರ್ಪಡೆ ಹಾಗೂ ಜೆ.ಡಿ.ಎಸ್.ನಿಂದ ಎನ್.ಎಂ.ನಬಿ ಉಮೇದುವಾರಿಕೆ ಸಲ್ಲಿಸುವರು.

ಶಕ್ತಿಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ ಆರಂಭ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು ನಗರದಲ್ಲಿ ಸೋಮವಾರ ಶಕ್ತಿಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಲು ಮೆರವಣಿಗೆ ನಡೆಸಿದರು. ಮೊದಲಿಗೆ ಕಾಂಗ್ರೆಸ್ ಅಭ್ಯರ್ಥಿ ನಂದಿ ಆಂಜನಪ್ಪ ಅವರು ನಗರದ ವಾಪಸಂದ್ರದ ರಂಗನಾಥ ಸ್ವಾಮಿ ದೇವಾಲಯದಿಂದ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. 

ಆಂಜನಪ್ಪ ಅವರಿಗೆ ಶಾಸಕರಾದ ಕೃಷ್ಣ ಬೈರೇಗೌಡ, ಎನ್.ಎಚ್.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಮುಖಂಡರಾದ ಜಿ.ಎಚ್.ನಾಗರಾಜ್, ಯಲುವಹಳ್ಳಿ ರಮೇಶ್, ಕೆ.ವಿ‌.ನವೀನ್ ಕಿರಣ್ ಅವರು ಸಾಥ್ ನೀಡಿದರು. ಸದ್ಯ ವಾಪಸಂದ್ರದಿಂದ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರ ಮೆರವಣಿಗೆ ಆರಂಭಿಸಿದರು. ಕೊನೆಯದಾಗಿ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಮೆರವಣಿಗೆ ನಡೆಸಲು ಸಿದ್ಧತೆಗಳು ನಡೆದಿದ್ದವು.

ಮಹೇಶ ಕುಮಠಳ್ಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಅಥಣಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ ಕುಮಠಳ್ಳಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ, ಮುಖಂಡರಾದ ಮಹೇಶ ಟೆಂಗಿನಕಾಯಿ, ಉಮೇಶ ಬಂಟೊಡಕರ ಅವರೊಂದಿಗೆ ಬಂದು ಚುನಾವಣಾ ಅಧಿಕಾರಿ ಜಿಲಾನಿ ಮೊಕಾಶಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ ಘೋರ್ಪಡೆ ಅವರು ಸೋಮವಾರ ಚುನಾವಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಹೊಸಪೇಟೆ: ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಲು ಬರುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ ಘೋರ್ಪಡೆ. ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಈ. ತುಕಾರಾಂ, ಜೆ.ಎನ್. ಗಣೇಶ್, ಮುಖಂಡರಾದ ವಿ.ಎಸ್. ಉಗ್ರಪ್ಪ, ನಾರಾ ಸೂರ್ಯನಾರಾಯಣ ರೆಡ್ಡಿ, ಬಸವರಾಜ ರಾಯರಡ್ಡಿ, ಮೊಹಮ್ಮದ್ ಇಮಾಮ್ ನಿಯಾಜಿ ಸಾಥ್ ನೀಡಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿಗೆ ಹಾಲಿನ ಅಭಿಷೇಕ
ಹೊಸಪೇಟೆ:
ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ಅವರಿಗೆ ಅವರ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿದರು. ನಾಮಪತ್ರ ಸಲ್ಲಿಸಿ ಕಚೇರಿಯಿಂದ ಹೊರಬರುತ್ತಿದಂತೆ ಅವರಿಗೆ 101 ಲೀಟರ್ ಹಾಲಿನ ಅಭಿಷೇಕ ಮಾಡಿ ಅಭಿಮಾನ ತೋರಿಸಿದರು.

ಶಿವರಾಮ್ ಹೆಬ್ಬಾರ್ ನಾಮಪತ್ರ

ಯಲ್ಲಾಪುರ: ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಸಲಿರುವ  ಹಿನ್ನೆಲೆಯಲ್ಲಿ‌ ನಗರದ ವೈಟಿಎಸ್ಎಸ್ ಮೈದಾನದಲ್ಲಿ ಬಿಜೆಪಿ‌ ಕಾರ್ಯಕರ್ತರ ಸಮಾವೇಶ ಆರಂಭವಾಗಿದೆ. ಸಚಿವ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಅನಂತಕುಮಾರ್ ಹೆಗಡೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಕುಮಾರ್ ಬಂಗಾರಪ್ಪ ಭಾಗವಹಿಸಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ‌ ಚುನಾವಣೆಗೆ ಚಿಕ್ಕಬಳ್ಳಾಪುರದ ಎಸ್.ವಿ. ಫಣೀರಾಜ್ ಅವರು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಸೋಮವಾರ ಚುನಾವಣಾ ಅಧಿಕಾರಿಗಳಾದ ರಘುನಂದನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು