ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ 15 ವಿದ್ಯಾರ್ಥಿಗಳಿಲ್ಲದಿದ್ದರೆ ಐಚ್ಛಿಕ ಪದವಿ ಕೋರ್ಸ್‌ಗಳು ರದ್ದು

Last Updated 8 ಜೂನ್ 2019, 1:51 IST
ಅಕ್ಷರ ಗಾತ್ರ

ಬೆಂಗಳೂರು: ಬಡ, ಮಧ್ಯಮ ವಿದ್ಯಾರ್ಥಿಗಳ ಪದವಿ ಶಿಕ್ಷಣದ ಕನಸಿನ ಸಾಕಾರಕ್ಕೆ ದಾರಿಯಾಗಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಇನ್ನು ಮುಂದೆ ಐಚ್ಛಿಕ ಕೋರ್ಸ್‌ಗಳ ಅಧ್ಯಯನದ ಅವಕಾಶವೇ ಕ್ಷೀಣವಾಗುವ ಸಾಧ್ಯತೆ ಇದೆ.

2019–20ನೇ ಸಾಲಿನಲ್ಲಿ ಯಾವುದಾದರೂ ಕೋರ್ಸ್‌ಗೆ (ಕಾಂಬಿನೇಶನ್) ಕನಿಷ್ಠ 15 ವಿದ್ಯಾರ್ಥಿಗಳು ದಾಖಲಾಗದಿದ್ದರೆ, ಅಂತಹ ವಿಭಾಗ ಅಥವಾ ಐಚ್ಛಿಕ ಸಮೂಹವನ್ನು ರದ್ದು ಮಾಡಬೇಕು. ಅಂತಹ ಕೋರ್ಸ್ ಅಪೇಕ್ಷಿಸುವ ವಿದ್ಯಾರ್ಥಿಗಳು ಅರ್ಜಿ
ಸಲ್ಲಿಸುವಾಗಲೇ, ವಿಭಾಗ ಮುಚ್ಚುವಂತಹ ಪರಿಸ್ಥಿತಿ ಬಂದರೆ ಬೇರೆ ಕೋರ್ಸ್‌ಗೆ ಸೇರುತ್ತೇನೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದು ಎಲ್ಲ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿ, ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ, ತಮಗೆ ಬೇಕಾದ ಕೋರ್ಸ್‌ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಗುವುದಿಲ್ಲ ಎಂದು ವಿದ್ಯಾರ್ಥಿ ವಲಯ ಆತಂಕಕ್ಕೆ ಒಳಗಾಗಿದೆ.

‘ಯಾವುದಾದರೂ ಒಂದು ಕೋರ್ಸ್‌ಗೆ 15 ಮಂದಿ ದಾಖಲಾಗದಿದ್ದರೆ ಕೋರ್ಸ್ ಮುಂದುವರಿಸುವುದು ಕಷ್ಟವಾಗುತ್ತದೆ. ಬೋಧಕರನ್ನು ನಿಯೋಜಿಸಲೂ ಸಾಧ್ಯವಾಗುವುದಿಲ್ಲ’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪದವಿ ಹಂತದಲ್ಲಿ ಸಾಕಷ್ಟು ಸಂಖ್ಯೆಯ ಕಾಂಬಿನೇಶನ್‌ಗಳು ಇದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿವೆ. ಪ್ರತಿ ಕೋರ್ಸ್‌ನಲ್ಲಿ ಕನಿಷ್ಠ 100 ವಿದ್ಯಾರ್ಥಿಗಳು ಇರಬೇಕು ಎಂದು ಇಲಾಖೆ ಮಾರ್ಗಸೂಚಿ ಹೇಳುತ್ತದೆ. ಆದರೆ ಈ ನಿಯಮಾವಳಿ ಪ್ರಮುಖ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ. ಕೆಲ ಸಣ್ಣ ಪುಟ್ಟ ಕೋರ್ಸ್‌ಗಳಲ್ಲಿ ಕನಿಷ್ಠ 15 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ.ಉರ್ದು, ಸಂಸ್ಕೃತ ಭಾಷೆ ಅಧ್ಯಯನ ನಡೆಸುವ ಕಾಂಬಿನೇಶನ್‌ಗೆ 10 ವಿದ್ಯಾರ್ಥಿಗಳು ಪ್ರವೇಶ ಪಡೆದರೂ ಕಲಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

‘ನಾನು ರಾಜ್ಯಶಾಸ್ತ್ರ ಅಧ್ಯಯನ ನಡೆಸಬೇಕು ಎಂದಿದ್ದೇನೆ. ಆದರೆ ಕಾಲೇಜಿನಲ್ಲಿ ಈ ಕೋರ್ಸ್‌ಗೆ ಅಗತ್ಯ ವಿದ್ಯಾರ್ಥಿಗಳಿಲ್ಲ, ಮತ್ತೊಂದು ಕೋರ್ಸ್‌ಗೆ ದಾಖಲಾಗುವಂತೆ ಹೇಳುತ್ತಿರುವುದರಿಂದ ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.

ಸರ್ಕಾರದ ನಿರ್ದೇಶನದಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಕೋರ್ಸ್ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ಯುವ ಸಮುದಾಯ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇಂಗ್ಲಿಷ್‌ ಮಾಧ್ಯಮ: ಹೆಚ್ಚುವರಿ ತರಗತಿ

ಬೆಂಗಳೂರು: ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳನ್ನು ಆರಂಭಿಸಬೇಕು ಎಂಬ ಪೋಷಕರ ಬೇಡಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಂದಿಸಿದ್ದಾರೆ.

ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ತಲಾ ಒಂದು ಹೆಚ್ಚುವರಿ ತರಗತಿ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

‘ಹೊಸದಾಗಿ ಆರಂಭವಾಗಿರುವ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಪೈಕಿ 300 ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಬಂದಿದೆ. ನುರಿತ ಮತ್ತು ತರಬೇತಿ ಹೊಂದಿದ ಶಿಕ್ಷಕರು ಇಂತಹ ಶಾಲೆಗಳಲ್ಲಿ ಲಭ್ಯವಿದ್ದರೆ, ಇನ್ನೂ ಒಂದು ಹೆಚ್ಚುವರಿ ತರಗತಿ ಪ್ರಾರಂಭಿಸಬಹುದು’ ಎಂದು ಕುಮಾರಸ್ವಾಮಿ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT