ಜೈಲಿಗೆ ಕಳುಹಿಸಿದರೆ ಬುದ್ಧಿ ಬರುತ್ತದೆ

6
ಅನ್ವರ್ ಮಾಣಿಪ್ಪಾಡಿ ವರದಿ ಸಲ್ಲಿಕೆ ವಿಳಂಬ: ಹೈಕೋರ್ಟ್‌ ಗರಂ

ಜೈಲಿಗೆ ಕಳುಹಿಸಿದರೆ ಬುದ್ಧಿ ಬರುತ್ತದೆ

Published:
Updated:

ಬೆಂಗಳೂರು: ‘ಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳನ್ನು ಆರು ತಿಂಗಳು ಜೈಲಿಗೆ ಕಳುಹಿಸಿದರೆ ಬುದ್ಧಿ ಬರುತ್ತದೆ’ ಎಂದು ಹೈಕೋರ್ಟ್ ಕಿಡಿ ಕಾರಿದೆ.

‘ವಕ್ಫ್‌ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅಂದಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ ಮುಚ್ಚಳಿಕೆ ನೀಡಿದ್ದ ಸರ್ಕಾರ, ಇನ್ನೂ ತನ್ನ ಮಾತನ್ನು ಪಾಲಿಸಿಲ್ಲ’ ಎಂದು ಆರೋಪಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ಎಸ್‌.ಚೌಹಾಣ್‌ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮದ್‌ ಮೊಹಿಸೀನ್‌ ಖುದ್ದು ಹಾಜರಾಗಿ, ‘ಏಕಸದಸ್ಯ ಪೀಠದ ತೀರ್ಪು ಮರುಪರಿಶೀಲನೆ ಕೋರಿ ವಿಭಾಗೀಯ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು. 

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘2016ರಲ್ಲೇ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ಈತನಕ ಯಾಕೆ ಮುಂದುವರಿದಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿತು.

‘ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶದ ಕುರಿತು ಮುಂದಿನ ನಾಲ್ಕು ವಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಅಥವಾ ಮರು ಪರಿಶೀಲನಾ ಅರ್ಜಿಯಲ್ಲಿ ಸೂಕ್ತ ಆದೇಶ ತರಬೇಕು, ಇಲ್ಲದೇ ಹೋದರೆ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು’ ಎಂದು ಎಚ್ಚರಿಸಿತು.

ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಲಾಗಿದೆ.

‘ವರದಿಯನ್ನು 2016ರ ಫೆಬ್ರುವರಿಯಲ್ಲಿ ಮಂಡಿಸಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಇನ್ನೂ ಸಲ್ಲಿಸಿಲ್ಲ’ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಕೆ.ಕಾಂತ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ಅನ್ವರ್ ಮಾಣಿಪ್ಪಾಡಿ 2012ರ ಮಾರ್ಚ್ 26ರಂದು ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !