ಮೇಲ್ಮನವಿ ವಿಳಂಬ: ಕಾಯ್ದೆಗೆ ತಿದ್ದುಪಡಿ ತನ್ನಿ

7
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕಿವಿಮಾತು

ಮೇಲ್ಮನವಿ ವಿಳಂಬ: ಕಾಯ್ದೆಗೆ ತಿದ್ದುಪಡಿ ತನ್ನಿ

Published:
Updated:
high court

ಬೆಂಗಳೂರು: ‘ಸ್ಥಿರಾಸ್ತಿ ವ್ಯಾಜ್ಯಗಳಲ್ಲಿ ಮೇಲ್ಮನವಿ ಸಲ್ಲಿಸಲು ವಿಳಂಬ ಧೋರಣೆ ಅನುಸರಿಸುವ ಬದಲು ಈ ಸಂಬಂಧ ಕಾನೂನಿಗೇ ಯಾಕೆ ತಿದ್ದುಪಡಿ ತರಬಾರದು’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿ ಸರ್ವೇ ನಂ.97ರಲ್ಲಿ 1 ಎಕರೆ 30 ಗುಂಟೆ ಜಮೀನನ್ನು ಅರ್ಜಿದಾರ ಪಿ.ಎನ್‌.ರಾಜಣ್ಣ ಹೆಸರಿಗೆ ಖಾತೆ ಮಾಡಿಕೊಡುವಂತೆ ಆದೇಶಿಸಿರುವ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸೋಮವಾರ ಮೇಲ್ಮನವಿ ಸಲ್ಲಿಸಿತು.

ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ ಸರ್ಕಾರಿ ವಕೀಲೆ ಪ್ರಮೋದಿನಿ ಕಿಶನ್‌, ಅರ್ಜಿ ವಿಚಾರಣೆಗೆ ಅಂಗೀಕರಿಸುವಂತೆ ಮನವಿ ಮಾಡಿದರು.

ಆದರೆ, ಇದನ್ನು ತಕ್ಷಣ ಒಪ್ಪದ ದಿನೇಶ್‌ ಮಾಹೇಶ್ವರಿ, ‘ಈ ಅರ್ಜಿಯನ್ನು 407 ದಿನಗಳ ನಂತರ ತಡವಾಗಿ ಸಲ್ಲಿಸುತ್ತಿದ್ದೀರಿ. ಇಷ್ಟೊಂದು ತಡವಾಗಿ ಬಂದು ನಮ್ಮನ್ನು ವಿಚಾರಣೆಗೆ ಅಂಗೀಕರಿಸುವಂತೆ ಕೋರುವ ಬದಲು ನೀವು ಸರ್ಕಾರ ಅಧಿಕಾರಿಗಳಿಗೆ ಯಾಕೆ ಈ ಕುರಿತು ಜಾಗೃತಿ ಮೂಡಿಸುವುದಿಲ್ಲ’ ಎಂದು ಮೌಖಿಕವಾಗಿ ಪ್ರಶ್ನಿಸಿದರು.

’ನಿಮ್ಮ ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ. ಯಾಕೆ ನೀವು ಕಾಲಮಿತಿ ಕಾಯ್ದೆ–1963ಕ್ಕೆ ತಿದ್ದುಪಡಿ ತರಬಾರದು’ ಎಂದೂ ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಮೋದಿನಿ, ‘ಈ ಪ್ರಕರಣದಲ್ಲಿ ಒಂದೆಡೆ ನ್ಯಾಯಾಂಗ ನಿಂದನೆ ಅರ್ಜಿ, ಮತ್ತೊಂದೆಡೆ ಕರ್ನಾಟಕ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದಲ್ಲಿ ಪ್ರತ್ಯೇಕ ವ್ಯಾಜ್ಯ ನಡೆಯುತ್ತಿವೆ. ಹೀಗಾಗಿ ತಡ ಆಗಿದೆ’ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಕಡೆಗೂ ಸಮಜಾಯಿಷಿ ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿವಾದಿ ಪಿ.ಎನ್‌.ರಾಜಣ್ಣಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು ?:

‘ವರ್ತೂರು ಹೋಬಳಿ ಸರ್ವೇ ನಂ.97ರಲ್ಲಿ 1 ಎಕರೆ 30 ಗುಂಟೆ ಜಮೀನಿಗೆ ನಾನು 1979ರ ಅಕ್ಟೋಬರ್ 10ರಿಂದ ಸಾಗುವಳಿ ಚೀಟಿ ಹೊಂದಿದ್ದೇನೆ. ಈ ಜಮೀನಿಗೆ ಮೂರು ತಿಂಗಳ ಒಳಗೆ ಜಮೀನಿನ ಖಾತೆ, ಪಹಣಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿಗಳು 2016ರ ಜುಲೈ 18ರಂದು ತಹಶೀಲ್ದಾರ್‌ಗೆ ಆದೇಶಿಸಿದ್ದರು. ಈ ಆದೇಶ ಪಾಲನೆ ಮಾಡುವಂತೆ ತಹಶೀಲ್ದಾರ್ ನಿರ್ದೇಶಿಸಬೇಕು’ ಎಂದು ಕೋರಿ ರಾಜಣ್ಣ ರಿಟ್‌ ಅರ್ಜಿ ಸಲ್ಲಿಸಿದ್ದರು.  ಈ ರಿಟ್‌ ಅರ್ಜಿ ಮಾನ್ಯ ಮಾಡಿದ್ದ ಏಕಸದಸ್ಯ ನ್ಯಾಯಪೀಠ ವಿಶೇಷ ಜಿಲ್ಲಾಧಿಕಾರಿ ನೀಡಿರುವ ಆದೇಶ ಪಾಲನೆ ಮಾಡುವಂತೆ ತಹಶೀಲ್ದಾರ್‌ಗೆ 2017ರ ಏಪ್ರಿಲ್‌ 18ರಂದು ನಿರ್ದೇಶಿಸಿದ್ದರು.  ಇದೀಗ ಸರ್ಕಾರ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ.

ಬೋಗಸ್‌ ಖಾತೆಗಳ ಸೃಷ್ಟಿ...

‘ಅರ್ಜಿದಾರರು ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಜಮೀನು ಗುಂಡು ತೋಪು’ ಎಂಬುದು ಸರ್ಕಾರದ ವಾದ.

‘ಹಲವು ವ್ಯಾಜ್ಯಗಳನ್ನು ತಗುಲು ಹಾಕಿಕೊಂಡಿರುವ ಇಂತಹ ಪ್ರಕರಣಗಳಲ್ಲಿ ಸಹಜವಾಗಿಯೇ ವಿಳಂಬವಾಗುತ್ತಿದೆ. ಗುಂಡು ತೋಪು, ಕೆರೆ, ಖರಾಬು ಜಮೀನುಗಳನ್ನು ಉಳಿಸಿಕೊಳ್ಳಲು ಸರ್ಕಾರ ಸಾಕಷ್ಟು ಕಷ್ಟಪಡಬೇಕಿದೆ’ ಎಂಬುದು ಸರ್ಕಾರಿ ವಕೀಲೆ ಪ್ರಮೋದಿನಿ ಅವರ ವಿವರಣೆ.

* ನ್ಯಾಯಪೀಠದ ಎದುರು ನಿಂತು ವಿನೀತ ಮನವಿ ಸಲ್ಲಿಸುವ ಬದಲಿಗೆ ನಿಮ್ಮ ಅಧಿಕಾರಿಗಳನ್ನು ಬಡಿದೆಬ್ಬಿಸಿ
–ನ್ಯಾಯಮೂರ್ತಿ, ದಿನೇಶ್ ಮಾಹೇಶ್ವರಿ

ಮುಖ್ಯಾಂಶಗಳು

* 1.30 ಗುಂಟೆಗೆ ಖಾತೆ, ಪಹಣಿ ಕೋರಿದ ಅರ್ಜಿ

* ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ

* 1979ರಿಂದ ಸಾಗುವಳಿ ಚೀಟಿ ಹೊಂದಿದ್ದೇನೆ ಎಂದು ಅರ್ಜಿದಾರರ ವಾದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !